ADVERTISEMENT

ಉಪ್ಪಾರ ಯುವ, ನೌಕರರ, ‌ಮಹಿಳಾ ಸಮಾವೇಶ ಸೆ. 18ಕ್ಕೆ

ಬೆಳಗಾವಿ ರೈಲ್ವೆ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 3:55 IST
Last Updated 27 ಆಗಸ್ಟ್ 2022, 3:55 IST

ಹುಬ್ಬಳ್ಳಿ: ‘ಕರ್ನಾಟಕ ಉಪ್ಪಾರ ಮಹಾಸಭಾ ವತಿಯಿಂದ ಉಪ್ಪಾರ ಯುವ, ನೌಕರರ ಸಮಾವೇಶ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮವನ್ನುಬೆಳಗಾವಿಯ ರೈಲ್ವೆ ಸಭಾ ಭವನದಲ್ಲಿ ಸೆ. 18ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ವಿಷ್ಣು ಲಾತೂರ ಹೇಳಿದರು.

‘ಕಾರ್ಯಕ್ರಮದಲ್ಲಿ 2021–22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.ಕಾರ್ಯಕ್ರಮವನ್ನು ಉಪ್ಪಾರ ನಿಗಮದ ಅಧ್ಯಕ್ಷ ಗಿರೀಶ ಉಪ್ಪಾರ ಉದ್ಘಾಟಿಸಲಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಮುದಾಯದ ಶಾಸಕ ಸಿ. ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್,ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ರೀರಾಮುಲು, ಐಪಿಎಸ್ ಅಧಿಕಾರಿ ಗೋಪಾಲ ಬ್ಯಾಕೋಡ ಭಾಗವಹಿಸಲಿದ್ದಾರೆ. ಸಮುದಾಯದ 13 ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.

ADVERTISEMENT

ಎಸ್‌ಸಿ ಅಥವಾ ಎಸ್‌ಟಿಗೆ ಸೇರಿಸಲಿ: ‘ಸದ್ಯ ಪ್ರವರ್ಗ–1ರಲ್ಲಿರುವ ಸಮುದಾಯವು ತೀರಾ ಹಿಂದುಳಿದಿದೆ. ಮೀಸಲಾತಿ ಸರಿಯಾಗಿ ತಲುಪುತ್ತಿಲ್ಲ. ರಾಜ್ಯದಲ್ಲಿ ನಮ್ಮ ಜನಸಂಖ್ಯೆ 50 ಲಕ್ಷಕ್ಕೂ ಹೆಚ್ಚಿದ್ದರೂ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಸರ್ಕಾರದ ಸೂಚನೆ ಮೇರೆಗೆ, ತಜ್ಞರಿಂದ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಅವರ ವರದಿ ಆಧರಿಸಿ, ಸಮುದಾಯವನ್ನು ಎಸ್‌ಸಿ ಅಥವಾ ಎಸ್‌ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಮಹಾಸಭಾದ ಸುಧೀರ ಉಪ್ಪಾರ, ಈಶ್ವರ ಶಿರಕೋಳ, ರಾಮಕೃಷ್ಣ ಬಬ್ಬಲಿ, ರಾಜು ಉಪ್ಪಾರ, ಮಾರುತಿ ಬೆಳವಂಕಿ ಹಾಗೂ ಹನುಮಂತಪ್ಪ ಹಿತ್ತಲಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.