ADVERTISEMENT

ಹುಬ್ಬಳ್ಳಿಯಲ್ಲಿ ನಡೆಯುವ ಅಮಿತ್‌ ಶಾ ಕಾರ್ಯಕ್ರಮಕ್ಕಾಗಿ ಮರಗಳಿಗೆ ಕೊಡಲಿ ಪೆಟ್ಟು

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 12:43 IST
Last Updated 15 ಜನವರಿ 2020, 12:43 IST
   

ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬಗ್ಗೆ ಜನಜಾಗೃತಿ ಮೂಡಿಸಲು ಜ. 18ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಲ್ಲಿಗೆ ಬರಲಿದ್ದು, ಇದಕ್ಕಾಗಿ ನಗರದ ನೆಹರೂ ಮೈದಾನದ ಗಣ್ಯರ ಪ್ರವೇಶ ದ್ವಾರದ ಬಳಿಯಿದ್ದ ಆರು ಅಶೋಕ ಮರಗಳನ್ನು ಕಡಿಯಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಬುಧವಾರ ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಲು ಬಂದಾಗ ಮಾಧ್ಯಮದವರು ಮರಗಳನ್ನು ಕಡಿದಿರುವ ವಿಷಯವನ್ನು ಜೋಶಿ ಅವರ ಗಮನಕ್ಕೆ ತಂದರು.

ತಕ್ಷಣವೇ ಸ್ಥಳಕ್ಕೆ ತೆರಳಿದ ಅವರು ಮರಗಳನ್ನು ಕಡಿದು ಟ್ರಾಕ್ಟರ್‌ನಲ್ಲಿ ತುಂಬಿಕೊಳ್ಳುತ್ತಿದ್ದ ಚಿತ್ರಣ ಕಂಡು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಿದ್ದರೂ ಮರಗಳನ್ನು ಕಡಿಯಬಾರದು. ಇವುಗಳನ್ನು ಕಡಿಯಲು ನಿಮಗೆ ಅನುಮತಿ ಕೊಟ್ಟವರು ಯಾರು’ ಎಂದು ಮರ ಕಡಿಯತ್ತಿದ್ದವರನ್ನು ಪ್ರಶ್ನಿಸಿದರು. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಅವರಿಗೆ ಕರೆ ಮಾಡಿ ‘ಮರಗಳನ್ನು ಕಡಿದವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

ಸ್ಥಳದಲ್ಲಿಯೇ ಇದ್ದ ಪೊಲೀಸರನ್ನೂ ಜೋಶಿ ತರಾಟೆಗೆ ತೆಗೆದುಕೊಂಡು ‘ಮರ ಕಡಿಸಲು ನಿಮಗೆ ಯಾರು ಅನುಮತಿ ಕೊಟ್ಟಿದ್ದರು’ ಎಂದು ಪ್ರಶ್ನಿಸಿದರು. ಪೊಲೀಸ್‌ ಅಧಿಕಾರಿಯೊಬ್ಬರು ‘ಭದ್ರತೆಯ ಕಾರಣಕ್ಕಾಗಿ ಮರದ ಕೊಂಬೆಗಳನ್ನು ಮಾತ್ರ ಕತ್ತರಿಸುವಂತೆ ಹೇಳಿದ್ದೆವು. ಆದರೆ, ಪೂರ್ತಿಯಾಗಿ ಮರಗಳನ್ನು ಕಡಿದಿದ್ದಾರೆ’ ಎಂದರು. ಆಗ ಮತ್ತಷ್ಟು ಕೆಂಡಾಮಂಡಲವಾದ ಜೋಶಿ ‘ಭದ್ರತೆಯ ಕಾರಣವಿದ್ದರೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬಹುದಿತ್ತು’ ಎಂದರು.

ಇದರ ಬಗ್ಗೆ ಸುರೇಶ ಇಟ್ನಾಳ ಅವರನ್ನು ಸಂಪರ್ಕಿಸಿದಾಗ ‘ಮರಗಳನ್ನು ಯಾರು ಕಡಿಯಲು ಹೇಳಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ. ವಲಯ ಸಹಾಯಕ ಆಯುಕ್ತರಿಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.