ADVERTISEMENT

ಮಳೆ ಹಾನಿ | ಬಾರದ ಪರಿಹಾರ: ಸಂತ್ರಸ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:03 IST
Last Updated 26 ಜುಲೈ 2025, 6:03 IST
ಉಪ್ಪಿನಬೆಟಗೇರಿಯ ಪಾರ್ಶ್ವನಾಥ ಜೈನ್ ಸಮುದಾಯ ಭವನದಲ್ಲಿ ಶುಕ್ರವಾರ ಗ್ರಾಮಸಭೆ ನಡೆಯಿತು
ಉಪ್ಪಿನಬೆಟಗೇರಿಯ ಪಾರ್ಶ್ವನಾಥ ಜೈನ್ ಸಮುದಾಯ ಭವನದಲ್ಲಿ ಶುಕ್ರವಾರ ಗ್ರಾಮಸಭೆ ನಡೆಯಿತು   

ಉಪ್ಪಿನಬೆಟಗೇರಿ: ‘ಎರಡು ವರ್ಷಗಳ ಹಿಂದೆ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಇನ್ನೂ ಸರಿಯಾಗಿ ದೊರೆತಿಲ್ಲ. ಬಾಡಿಗೆ ಮನ್ಯಾಗ ವಾಸ ಅದೇನಿ. ಹೊಲ ಬಡ್ಡ್ಯಾಗ ಹಾಕೇನಿ, ಪರಿಹಾರ ಯಾವಾಗ ಜಮಾ ಅಕ್ಕೈತ್ರಿ’ ಎಂದು ಮಲ್ಲಪ್ಪ ಮಸೂತಿ ಎಂಬವರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯ ಪಾರ್ಶ್ವನಾಥ ಜೈನ್ ಸಮುದಾಯ ಭವನದಲ್ಲಿ ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಅವರು ಸಮಸ್ಯೆಯನ್ನು ಹೊರಹಾಕಿದರು.

ಇನ್ನೆರಡು ತಿಂಗಳಲ್ಲಿ ಪರಿಹಾರ ಜಮೆ ಆಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ ಅಹ್ಮದ ಮಾಳಗಿಮನಿ ಪ್ರತಿಕ್ರಿಯಿಸಿದರು.

ADVERTISEMENT

ಪರಪ್ಪ ಓಂಕಾರಿ ಮಾತನಾಡಿ, ‘3ನೇ ವಾರ್ಡಿನಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ’ ಎಂದು ದೂರಿದರು. ಇದಕ್ಕೆ ಪಿಡಿಒ ಬಿ.ಎ.ಬಾವಾಕಾನವರ, ‘ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ಸಾರ್ವಜನಿಕರು ಕರ ಪಾವತಿಸಿದರೆ ಮಾತ್ರ ಗ್ರಾಮದ ಅಭಿವೃದ್ಧಿಗೆ ವೇಗ ದೊರಕುತ್ತದೆ’ ಎಂದರು.

ಸೋಮಶೇಖರ ಗೋಡೆಕಟ್ಟಿ, ‘ಸರ್ಕಾರಿ ಜಾಗ ಅತಿಕ್ರಮಣವಾಗಿದ್ದು, ಅಂಗನವಾಡಿ ಸಹಿತ ವಿವಿಧ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಸ್ಥಳ ಇಲ್ಲದಂತಾಗಿದೆ’ ಎಂದರು.

ವಿದ್ಯುತ್, ಆರೋಗ್ಯ, ಶಿಕ್ಷಣ, ಇ–ಸ್ವತ್ತು, ಗರಡಿಮನೆ, 108 ಆಂಬುಲೆನ್ಸ್, ಹಳ್ಳದಲ್ಲಿ ತುಂಬಿದ ಹೂಳು ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದವು.

ರುದ್ರಪ್ಪ ಮಸೂತಿ, ಧಾರವಾಡ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಛಾಯಾ ಹೆಗಡೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಸ್.ಎಂ. ವಿಜಾಪೂರ, ಪಶು ವೈದ್ಯಾಧಿಕಾರಿ ಸುರೇಶ ಹರಕೇರಿ, ಗರಗ ಹೆಚ್ಚುವರಿ ಪಿಎಸ್‌ಐ ಎಫ್.ಎಂ. ಮಂಟೂರ, ಅಮ್ಮಿನಬಾವಿ ತೋಟಗಾರಿಕೆ ಇಲಾಖೆ ಯೋಗೇಂದ್ರ ಕೆ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.