ADVERTISEMENT

ಧಾರವಾಡ| ದಂಡ ವಸೂಲಿಗಿರುವ ಆಸಕ್ತಿ ನಿಯಂತ್ರಣಕ್ಕಿಲ್ಲ: ಸಾರ್ವಜನಿಕರ ಬೇಸರ

ಸಂಚಾರ ಪೊಲೀಸರ ಕಾರ್ಯವೈಖರಿ ಕುರಿತು ಸಾರ್ವಜನಿಕರ ಬೇಸರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 5:59 IST
Last Updated 22 ಫೆಬ್ರುವರಿ 2023, 5:59 IST
ಧಾರವಾಡದ ಜುಬಿಲಿ ವೃತ್ತದ ಸಮೀಪದ ನೋ ಪಾರ್ಕಿಂಗ್ ನಲ್ಲಿ ವಾಹನಗಳು ನಿಂತಿರುವುದು.
ಧಾರವಾಡದ ಜುಬಿಲಿ ವೃತ್ತದ ಸಮೀಪದ ನೋ ಪಾರ್ಕಿಂಗ್ ನಲ್ಲಿ ವಾಹನಗಳು ನಿಂತಿರುವುದು.   

ಧಾರವಾಡ: ಸಂಚಾರ ನಿಯಮ ಉಲ್ಲಂಘಿಸಿದರಿಗೆ ದಂಡ ಹಾಕುವಲ್ಲಿ ಇರುವ ಆಸಕ್ತಿ, ವಾಹನಗಳ ದಟ್ಟಣೆ ನಿಯಂತ್ರಣ, ನಿಯಮಗಳ ಪಾಲನೆ, ರಸ್ತೆ ಸಂಚಾರದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇತರೆ ಕಾರ್ಯಗಳ ಬಗ್ಗೆ ಪೊಲೀಸರಿಗೆ ಇಲ್ಲ ಎಂಬ ಆರೋಪ ವಾಹನ ಸವಾರರಿಂದ ಕೇಳಿಬಂದಿದೆ.

ಟ್ರಾಫಿಕ್ ನಿಯಂತ್ರಣಕ್ಕೆ ಒಬ್ಬರೇ ಇದ್ದರೆ, ದಂಡ ವಿಧಿಸಲು ನಾಲ್ಕೈದು ಪೊಲೀಸರು ಇರುತ್ತಾರೆ. ಸಂಚಾರ ನಿಯಂತ್ರಣ ಒಬ್ಬರೇ ಪೊಲೀಸರ ಕರ್ತವ್ಯವೋ? ಅಥವಾ ದಂಡ ವಿಧಿಸಲು ನಾಲ್ಕು ಜನ ಪೊಲೀಸರ ಅವಶ್ಯಕತೆ ಇದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿವೆ.

ಇಲ್ಲಿನ ಟೋಲ್ ನಾಕಾ, ಎನ್‌ಟಿಟಿಎಫ್‌ ವೃತ್ತ, ಕೋರ್ಟ್ ವೃತ್ತ, ಶಿವಾಜಿ ವೃತ್ತ, ಟಿಪ್ಪು ವೃತ್ತ, ತರಕಾರಿ ಮಾರುಕಟ್ಟೆ, ಸುಭಾಸ ರಸ್ತೆ, ಸಿಬಿಟಿ, ಹಳೆ ಡಿಎಸ್‌ಪಿ ವೃತ್ತ, ವಿವೇಕಾನಂದ ವೃತ್ತ, ಹಳೆ ಬಸ್ ನಿಲ್ದಾಣ, ಜುಬಿಲಿ ವೃತ್ತಗಳಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿರುತ್ತದೆ. ಜುಬಿಲಿ ವೃತ್ತ ಹೊರತು ಪಡಿಸಿದರೇ, ಉಳಿದ ಎಲ್ಲ ಸ್ಥಳಗಳಲ್ಲಿಯೂ ಪೊಲೀಸರು ಇದ್ದರೂ, ಸಂಚಾರ ದಟ್ಟಣೆ ನಿಯಂತ್ರಿಸುತ್ತಿಲ್ಲ.

ADVERTISEMENT

‘ನಗರದ ಪ್ರತಿಯೊಂದು ವೃತ್ತಗಳ ಸಿಗ್ನಲ್‌ಗಳ ಬಳಿ ಅಳವಡಿಸಿರುವ ಚೌಕಿಗಳಲ್ಲಿ ಪೊಲೀಸರು ಇರುವುದಿಲ್ಲ. ಕೆಲವೆಡೆ ಪೊಲೀಸರು ಮೊಬೈಲ್‌ ಫೋನ್‌ಗಳಲ್ಲೇ ಹೆಚ್ಚು ಮಗ್ನರಾಗಿರುತ್ತಾರೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಮೇಲಾಧಿಕಾರಿಗಳು ಠಾಣೆಯಿಂದ ಹೊರ ಬರುವುದು, ಗಸ್ತು ತಿರುಗುವುದು ಅಪರೂಪ. ಹೀಗಾಗಿ, ಸಂಚಾರ ನಿಯಮ ಗಾಳಿಗೆ ತೂರುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಸ್ಥಳೀಯ ನಿವಾಸಿ ಪಂಚಲಿಂಗಪ್ಪ ಹೇಳಿದರು.

ನಗರ ಬಸ್ ನಿಲ್ದಾಣ(ಸಿಬಿಟಿ)ದಲ್ಲಿ ಬಸ್‌ಗಳಿಗಿಂತ ಆಟೋಗಳು ನಿಲ್ಲುವುದೇ ಹೆಚ್ಚು. ಎಲ್ಲೆಂದೆರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುವುದು, ಅಡ್ಡಾದಿಡ್ಡಿಯಾಗಿ ಚಲಾಯಿಸುವುದಂತೂ ಮೀತಿಮೀರಿದೆ. ಪೊಲೀಸರು ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡದೇ ಇರುವುದರಿಂದ ನಿತ್ಯವೂ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.

‘ನೋ ಪಾರ್ಕಿಂಗ್’ ಫಲಕ ಇದ್ದರೂ, ಅಲ್ಲಿಯೇ ವಾಹನ ನಿಲುಗಡೆ ಮಾಡಲಾಗಿರುತ್ತದೆ. ಎನ್‌ಟಿಟಿಎಫ್‌, ಟೋಲ್‌ನಾಕಾ, ಶಿವಾಜಿ ವೃತ್ತ, ಸುಭಾಸ ರಸ್ತೆ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಇದೇ ಪರಿಸ್ಥಿತಿ ಇದೆ. ನಗರ ವ್ಯಾಪ್ತಿಯೊಳಗಿನ ವೇಗ ಮಿತಿ, ರಸ್ತೆ ಉಬ್ಬು ಸೂಚಕ ಫಲಕ ಇತ್ಯಾದಿ ಮಹತ್ವ ಮಾಹಿತಿ ಇರಬೇಕು ಎಂಬ ನಿಯಮವಿದೆ. ಆದರೆ ಎಲ್ಲಿಯೂ ಇಂಥ ಫಲಕಗಳು ಕಾಣಸಿಗದು. ಸವಾರರಿಂದ ತಪ್ಪಾಗದಂತೆ ಎಚ್ಚರವಹಿಸಬೇಕಾದ ಪೊಲೀಸರು, ತಪ್ಪೆಸಗುವಂತೆ ಕಾದು, ನಂತರ ದಂಡ ಹಾಕಲು ಮುಂದಾಗುತ್ತಿರುವುದಾದರೂ ಏತಕ್ಕಾಗಿ?’ ಎಂದು ಪ್ರಶ್ನಿಸುತ್ತಿದ್ದಾರೆ.

‘ನಗರದಲ್ಲಿ ಕರ್ಕಶ ಶಬ್ದ ಮಾಡುವ ಹಾಗೂ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಅದೇ ಮಾದರಿಯಲ್ಲಿ ನಗರದಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಆಟೋಗಳು, ಎಲ್ಲೆಂದರಲ್ಲಿ ನಿಲ್ಲುವ ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಬೇಕು. ಜೊತೆಗೆ ಸುಗಮ ಸಂಚಾರಕ್ಕೆ ಕ್ರಮ ಜರುಗಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.