ADVERTISEMENT

ಅಭಿವೃದ್ಧಿಯಲ್ಲಿ ರಾಜಕೀಯ ಮಾಡಲ್ಲ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಜ್ಯದ ವಿವಿಧ ಭಾಗದ 26 ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 4:19 IST
Last Updated 1 ಮಾರ್ಚ್ 2022, 4:19 IST
ಹುಬ್ಬಳ್ಳಿಯಲ್ಲಿ ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದ ವಿವಿಧ ಭಾಗಗಳಲ್ಲಿ 26 ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆ ಹಾಗೂ  ವಿವಿಧ ಹೆದ್ದಾರಿಗಳ ಲೋಕಾರ್ಪಣೆಗೆ ರಿಮೋಟ್ ಮೂಲಕ ಚಾಲನೆ ನೀಡಿದರು. ಸಚಿವರಾದ ಬಿ. ಶ್ರೀರಾಮುಲು, ಸಿ.ಸಿ. ಪಾಟೀಲ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎ. ನಾರಾಯಣಸ್ವಾಮಿ, ಶಾಸಕ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ಶಿವಕುಮಾರ ಉದಾಸಿ ಇದ್ದಾರೆ– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದ ವಿವಿಧ ಭಾಗಗಳಲ್ಲಿ 26 ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆ ಹಾಗೂ  ವಿವಿಧ ಹೆದ್ದಾರಿಗಳ ಲೋಕಾರ್ಪಣೆಗೆ ರಿಮೋಟ್ ಮೂಲಕ ಚಾಲನೆ ನೀಡಿದರು. ಸಚಿವರಾದ ಬಿ. ಶ್ರೀರಾಮುಲು, ಸಿ.ಸಿ. ಪಾಟೀಲ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎ. ನಾರಾಯಣಸ್ವಾಮಿ, ಶಾಸಕ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ಶಿವಕುಮಾರ ಉದಾಸಿ ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ದೇಶದ ಅಭಿವೃದ್ಧಿಗೆ ನಮ್ಮ ಆದ್ಯತೆ. ಉದ್ಯಮ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದ ಯೋಜನೆಗಳನ್ನು ಮೂರು ಪ್ಯಾಕೇಜುಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಕೇಂದ್ರ ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ₹12,795 ಕೋಟಿ ವೆಚ್ಚದ 925 ಕಿ.ಮೀ. ಉದ್ದದ 26 ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಪ್ರಗತಿಗೆ ಕೇಂದ್ರವು ಸಂಪೂರ್ಣ ಸಹಕಾರ ನೀಡಲಿದೆ. ಹಾಗಾಗಿ, ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಕಾಮಗಾರಿಗಳ ಆರಂಭಕ್ಕೆ ಅರಣ್ಯ ಹಾಗೂ ಪರಿಸರ ಇಲಾಖೆಗಳಿಂದ ಶೀಘ್ರ ಒಪ್ಪಿಗೆ ಕೊಡಿಸಬೇಕು. 2024ರ ಅಂತ್ಯದೊಳಗೆ ಕರ್ನಾಟಕದ ರಸ್ತೆಗಳನ್ನು ಅಮೆರಿಕದ ರಸ್ತೆಗಳ ಗುಣಮಟ್ಟಕ್ಕೆ ಸಮವಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ನೀಡಬೇಕು’ ಎಂದರು.

ADVERTISEMENT

‘ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಗತ್ಯವಿರುವೆಡೆ ಬೈಪಾಸ್, ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಭಾರತ ಮಾಲಾ–2 ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ ರಸ್ತೆ ಕಾಮಗಾರಿಗಳಿಗೆ ಇಬ್ಬರೂ 50:50 ಅನುಪಾತದಲ್ಲಿ ಅನುದಾನ ಒದಗಿಸಬೇಕು. ಇದಕ್ಕೆ ಪೂರಕವಾದ ಸೂತ್ರವೊಂದನ್ನು ಮುಂದಿಟ್ಟಿರುವ ಗಡ್ಕರಿ ಅವರು, ಭೂ ಸ್ವಾಧೀನಕ್ಕೆ ಶೇ 25 ಅನುದಾನ ನೀಡಿ ಎಂದಿದ್ದಾರೆ’ ಎಂದರು.

‘ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳ ಮೇಲಿನ ಕೇಂದ್ರದ ಪಾಲಿನ ಜಿಎಸ್‌ಟಿ ತೆರಿಗೆಯಲ್ಲಿ ವಿನಾಯಿತಿ ಹಾಗೂ ಜಲ್ಲಿ, ಉಸುಕು ಮತ್ತಿತರ ಸಣ್ಣ ಖನಿಜಗಳ ಮೇಲಿನ ರಾಜಸ್ವಕ್ಕೆ ವಿನಾಯಿತಿ ನೀಡಲು ಸೂಚಿಸಿದ್ದಾರೆ. ಇದರಿಂದ ನಾವು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. ರಸ್ತೆಗಳು ಅಭಿವೃದ್ಧಿಯಾದರೆ ಬೇರೆ ರೀತಿಯಲ್ಲಿ ರಾಜ್ಯಕ್ಕೆ ತೆರಿಗೆ ಹರಿದು ಬರಲಿದೆ. ಈ ಕುರಿತು ರಾಜ್ಯ ಮತ್ತು ಕೇಂದ್ರದ ನಡುವಿನ ಒಪ್ಪಂದಕ್ಕೆ ಶೀಘ್ರ ಸಹಿ ಮಾಡಲಿದ್ದು, ನವಕರ್ನಾಟಕದಿಂದ ನವಭಾರತ ನಿರ್ಮಾಣದ ಸಂಕಲ್ಪ ಹೊಂದಲಾಗಿದೆ’ ಎಂದು ಹೇಳಿದರು.

ನನೆಗುದಿಗೆ ಬಿದ್ದಿರುವ ರಸ್ತೆ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಹಾಗೂ ಕೆಲ ಹೊಸ ಯೋಜನೆಗಳನ್ನು ಆರಂಭಿಸುವಂತೆ ಗಡ್ಕರಿ ಅವರಿಗೆ ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಹಿಂದಿನವರಿಗೆ ಅಸಾಧ್ಯವಾಗಿದ್ದ ಗಬ್ಬೂರಿನ ಬೈಪಾಸ್ ರಸ್ತೆ ವಿಸ್ತರಣೆಯನ್ನು ಸಾಧ್ಯವಾಗಿಸಿರುವ ಗಡ್ಕರಿ ಅವರು, ನಾಲ್ಕು ಪಥದ ಸರ್ವೀಸ್ ರಸ್ತೆ ಸಹಿತ ದಶಪಥದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಇಲ್ಲಿ ಯಾವುದೇ ಟೋಲ್‌ ಶುಲ್ಕವಿಲ್ಲದೆ ಓಡಾಡಬಹುದು’ ಎಂದರು.

‘‌‌ಗಡ್ಕರಿ ಅವರು ಸಚಿವರಾದ ಬಳಿಕ, ದೇಶದಲ್ಲಿ ನಿತ್ಯ 38 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ 7 ವರ್ಷಗಳಲ್ಲಿ 50 ಸಾವಿರ ಕಿ.ಮೀ.ಗೂ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಸ್ತೆಗಳ ನಿರ್ಮಾಣ ಹಾಗೂ ಅಭಿವೃದ್ಧಿಗಾಗಿ ಗಡ್ಕರಿ ಅವರು, ಏಳು ವರ್ಷಗಳಲ್ಲಿ ₹8,500 ಕೋಟಿ ಅನುದಾನ ಕೊಟ್ಟಿದ್ದಾರೆ’ ಎಂದು ಹೇಳಿದರು.

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿದರು. ಸಂಸದರಾದ ಸಂಗಣ್ಣ ಕರಡಿ, ವೈ. ದೇವೇಂದ್ರಪ್ಪ, ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಸಿ.ಎಂ.‌ ನಿಂಬಣ್ಣವರ, ಅಮೃತ ದೇಸಾಯಿ, ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ‌.‌ ಸಂಕನೂರ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇದ್ದರು.

ಗಡ್ಕರಿ ಕೆಲಸಕ್ಕೆ ಖರ್ಗೆ ಮೆಚ್ಚುಗೆ

‘ಅಭಿವೃದ್ಧಿ ಪರವಾಗಿ ಕೆಲಸ ಮಾಡುವ ಸಚಿವ ನಿತಿನ್ ಗಡ್ಕರಿ ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ. ರಾಜಕೀಯ ಬದಿಗಿಟ್ಟು ಅವರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿರುವೆ. ಮೊದಲ ಬಾರಿಗೆ ಗಡ್ಕರಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದರು.

‘ಯಾವುದೇ ಅಭಿವೃದ್ಧಿ ಕೆಲಸಗಳ ಕುರಿತು ಗಡ್ಕರಿ ಅವರೊಂದಿಗೆ ಪ್ರಸ್ತಾಪಿಸಿದರೆ ತಕ್ಷಣ ಒಪ್ಪಿಗೆ ಕೊಡುತ್ತಾರೆ. ಯೋಜನೆಯೊಂದರ ಪ್ರಸ್ತಾವಕ್ಕೆ ಸಂಬಂಧಿಸಿದಂತೆ, ಹಿಂದೊಮ್ಮೆ ಕಾಂಗ್ರೆಸ್ ಪಕ್ಷದ ಕಚೇರಿಗೂ ಬಂದಿದ್ದರು. ಯಾವ ರಾಜ್ಯದವರು ಎಂದು ನೋಡದೆ ಕೆಲಸ ಮಾಡುವ ಇಂತಹ ವ್ಯಕ್ತಿಗಳು ನನಗೆ ಇಷ್ಟವಾಗುತ್ತಾರೆ. ಅಭಿವೃದ್ದಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಅಂತಹರಿಗೆ ಅವರ ಕ್ಷೇತ್ರದಲ್ಲೇ ಗೌರವ ಸಿಗುವುದಿಲ್ಲ. ಭಾರತ ಮಾಲಾ ಯೋಜನೆಯಡಿ, ರಾಜ್ಯದ ಪ್ರತಿ ಜಿಲ್ಲೆಯ ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸಬೇಕು’ ಎಂದು ಸಲಹೆ ನೀಡಿದರು.

ಲೋಕಾರ್ಪಣೆಗೊಂಡ ರಸ್ತೆಗಳು

ರಾಜ್ಯದ ವಿವಿಧ ಭಾಗದಲ್ಲಿ ನಿರ್ಮಾಣಗೊಂಡ ಒಟ್ಟು 18 ರಸ್ತೆಗಳನ್ನು ಸಚಿವ ಗಡ್ಕರಿ ಹಾಗೂ ಗಣ್ಯರು ಲೋಕಾರ್ಪಣೆ ಮಾಡಿದರು. ಅದರಲ್ಲಿ ಹುಬ್ಬಳ್ಳಿ ಸುತ್ತಮುತ್ತಲಿನ ರಸ್ತೆಗಳ ವಿವರ ಹೀಗಿದೆ.

* ₹2,722 ಕೋಟಿ ವೆಚ್ಚದಲ್ಲಿ ಎನ್‌ಎಚ್‌–67ರಲ್ಲಿ ನಿರ್ಮಿಸಿರುವ 143.72 ಕಿ.ಮೀ. ಉದ್ದದ ನಾಲ್ಕು ಪಥದ ಹುಬ್ಬಳ್ಳಿ–ಹೊಸಪೇಟೆ ರಸ್ತೆ

₹2,821 ಕೋಟಿ ವೆಚ್ಚದಲ್ಲಿ ಎನ್‌ಎಚ್‌–48ರಲ್ಲಿ ನಿರ್ಮಿಸಿರುವ 63.4 ಕಿ.ಮೀ. ಉದ್ದದ ಹಾವೇರಿ–ಹುಬ್ಬಳ್ಳಿ ವಿಭಾಗದ ಆರು ಪಥದ ರಸ್ತೆ

* ₹113.77 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಎನ್‌ಎಚ್‌–218 ಮತ್ತು ಎನ್‌ಎಚ್‌–63ರ 3.8 ಕಿ.ಮೀ. ಉದ್ದದ ಹುಬ್ಬಳ್ಳಿ ನಗರದ ಬೈಪಾಸ್ ರಸ್ತೆ

* ₹71.09 ಕೋಟಿ ವೆಚ್ಚದಲ್ಲಿ ವಿಸ್ತರಣೆ– ಸುಧಾರಣೆ ಕಂಡ ಎನ್‌ಎಚ್‌–4ರ 5.62 ಕಿ.ಮೀ. ಉದ್ದದ ಧಾರವಾಡ ನಗರದ ಜ್ಯುಬಿಲಿ ವೃತ್ತದಿಂದ– ನರೇಂದ್ರ ಬೈಪಾಸ್‌ ರಸ್ತೆ

* ₹291.49 ಕೋಟಿ ವೆಚ್ಚದಲ್ಲಿ ವಿಸ್ತರಣೆಯಾದ ಎನ್‌ಎಚ್‌–218ರ 50.53 ಕಿ.ಮೀ. ಉದ್ದದ ವಿಜಯಪುರ–ಹುಬ್ಬಳ್ಳಿ ರಸ್ತೆ

ಶಂಕುಸ್ಥಾಪನೆಯಾದ ಕಾಮಗಾರಿಗಳು: ₹1,050 ಕೋಟಿ ವೆಚ್ಚದಲ್ಲಿ ಎನ್‌ಎಚ್–48ರ 30.6 ಕಿ.ಮೀ. ಉದ್ದದ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ಅನ್ನು ದಶಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ರಾಜ್ಯದ ವಿವಿಧ ಭಾಗದ ಎಂಟು ರಸ್ತೆಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.