ADVERTISEMENT

ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌ ವರ್ಗಾವಣೆ

ಹಲ್ಲೆ ಆರೋಪ: ವಿಶ್ವ ಹಿಂದೂ ಪರಿಷತ್ ಒತ್ತಡಕ್ಕೆ ಮಣಿದ ಪೊಲೀಸ್‌ ಇಲಾಖೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 1:32 IST
Last Updated 16 ಜೂನ್ 2022, 1:32 IST
ಇನ್‌ಸ್ಪೆಕ್ಟರ್ ಮಹಾಂತೇಶ ಹೂಳಿ
ಇನ್‌ಸ್ಪೆಕ್ಟರ್ ಮಹಾಂತೇಶ ಹೂಳಿ   

ಹುಬ್ಬಳ್ಳಿ: ಹಿಂದೂ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್‌ ಪ್ರತಿಭಟನೆಗೆ ಮಣಿದ ಹು–ಧಾ ಪೊಲೀಸ್‌ ಕಮಿಷನರೇಟ್‌, ವಿದ್ಯಾನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹಾಂತೇಶ ಹೂಳಿ ಮತ್ತು ಕಾನ್‌ಸ್ಟೆಬಲ್‌ ಕೃಷ್ಣಾ ಮೋಟೆಬೆನ್ನೂರ ಅವರನ್ನು ವರ್ಗಾವಣೆ ಮಾಡಿದೆ.

ಹೂಳಿ ಅವರನ್ನು ನಗರ ಅಪರಾಧ ವಿಭಾಗಕ್ಕೆ(ಸಿಸಿಬಿ) ಮತ್ತು ಕೃಷ್ಣ ಅವರನ್ನು ಹುಬ್ಬಳ್ಳಿ ಉಪನಗರ ಠಾಣೆಗೆ ವರ್ಗಾವಣೆ ಮಾಡಿ ಕಮಿಷನರ್‌ ಲಾಭೂರಾಮ್‌ ಆದೇಶ ಹೊರಡಿಸಿದ್ದಾರೆ.

ಜೂನ್‌ 13ರಂದು ಬೆಳಿಗ್ಗೆ ಕಿಮ್ಸ್‌ ವಸತಿ ಗೃಹದ ಮೂರು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿತ್ತು. ಆ ಪೈಕಿ, ಹಿಂದೂ ಕಾರ್ಯಕರ್ತ ಮಲ್ಲಿಕಾರ್ಜುನ ಸತ್ತಿಗೇರಿ ಅವರ ಸಹೋದರ ಶಿವಾನಂದ ಅವರ ಮನೆಯೂ ಸೇರಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಇನ್‌ಸ್ಪೆಕ್ಟರ್ ಮತ್ತು ಮಲ್ಲಿಕಾರ್ಜುನ ನಡುವೆ ವಾಗ್ವಾದ ನಡೆದಿತ್ತು.

ADVERTISEMENT

ಇದಾದ ನಂತರ, ಪೊಲೀಸರು ಮಲ್ಲಿಕಾರ್ಜುನ ಅವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಪರಿಷತ್‌ ಕಾರ್ಯಕರ್ತರು ಇನ್‌ಸ್ಪೆಕ್ಟರ್‌ ಮತ್ತು ಕಾನ್‌ಸ್ಟೆಬಲ್‌ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದರು. ಕಮಿಷನರ್‌ ಲಾಭೂರಾಮ್‌ ಅವರಿಗೂ ದೂರು ಸಲ್ಲಿಸಿದ್ದರು.

ಆದರೂ, ಪ್ರಕರಣ ದಾಖಲಾಗದಿರುವುದನ್ನು ಖಂಡಿಸಿದ್ದ ಕಾರ್ಯಕರ್ತರು, 14ರಂದು ಪರಿಷತ್‌ ಉತ್ತರ ಕರ್ನಾಟಕ ಭಾಗದ ಪ್ರಾಂತೀಯ ಕಾರ್ಯದರ್ಶಿ ಗೋವರ್ಧನ ರಾವ್‌ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.‘ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಇನ್‌ಸ್ಪೆಕ್ಟರ್‌ಮತ್ತುಕಾನ್‌ಸ್ಟೆಬಲ್‌ ಅಮಾನತು ಅಥವಾ ವರ್ಗಾವಣೆ ಮಾಡಬೇಕು’ ಎಂದು ಪಟ್ಟು ಹಿಡಿದಿದ್ದರು.

ಡಿಸಿಪಿಗಳಾದ ಸಾಹಿಲ್‌ ಬಾಗ್ಲಾ ಮತ್ತು ಗೋಪಾಲ ಬ್ಯಾಕೋಡ್‌ ಸಮ್ಮುಖ
ದಲ್ಲಿ ಠಾಣೆಯಲ್ಲಿ ಸಂಧಾನಕ್ಕೆ ಯತ್ನಿಸಲಾಗಿತ್ತು. ಅದು ವಿಫಲವಾದ ಹಿನ್ನೆಲೆಯಲ್ಲಿ ಕಮಿಷನರ್‌ ಲಾಭೂರಾಮ್‌ ಅವರು, ‘ಸಿಬ್ಬಂದಿಯನ್ನು ವರ್ಗಾವಣೆ ಮಾಡುತ್ತೇವೆ’ ಎಂದು ಸಂಘಟನೆ ಮುಖಂಡರಿಗೆ ಭರವಸೆ ನೀಡಿದ್ದರು. ನಂತರ ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿದ್ದರು.

ಪೊಲೀಸರ ಅಸಮಾಧಾನ

ಸಂಘಟನೆಗಳ ಒತ್ತಡಕ್ಕೆ ಮಣಿದು ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ವರ್ಗಾವಣೆ ಮಾಡಿರುವುದು ಕಮಿಷನರೇಟ್ ವ್ಯಾಪ್ತಿಯ ಪೊಲೀಸರ ಅಸಮಾಧಾನಕ್ಕೆ ಕಾರಣವಾಗಿದೆ.

‘ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪ ಖಂಡಿಸಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು 2021ರ ಅಕ್ಟೋಬರ್‌ 17ರಂದು ನವನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳದಲ್ಲಿದ್ದ ಡಿಸಿಪಿ ಕೆ. ರಾಮರಾಜನ್‌ ಅವರನ್ನು ಪ್ರತಿಭಟನಾನಿರತ ವ್ಯಕ್ತಿಯೊಬ್ಬರು ಅವಾಚ್ಯವಾಗಿ ನಿಂದಿಸಿದ್ದರು. ಪ್ರತಿಯಾಗಿ ಡಿಸಿಪಿ 100 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ, ಡಿಸಿಪಿ ವರ್ಗಾವಣೆಯಾಗಿದ್ದರು. ಆ ಘಟನೆ ನಡೆದು ಒಂಬತ್ತು ತಿಂಗಳ ಬಳಿಕ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲೂ ಅಂತಹದ್ದೇ ಪ್ರಕರಣ ಮರುಕಳಿಸಿದೆ. ಇದು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ನಡೆಯಾಗಿದೆ’ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.