ADVERTISEMENT

ಹುಬ್ಬಳ್ಳಿ | ಸಂಚಾರ ನಿಯಮ ಉಲ್ಲಂಘನೆ: ಆರು ತಿಂಗಳಲ್ಲಿ ₹5.78 ಕೋಟಿ ದಂಡ ವಸೂಲಿ

ಮೋಟಾರ್ ವಾಹನ ಕಾಯ್ದೆ ಪ್ರಕಾರ 87,621 ಪ್ರಕರಣ ದಾಖಲು

ಗೌರಮ್ಮ ಕಟ್ಟಿಮನಿ
Published 3 ಆಗಸ್ಟ್ 2025, 6:12 IST
Last Updated 3 ಆಗಸ್ಟ್ 2025, 6:12 IST
<div class="paragraphs"><p>ಹುಬ್ಬಳ್ಳಿಯ ಕಿಮ್ಸ್‌ ಬಳಿ ನಂಬರ್ ಪ್ಲೇಟ್‌ ಇಲ್ಲದೆ ಸವಾರನೊಬ್ಬ ವಾಹನ ಚಲಾಯಿಸಿದ </p></div>

ಹುಬ್ಬಳ್ಳಿಯ ಕಿಮ್ಸ್‌ ಬಳಿ ನಂಬರ್ ಪ್ಲೇಟ್‌ ಇಲ್ಲದೆ ಸವಾರನೊಬ್ಬ ವಾಹನ ಚಲಾಯಿಸಿದ

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ಅವಳಿ ನಗರದಲ್ಲಿ ಜನಸಂಖ್ಯೆ ವೃದ್ಧಿಸುತ್ತಿದ್ದು, ವಾಹನ ದಟ್ಟಣೆಯೂ ಹೆಚ್ಚಾಗಿದೆ. ವಾಹನ ಸಂಚಾರ ನಿಯಮ ಉಲ್ಲಂಘನೆಯೂ ಜಾಸ್ತಿಯಾಗುತ್ತಿದೆ. ಆರು ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ ₹5 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

ADVERTISEMENT

ಅವಳಿ ನಗರದಲ್ಲಿ ಇತ್ತೀಚೆಗೆ ಸರಿ ಇಲ್ಲದ ದೋಷಪೂರಿತ ನೋಂದಣಿ ಫಲಕ (ಡಿಫೆಕ್ಟಿವ್‌ ನಂಬರ್ ಪ್ಲೇಟ್‌) ಅಳವಡಿಸಿಕೊಂಡು ವಾಹನ ಚಲಾಯಿಸಿರುವ ಸಂಖ್ಯೆ ಹೆಚ್ಚಾಗಿದ್ದು, 2025ರ ಜನವರಿಯಿಂದ ಜೂನ್‌ವರೆಗೆ ಸಂಚಾರಿ ಪೊಲೀಸರು ಒಟ್ಟು 1,083 ಪ್ರಕರಣ ದಾಖಲಿಸಿಕೊಂಡು, ₹5,45,800 ದಂಡ ವಸೂಲಿ ಮಾಡಿದ್ದಾರೆ.

ಹುಬ್ಬಳ್ಳಿ ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ 324, ದಕ್ಷಿಣ ಸಂಚಾರ ಠಾಣೆಯಲ್ಲಿ 210, ಪೂರ್ವ ಸಂಚಾರ ಠಾಣೆಯಲ್ಲಿ  132 ಹಾಗೂ ಧಾರವಾಡ ಸಂಚಾರ ಪೊಲೀಸ್‌ ಠಾಣೆಯಲ್ಲಿ 417 ಸೇರಿ 1,083 ಪ್ರಕರಣ ದಾಖಲಾಗಿವೆ.

ಮೋಟಾರ್ ವಾಹನ  ಕಾಯ್ದೆ (ಎಂ.ವಿ ಆ್ಯಕ್ಟ್‌) ಪ್ರಕಾರ ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 87,621 ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹5.78 ಕೋಟಿ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಕಾರ್ಯಾಚರಣೆ ಮೂಲಕ (ಸ್ಪಾಟ್‌ ಫೈನ್‌) ₹ 4.15 ಕೋಟಿ ಮತ್ತು ನ್ಯಾಯಲಯದ ಮೂಲಕ ₹1.63 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಹೆಲ್ಮೆಟ್‌ ಇಲ್ಲದೆ ವಾಹನ ಸವಾರ ಮಾಡಿದವರ ಮೇಲೆ ಅತಿ ಹೆಚ್ಚು 32,355 ಪ್ರಕರಣಗಳು ದಾಖಲಾಗಿದ್ದು ಒಟ್ಟು ₹1.59 ಕೋಟಿ ದಂಡ ವಸೂಲಿ ಮಾಡಲಾಗಿದೆ. ರಾಂಗ್‌ ಪಾರ್ಕಿಂಗ್‌, ಅವ್ಯವಸ್ಥಿತ ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಒಟ್ಟು 9,070 ಪ್ರಕರಣ ದಾಖಲಾಗಿದ್ದು, ₹45 ಲಕ್ಷ ದಂಡ ವಿಧಿಸಲಾಗಿದೆ. ಓವರ್‌ ಸ್ಪೀಡ್‌ ಕುರಿತು 1,903 ಪ್ರಕರಣಗಳು ದಾಖಲಾಗಿದ್ದು ₹18.74 ಲಕ್ಷ ಹಾಗೂ ಮದ್ಯ ಸೇವಿಸಿ ವಾಹನ ಚಲಾಯಿಸಿದ 1,492 ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹1.56 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಎಲ್‌ಇಡಿ ಲೈಟ್‌ ಅಳವಡಿಕೆಗೆ ಸಂಬಂಧಿಸಿದಂತೆ 87 ಪ್ರಕರಣ ದಾಖಲಾಗಿದ್ದು, ₹43,500 ದಂಡ ವಸೂಲಿ ಮಾಡಲಾಗಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಸವಾರರ ಮೇಲೆ 75 ಪ್ರಕರಣ ದಾಖಲಾಗಿವೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಂದ  ಪೊಲೀಸರು ದಂಡ ವಸೂಲಿ ಮಾಡಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಸಂಚಾರ ನಿಯಮ ಪಾಲಿಸುವಂತೆ ಶಾಲೆ–ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಮೋಟಾರ್ ವಾಹನ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು
ರವೀಶ ಸಿ.ಆರ್ ಸಂಚಾರ ಡಿಸಿಪಿ
ತಮ್ಮ ತಮ್ಮ ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಅನೇಕರು ಸಿಗ್ನಲ್‌ಗಳನ್ನು ಲೆಕ್ಕಿಸದೇ ವಾಹನಗಳನ್ನು ಚಲಾಯಿಸುತ್ತಿತ್ತಾರೆ. ಇದರಿಂದ ಅಪಘಾತ ಸಂಭವಿಸಬಹುದು
ವಿಷ್ಣು ಎಂ ಬೈಕ್ ಸವಾರ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.