ADVERTISEMENT

ಪ್ರಯಾಣಿಕರಿಗೆ ಸಹಾಯಕ್ಕೆ ‘ಟ್ರೈನ್ ಕ್ಯಾಪ್ಟನ್’ ನೇಮಕ

ಹುಬ್ಬಳ್ಳಿ ವಿಭಾಗದ ರೈಲುಗಳಲ್ಲಿ ನೇಮಕ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 13:44 IST
Last Updated 9 ಜುಲೈ 2018, 13:44 IST
ಹಂಪಿ ಎಕ್ಸ್‌ಪ್ರೆಸ್ ‘ಟ್ರೈನ್ ಕ್ಯಾಪ್ಟನ್’ ಅವರಿಂದ ಸಹಾಯ ಪಡೆಯುತ್ತಿರುವ ಪ್ರಯಾಣಿಕ.
ಹಂಪಿ ಎಕ್ಸ್‌ಪ್ರೆಸ್ ‘ಟ್ರೈನ್ ಕ್ಯಾಪ್ಟನ್’ ಅವರಿಂದ ಸಹಾಯ ಪಡೆಯುತ್ತಿರುವ ಪ್ರಯಾಣಿಕ.   

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ಪ್ರಯಾಣಿಕರಿಗೆ ಸಹಾಯ ಮಾಡಲು ಹಾಗೂ ಸೌಲಭ್ಯ ಒದಗಿಸಿಕೊಡಲು ರೈಲುಗಳಲ್ಲಿ ‘ಟ್ರೈನ್ ಕ್ಯಾಪ್ಟನ್‌’ಗಳನ್ನು ನೇಮಿಸಲಿದೆ. ಹಂಪಿ ಎಕ್ಸ್‌ಪ್ರೆಸ್‌ ರೈಲಿಗೆ ಈಗಾಗಲೇ ನೇಮಕ ಮಾಡಲಾಗಿದ್ದು, ಇನ್ನೂ 12 ರೈಲುಗಳಲ್ಲಿ ನೇಮಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೌಲಭ್ಯಗಳು ಸಮಪರ್ಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದು ‘ಟ್ರೈನ್ ಕ್ಯಾಪ್ಟನ್‌’ನ ಪ್ರಮುಖ ಕರ್ತವ್ಯವಾಗಿದೆ. ಮೊದಲನೆಯದಾಗಿ ರೈಲಿನಲ್ಲಿ ಸ್ವಚ್ಛತೆ ಇರಬೇಕು. ಹಾಗೆ ಇಲ್ಲದಿದ್ದರೆ ಸಂಬಂಧಿಸಿದವರಿಗೆ ಮಾಹಿತಿ ನೀಡಿ ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಲಿದ್ದಾರೆ. ನೀರು, ದೀಪ, ಶೌಚಾಲಯ, ಚಾರ್ಜರ್‌ ಅಂತಹ ಸೌಲಭ್ಯಗಳನ್ನು ಖಚಿತಪಡಿಸಲಿದ್ದಾರೆ. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ ಕೂಡಲೇ ಅವರು ಸ್ಪಂದಿಸಲಿದ್ದಾರೆ.

ಅವರನ್ನು ಗುರುತಿಸಲು ಅನುಕೂಲವಾಗುವಂತೆ ಸಮವಸ್ತ್ರದ ಮೇಲೆ ಕೆಂಪು ಪಟ್ಟಿ ಇರಲಿದೆ. ಅದರ ಮೇಲೆ ಅವರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ರೈಲ್ವೆ ನಿಲ್ದಾಣದ ನಿಯಂತ್ರಣ ವಿಭಾಗದಲ್ಲಿ ಸಂಬಂಧಿಸಿದ ‘ಟ್ರೈನ್ ಕ್ಯಾಪ್ಟನ್’ ದೂರವಾಣಿ ಸಂಖ್ಯೆ ಸಿಗಲಿದೆ. ಫ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶಿಸುವ ಫಲಕಗಳಲ್ಲಿ ಸಹ ಸಂಖ್ಯೆಯನ್ನು ನೀಡಲಾಗುತ್ತದೆ.

ADVERTISEMENT

ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್, ಅಮರಾವತಿ ಎಕ್ಸ್‌ಪ್ರೆಸ್, ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌, ಹರಿಪ್ರಿಯಾ ಎಕ್ಸ್‌ಪ್ರೆಸ್, ಸಿಕಂದರಾಬಾದ್ ಎಕ್ಸ್‌ಪ್ರೆಸ್, ಗೋಲ್‌ಗುಂಬಜ್ ಎಕ್ಸ್‌ಪ್ರೆಸ್, ಅಜ್ಮೀರ್ ಎಕ್ಸ್‌ಪ್ರೆಸ್, ಚಾಲುಕ್ಯ ಎಕ್ಸ್‌ಪ್ರೆಸ್, ವಾರಣಾಸಿ ಎಕ್ಸ್‌ಪ್ರೆಸ್, ಗೋವಾ ಎಕ್ಸ್‌ಪ್ರೆಸ್, ಮುಂಬೈ ಗದಗ್ ಎಕ್ಸ್‌ಪ್ರೆಸ್ ರೈಲುಗಳಿಗೆ ಸಹ ‘ಟ್ರೈನ್ ಕ್ಯಾಪ್ಟನ್’ಗಳನ್ನು ನೇಮಕ ಮಾಡಲಾಗುತ್ತದೆ.

ಪ್ರಯಾಣಿಕ ಸ್ನೇಹಿ ಕ್ರಮವಾಗಿ ‘ಟ್ರೈನ್ ಕ್ಯಾಪ್ಟನ್’ಗಳನ್ನು ನೇಮಕ ಮಾಡಲಾಗುತ್ತದೆ. ಇದರಿಂದಾಗಿ ಜನರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.