ADVERTISEMENT

ಏಕರೂಪ ಪಿಂಚಣಿ ಜಾರಿ: ಮುಖ್ಯಮಂತ್ರಿಗೆ ಹೊರಟ್ಟಿ ಪತ್ರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:29 IST
Last Updated 1 ಅಕ್ಟೋಬರ್ 2020, 16:29 IST

ಹುಬ್ಬಳ್ಳಿ: ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆಗುರುವಾರ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ 2006ರ ಏಪ್ರಿಲ್‌ 1ರಿಂದ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದನ್ನು ವಿರೋಧಿಸಿ, ಏಕರೂಪದ ಪಿಂಚಣಿ ವ್ಯವಸ್ಥೆ ಜಾರಿಗಾಗಿ ನೌಕರರು ಹೋರಾಟಗಳನ್ನು ಮಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ತಾವು ಕೂಡ ನೌಕರರನ್ನು ಭೇಟಿ ಮಾಡಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನೌಕರರ ಹೋರಾಟಕ್ಕೆ ಮಣಿದಿದ್ದ ಹಿಂದಿನ ಸರ್ಕಾರ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ವರದಿ ನೀಡಲು ಅಧಿಕಾರಿಗಳ ಸಮಿತಿ ರಚಿಸಿತ್ತು. 2019ರಲ್ಲಿಸಮಿತಿಯ ಒಂದು ಸಭೆ ನಡೆದಿದ್ದು ಬಿಟ್ಟರೆ, ಮತ್ಯಾವುದೇ ಪ್ರಗತಿಯಾಗಿಲ್ಲದಿರುವುದು ನೋವಿನ ಸಂಗತಿ.

ADVERTISEMENT

ರಾಜ್ಯದಲ್ಲಿ 7.41 ಲಕ್ಷ ಸರ್ಕಾರಿ ನೌಕರರಿದ್ದು, ಈ ಪೈಕಿ 5.12 ಲಕ್ಷ ಮಂದಿ ಹಳೇ ಪಿಂಚಣಿ ಯೋಜನೆಯಲ್ಲಿದ್ದಾರೆ. 2.28 ಲಕ್ಷ ನೌಕರರು ಹೊಸ ಪಿಂಚಣಿ ವ್ಯವಸ್ಥೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸದೆ, ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಹಾಗಾಗಿ, ತಾವು ಹಿಂದೆ ನೀಡಿದ ಭರವಸೆಯಂತೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಸ್ವಾಗತ:

ಕರ್ತವ್ಯದ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ತುತ್ತಾಗುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಉಚಿತ ಚಿಕಿತ್ಸೆ ಮತ್ತು ಮೃತಪಟ್ಟರೆ ₹30 ಲಕ್ಷ ಪರಿಹಾರ ನೀಡುವ ಸರ್ಕಾರದ ಆದೇಶವನ್ನು ಹೊರಟ್ಟಿ ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.