
ಹುಬ್ಬಳ್ಳಿ: ಅವಳಿ ನಗರದಲ್ಲಿ ಅಳವಡಿಸಿರುವ ಅನಧಿಕೃತ ಫೆಕ್ಸ್, ಬ್ಯಾನರ್‌ಗಳ ತೆರವು ಕಾರ್ಯಾಚರಣೆ ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಯಿಂದ ಶನಿವಾರ ನಡೆಯಿತು.
ಪಾಲಿಕೆಯ ಎಲ್ಲ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಯಿತು. ಸಿಬ್ಬಂದಿ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿದರು.
‘ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳನ್ನು ಅಳವಡಿಸಿದ್ದರಿಂದ ನಗರದ ಸೌಂದರ್ಯ ಹಾಳಾಗಿತ್ತು. ಅಲ್ಲದೆ, ಪಾಲಿಕೆಗೆ ಬರುವ ಆದಾಯಕ್ಕೂ ಹೊಡೆತವಾಗಿತ್ತು. ಹೀಗಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು.
‘ಕೆಲವು ಕಡೆ ಸಿಗ್ನಲ್, ಪಾದಚಾರಿ ಮಾರ್ಗ, ಗಿಡ ಮರಗಳು, ವಿದ್ಯುತ್ ಕಂಬಗಳು, ರಸ್ತೆ ಬದಿಯ ಕಟ್ಟಡಗಳ ಮೇಲೆ ಸಾರ್ವಜನಿಕರಿಗೆ ಅಪಾಯಕಾರಿಯಾಗುವ ರೀತಿಯಲ್ಲಿ ಅಳವಡಿಸಿದ್ದರು. ಈಗ ತೆರವುಗೊಳಿಸಲಾಗಿದ್ದು, ಮತ್ತೆ ಹಾಕಿದರೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುವುದು. ಪ್ರತಿ ಎರಡು, ಮೂರು ದಿನಗಳಿಗೊಮ್ಮೆ ಕಾರ್ಯಾಚರಣೆ ನಡೆಯಲಿದೆ’ ಎಂದರು.
‘ಜಾಹೀರಾತು ಪ್ರದರ್ಶನಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಅಡಿ ಅವಳಿ ನಗರದಲ್ಲಿ 32 ಕಡೆ ಡಿಜಿಟಲ್ ಡಿಸ್‌ಪ್ಲೇ ಫಲಕಗಳನ್ನು ಅಳವಡಿಸಲಾಗಿದೆ. ಅವುಗಳ ನಿರ್ವಹಣೆಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಅಲ್ಲಿಯೂ ಸಾರ್ವಜನಿಕರು, ವ್ಯಾಪಾರಿಗಳು, ಉದ್ಯಮಿಗಳು ಜಾಹೀರಾತು ಪ್ರದರ್ಶಿಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.