
ಹುಬ್ಬಳ್ಳಿ: ‘ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ 42 ಒಳಪಂಗಡಗಳು ಒಗ್ಗಟ್ಟಾದರೆ ಮಾತ್ರ ಪ್ರಗತಿ ಸಾಧ್ಯ. ಸಮಾಜಕ್ಕೆ ನ್ಯಾಯ ಒದಗಿಸಲು ಚಿತ್ರದುರ್ಗದಲ್ಲಿ ಏಪ್ರಿಲ್‌ನಲ್ಲಿ ಸಮಾವೇಶ ಹಮ್ಮಿಕೊಳ್ಳೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶನಿವಾರ ಇಲ್ಲಿ ಹೇಳಿದರು.
ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಹಿಂದುಳಿದ ವರ್ಗಗಳ ಪ್ರ–ವರ್ಗ 1 ಜನಾಂಗಗಳ ಒಕ್ಕೂಟ ಏರ್ಪಡಿಸಿದ್ದ ರಾಜ್ಯಮಟ್ಟದ ಅಲೆಮಾರಿ, ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವದಲ್ಲಿ ಮಾತನಾಡಿದರು.
‘ಏ.15ರಿಂದ 30ರ ಒಳಗೆ ಸಮಾವೇಶ ನಡೆಸಲು ಸಮಾಜದ ಮುಖಂಡರು ಮುಂದಾಗಬೇಕು. ಮಠ ಸ್ಥಾಪನೆ, ಎಸ್‌ಸಿಗೆ ಸಮುದಾಯದ ಸೇರ್ಪಡೆ ಕುರಿತು ಚರ್ಚಿಸೋಣ. ಹಿಂದುಳಿದ ವರ್ಗಗಳ ಎಲ್ಲ ಮಠಾಧೀಶರನ್ನು ಸಮಾವೇಶಕ್ಕೆ ಆಹ್ವಾನಿಸೋಣ’ ಎಂದು ಸಲಹೆ ಮಾಡಿದರು.
‘ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಪ್ರತಿ ಜಿಲ್ಲೆಯಲ್ಲೂ ಅಲೆಮಾರಿಗಳ ಒಳಪಂಗಡಗಳನ್ನು ಗುರುತಿಸಲು ಪ್ರಯತ್ನಿಸುತ್ತಿದೆ. ಸಮಾಜದ ಸಂಘಟನೆಗಳಿಂದ, ಮುಖಂಡರಿಂದ ಸ್ಪಂದನೆ ಸಿಗುತ್ತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.