ADVERTISEMENT

ಉಪ್ಪಿನಬೆಟಗೇರಿ: ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 16:36 IST
Last Updated 7 ಆಗಸ್ಟ್ 2023, 16:36 IST
ಉಪ್ಪಿನಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾರಂಭವಾಗುತ್ತಿರುವ ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿಯನ್ನು ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಒ ಸ್ವರೂಪಾ ಟಿ.ಕೆ ಮತ್ತು ಅಧಿಕಾರಿಗಳ ತಂಡದವರು ಸೋಮವಾರ ಪರಿಶೀಲಿಸಿದರು
ಉಪ್ಪಿನಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾರಂಭವಾಗುತ್ತಿರುವ ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿಯನ್ನು ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಒ ಸ್ವರೂಪಾ ಟಿ.ಕೆ ಮತ್ತು ಅಧಿಕಾರಿಗಳ ತಂಡದವರು ಸೋಮವಾರ ಪರಿಶೀಲಿಸಿದರು   

ಉಪ್ಪಿನಬೆಟಗೇರಿ: ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್‌ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ದೊಡ್ಡ ಮಟ್ಟದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಅದರ ಪೂರ್ವ ತಯಾರಿಯನ್ನು  ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಒ ಸ್ವರೂಪಾ ಟಿ.ಕೆ ಸೋಮವಾರ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಸ್ವರೂಪಾ ಟಿ.ಕೆ, ‘ಮೂರು ವರ್ಷದ ಒಳಗಿನ ಮಕ್ಕಳ ಲಾಲನೆ ಪಾಲನೆಗಾಗಿ ಈ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ವಿಶೇಷವಾಗಿ ನರೇಗಾ ಯೋಜನೆಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಈ ಯೋಜನೆಯನ್ನು ಜಾರಿಮಾಡಲಾಗಿದೆ. ಇದರ ನಿರ್ವಹಣೆಗಾಗಿ ಮಹಿಳೆಯೊಬ್ಬರನ್ನು ನೇಮಿಸಲಾಗುತ್ತಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ಆ.10ರಂದು ಕಾರ್ಯಾರಂಭ ಮಾಡಲಿದ್ದು, ಆ.15ರಂದು ಉದ್ಘಾಟನೆಗೊಳ್ಳಲಿವೆ’ ಎಂದರು.

ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ಆಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಗ್ರಾಮ ಪಂಚಾಯ್ತಿ ನೋಡಿಕೊಳ್ಳಬೇಕಾಗಿದ್ದು, ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆಗೊಳ್ಳುತ್ತದೆ. ಕೊಠಡಿಯ ವ್ಯವ್ಯಸ್ಥೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಆಡಳಿತ, ಈಗಾಗಲೇ ಸುಸಜ್ಜಿತ ಕೊಠಡಿಯ ವ್ಯವಸ್ಥೆ ಮಾಡಲಾಗಿದ್ದು, ಅವಶ್ಯವಿರುವ ಎಲ್ಲ ಪರಿಕರಗಳನ್ನು ಒದಗಿಸಲಾಗುವುದೆಂದು ಹೇಳಿದರು.

ಈ ವೇಳೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಮೂಗೂನೂರಮಠ, ತಾಲ್ಲೂಕು ಪಂಚಾಯ್ತಿ ಇ.ಒ ಗಂಗಾಧರ ಎ.ಡಿ. ಚಂದ್ರಶೇಖರ ಪೂಜಾರ, ಪಿಡಿಒ ಬಿ.ಎ.ಬಾವಾಕಾನವರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮಸೂತಿ ಹಾಗೂ ಸಿಬ್ಬಂದಿ ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.