ADVERTISEMENT

ಅವಳಿ ನಗರ ದೂಳು ಮುಕ್ತ: ಶೆಟ್ಟರ್

₹ 500 ಕೋಟಿ ವಿಶೇಷ ಪ್ಯಾಕೇಜ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:28 IST
Last Updated 19 ಡಿಸೆಂಬರ್ 2019, 9:28 IST
ಹುಬ್ಬಳ್ಳಿಯಲ್ಲಿ ಬುಧವಾರ ಟೆಂಡರ್‌ ಶ್ಯೂರ್‌ ರಸ್ತೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಬುಧವಾರ ಟೆಂಡರ್‌ ಶ್ಯೂರ್‌ ರಸ್ತೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು   

ಹುಬ್ಬಳ್ಳಿ: ಅವಳಿ ನಗರದಲ್ಲಿ ₹150 ಕೋಟಿ ವೆಚ್ಚದಲ್ಲಿ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆಗ ಎರಡೂ ನಗರಗಳು ದೂಳು ಮುಕ್ತವಾಗಲಿವೆ. ಅದೇ ನಮ್ಮ ಗರಿಯಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ಕಾಡಸಿದ್ಧೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಿರುವ ಟೆಂಡರ್‌ ಶ್ಯೂರ್ ರಸ್ತೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡೂ ನಗರಗಳ ಸಮಗ್ರ ಅಭಿವೃದ್ಧಿಗಾಗಿ ₹ 500 ಕೋಟಿ ವಿಶೇಷ ಪ್ಯಾಕೇಜ್‌ ಅನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

₹ 44 ಕೋಟಿ ವೆಚ್ಚದಲ್ಲಿ ಇದೊಂದು ಮಾದರಿ ರಸ್ತೆ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಟೆಂಡರ್‌ ಶ್ಯೂರ್‌ನಡಿ ನಿರ್ಮಿಸಿರುವ ಮೊದಲ ಚತುಷ್ಪತ ರಸ್ತೆಯಾಗಿದೆ. ಇದು ನನ್ನ ಕನಸಿನ ಕೂಸಾಗಿತ್ತು. ಅದಿಂದು ನನಸಾಗಿದೆ ಎಂದರು.

ADVERTISEMENT

ಮಹಾನಗರ ಪಾಲಿಕೆಗೆ ಬರಬೇಕಾದ ₹130 ಕೋಟಿ ಪಿಂಚಣಿ ಹಣವನ್ನು ಹಿಂದಿನ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಯಡಿಯೂರಪ್ಪ ಅವರು ₹ 100 ಕೋಟಿ ಬಿಡುಗಡೆಗೆ ಒಪ್ಪಿದ್ದು, ಈಗಾಗಲೇ ₹ 26 ಕೋಟಿ ಬಿಡುಗಡೆಯಾಗಿದೆ. ಮಾರ್ಚ್‌ ಅಂತ್ಯದೊಳಗೆ ಎಲ್ಲ ಹಣ ಪಾಲಿಕೆಗೆ ದೊರೆಯಲಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಬಂದಿದ್ದರಿಂದಾಗಿ ₹ 20 ಸಾವಿರ ಕೋಟಿ ಹೆಚ್ಚುವರಿ ವೆಚ್ಚ ಮಾಡಬೇಕಾಯಿತು. ಇದರಿಂದಾಗಿ ಅಭಿವೃದ್ಧಿ ವೇಗ ಕಡಿಮೆಯಾಗಿದೆ. ಮುಂದಿನ ಆರು ತಿಂಗಳಲ್ಲಿ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.

ಧಾರವಾಡ ಜಿಲ್ಲೆಗೆ ಸಿಆರ್‌ಎಫ್‌ನಡಿ ₹ 562 ಕೋಟಿ ಅನುದಾನ ಬಂದಿದೆ. ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಪೈಪ್‌ಲೈನ್‌ಗಾಗಿ ರಸ್ತೆ ಅಗೆಯುವಾಗ ಇಲಾಖೆಯ ಅನುಮತಿ ಪಡೆದುಕೊಂಡೇ ರಸ್ತೆ ಅಗೆಯಬೇಕು ಎಂದು ಸಲಹೆ ಮಾಡಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ ಸಚಿವನಾಗಿದ್ದಾಗ ಅನುಮತಿ ನೀಡಿದ್ದೆ. ಈಗ ಶಾಸಕನೂ ಆಗಿಲ್ಲ. ಆದರೂ, ರಾಜಕೀಯ ಎದುರಾಳಿಯಾಗಿರುವ ನನ್ನನ್ನು ಕರೆದಿರುವುದು ಆರೋಗ್ಯಕರ ಬೆಳವಣಿಗೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.