ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಹುಬ್ಬಳ್ಳಿ ಹುಡುಗನಿಗೆ 17ನೇ ರ‍್ಯಾಂಕ್‌

ಪ್ರಮೋದ ಜಿ.ಕೆ
Published 7 ಏಪ್ರಿಲ್ 2019, 9:21 IST
Last Updated 7 ಏಪ್ರಿಲ್ 2019, 9:21 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್ ಪಡೆದ ರಾಹುಲ್‌ ಸಂಕನೂರ ಅವರಿಗೆ ಕುಟುಂಬದವರು ಸಿಹಿ ತಿನಿಸಿ ಅಭಿನಂದಿಸಿದರು
ಯುಪಿಎಸ್‌ಸಿ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್ ಪಡೆದ ರಾಹುಲ್‌ ಸಂಕನೂರ ಅವರಿಗೆ ಕುಟುಂಬದವರು ಸಿಹಿ ತಿನಿಸಿ ಅಭಿನಂದಿಸಿದರು   

ಹುಬ್ಬಳ್ಳಿ: ‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸಲ ಯಶಸ್ಸು ಸಿಗದಿದ್ದಾಗ ಅನೇಕರು ಈ ಪರೀಕ್ಷೆ ನಮಗಲ್ಲ ಎಂದು ಕೈ ಚೆಲ್ಲುತ್ತಾರೆ. ಹಾಗೆ ಮಾಡಿದರೆ ಯಾವತ್ತೂ ಗೆಲುವು ಸಾಧ್ಯವಾಗುವುದಿಲ್ಲ. ಒಂದೇ ದಿನ 100 ಮೀಟರ್ ಓಡಿ ನನ್ನ ಹೋರಾಟ ಇಷ್ಟೇ ಎಂದು ಸುಮ್ಮನಾಗುವ ಬದಲು ಮ್ಯಾರಥಾನ್‌ ರೀತಿಯ ನಿರಂತರ ಪ್ರಯತ್ನ ಮಾಡುತ್ತಲೇ ಇರಬೇಕು...’

ಯುಪಿಎಸ್‌ಸಿ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್‌ ಪಡೆದ ಹುಬ್ಬಳ್ಳಿಯ ರಾಹುಲ್‌ ಸಂಕನೂರ ಅವರ ಅನುಭವದ ಮಾತುಗಳು ಇವು. ರಾಹುಲ್‌ ಮೂಲತಃ ರೋಣ ತಾಲ್ಲೂಕಿನ ನಿಡಗುಂದಿ ಗ್ರಾಮದವರು. ರಾಹುಲ್‌ ತಂದೆ ಶರಣಪ್ಪ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತಿಯಾಗಿದ್ದಾರೆ. ತಾಯಿ ಸವಿತಾ ಸಂಕನೂರ.

ಶುಕ್ರವಾರ ರಾತ್ರಿ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಹುಲ್‌ ಅವರ ಹುಬ್ಬಳ್ಳಿಯ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಪೋಷಕರು ಪ್ರವಾಸದಲ್ಲಿದ್ದರು. ಕುಟುಂಬದ ಉಳಿದ ಸದಸ್ಯರು ರಾಹುಲ್‌ಗೆ ಸಿಹಿ ತಿನಿಸಿ ಸಂಭ್ರಮಿಸಿದರು. ರಾಹುಲ್‌ ಅವರನ್ನು ‘ಪ್ರಜಾವಾಣಿ’ ಸಂದರ್ಶಿಸಿದ ವಿವರ ಇಲ್ಲಿದೆ.

ADVERTISEMENT

* ಗುರಿ ತಲುಪಿದ ಖುಷಿಯಲ್ಲಿದ್ದೀರಿ. ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂಬುದು ಐದು ವರ್ಷಗಳ ಹಿಂದಿನ ಕನಸು. ನಿರಂತರ ಪ್ರಯತ್ನ ಮಾಡಿದ್ದರಿಂದ ಯಶಸ್ಸು ಲಭಿಸಿದೆ. ಇದಕ್ಕೆ ನನ್ನ ಪೋಷಕರು ಹಾಗೂ ಸ್ನೇಹಿತರ ಬೆಂಬಲ ಕಾರಣ. ಸಮಾಜ ಸೇವೆ ಮಾಡಬೇಕು ಎನ್ನುವ ಆಸೆಗೆ ಈಗ ಅವಕಾಶ ಲಭಿಸಿದೆ.

* ಯುಪಿಎಸ್‌ಸಿ ಪರೀಕ್ಷೆ ನಿಮ್ಮ ಕನಸಾಗಿತ್ತೇ?

ಇಂಥದ್ದೇ ಮಾಡಬೇಕು ಎನ್ನುವ ಸ್ಪಷ್ಟ ಗುರಿ ಇರಲಿಲ್ಲ. ಸೇವಾ ಮಾಡಬೇಕೆಂಬ ಮನೋಭಾವವಿತ್ತು. ಸಾಮಾಜಿಕ ಸೇವೆಗೆ ಅನುಕೂಲವಾಗುವ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು.

* ಈ ಸಾಧನೆಗೆ ಕಾರಣವಾದ ಅಂಶಗಳೇನು?

ನಾಲ್ಕರಿಂದ ಎಂಟನೇ ತರಗತಿವರೆಗೆ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಓದಿದ್ದೇನೆ. ಅಲ್ಲಿನ ಜನರ ಪರೋಪಕಾರಿ ಮನೋಭಾವ, ಸ್ವಾಮಿ ವಿವೇಕಾನಂದರು ಮತ್ತು ಪರಮಹಂಸರ ವಿಚಾರ ಧಾರೆಗಳಿಂದ ಪ್ರಭಾವಿತಗೊಂಡಿದ್ದೇನೆ. ಗೆಲ್ಲುವ ತನಕ ವಿಶ್ರಮಿಸದಿರು ಎನ್ನುವ ಮಾತೇ ಸ್ಫೂರ್ತಿಯಾಯಿತು. ಮೈಸೂರಿನಲ್ಲಿ ಕಳೆದ ದಿನಗಳು ಬದುಕಿಗೆ ತಿರುವು ನೀಡಿದವು.

* ಪರೀಕ್ಷೆಗೆ ತಯಾರಿ ಹೇಗಿತ್ತು?

ಈಗಿನ ಪರೀಕ್ಷೆ ಸಾಕಷ್ಟು ಸ್ಪರ್ಧಾತ್ಮಕವಾಗಿದೆ. ನಿರಂತರ ನಿಯತಕಾಲಿಕೆ, ಪತ್ರಿಕೆ ಓದಬೇಕು. ಮೊದಲ ಸಲ ದೆಹಲಿಗೆ ಹೋದಾಗ ಅಲ್ಲಿ ಹೊಸ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಆಗುತ್ತಿರಲಿಲ್ಲ. ಬೆಂಗಳೂರಿಗೆ ಮರಳಿದ ಬಳಿಕ ಮಾತನಾಡುವುದನ್ನು ಕಲಿತುಕೊಂಡೆ. ದೆಹಲಿಯಲ್ಲಿ ಒಂದು ವರ್ಷ ವಾಜೀರಾಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೇನೆ. ಅವರು ಬೇಸಿಕ್‌ ತಂತ್ರಗಳನ್ನು ಹೇಳಿಕೊಡುತ್ತಾರೆ. ಯಶಸ್ಸಿಗಾಗಿ ನಾವು ಕಠಿಣ ಪರಿಶ್ರಮ ಪಡಲೇಬೇಕು.

ಈಗ ಸಾಕಷ್ಟು ತರಬೇತಿ ಕೇಂದ್ರಗಳು ಇವೆ. ಹಳ್ಳಿಯಲ್ಲಿದ್ದರೂ ಅಂಗೈಯಲ್ಲಿಯೇ ಇಂಟರ್‌ನೆಟ್‌ ಸಿಗುತ್ತದೆ. ಆದ್ದರಿಂದ ಯಾವುದನ್ನು ಓದಬೇಕು, ಯಾವುದನ್ನು ಓದಬಾರದು ಎಂಬುದು ಗೊತ್ತಿರಬೇಕು.

* ದಿನಕ್ಕೆ ಎಷ್ಟು ಗಂಟೆ ಓದಿದ್ದೀರಿ?

ದಿನಕ್ಕೆ ಇಂತಿಷ್ಟೇ ಗಂಟೆ ಓದಬೇಕು ಎಂದು ಸಿದ್ಧಸೂತ್ರ ಹಾಕಿಕೊಂಡರೆ ಆಗುವುದಿಲ್ಲ. ಸಮಯ ಸಿಕ್ಕಾಗಲೆಲ್ಲ ಓದಬೇಕು. ಓದು ಎಂಬುದು ಬದುಕಿನ ಭಾಗವೇ ಆಗಬೇಕು.

* ಹಿಂದಿನ ವೈಫಲ್ಯಗಳು ಈಗ ಗೆಲುವಿಗೆ ಕಾರಣವಾಯಿತೇ?

ವೈಫಲ್ಯಕ್ಕೆ ‌ಏನು ಕಾರಣ ಎಂಬುದನ್ನು ತಿಳಿದುಕೊಳ್ಳದೇ ಹಿಂದಿನ ತಪ್ಪನ್ನು ಪದೇ ಪದೇ ಮಾಡುತ್ತಿದ್ದ ಕಾರಣ ವಿಫಲನಾಗುತ್ತಿದ್ದೆ. ಕೆಟ್ಟ ಬರವಣಿಗೆ ಶೈಲಿಯಿಂದ ಸೋಲುತ್ತಿದ್ದೆ. ಎಷ್ಟೇ ಓದಿದರೂ ಹೇಗೆ ಬರೆಯುತ್ತೇವೆ ಎಂಬುದು ಮುಖ್ಯವಾಗುತ್ತದೆ. ಕೆಲ ಬಾರಿ 20 ಪ್ರಶ್ನೆಗಳಿಗೆ 12ರಿಂದ 14 ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಿದ್ದೆ. ಆದರೆ, ಮೊದಲ ಪ್ರಶ್ನೆಗೆ ಉತ್ತರಿಸುವಾಗ ಇರುವ ಶಕ್ತಿ ಮತ್ತು ತಾಳ್ಮೆ ಕೊನೆಯ ಪ್ರಶ್ನೆಗೆ ಉತ್ತರ ನೀಡುವಾಗಲೂ ಇರಬೇಕು ಎಂಬುದನ್ನು ಕಲಿತು ಯಶಸ್ಸು ಪಡೆದೆ.

* ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯಿದೆ?

ನಾನು ಶಿಕ್ಷಣ ಪಡೆಯುವಾಗ ವಿಶ್ವದಲ್ಲಿಯೇ ಶ್ರೇಷ್ಠವಾದ ಶಿಕ್ಷಕರು ನನಗೆ ಸಿಕ್ಕಿದ್ದಾರೆ. ಗುಣಮಟ್ಟದ ಶಿಕ್ಷಣ ಸಿಕ್ಕಿದ್ದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಅದೇ ರೀತಿ ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸಿದೆ.

* ಕುಟುಂಬದ ಸಹಕಾರದ ಬಗ್ಗೆ ಹೇಳಿ?

ಪರೀಕ್ಷೆಗೆ ತಯಾರಿ ನಡೆಸುವಾಗ ನನಗೆ ಎಷ್ಟು ಕಷ್ಟವಾಗುತ್ತಿತ್ತೋ, ಕುಟುಂಬದವರು ಕೂಡ ಅಷ್ಟೇ ಕಷ್ಟಪಟ್ಟಿದ್ದಾರೆ. ನನ್ನ ಪೋಷಕರು ಮಾನಸಿಕವಾಗಿ ನನ್ನನ್ನು ಗಟ್ಟಿಗೊಳಿಸಿದ್ದರು. ನನ್ನ ಮೇಲೆ ಭರವಸೆ ಇಟ್ಟಿದ್ದರು. ಅದನ್ನು ಉಳಿಸಿಕೊಂಡ ಹೆಮ್ಮೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.