ADVERTISEMENT

ಕುಂದಗೋಳ | ಯೂರಿಯಾ ಕೊರತೆ: ರೈತರು ಹೈರಾಣು

ಊರಿಂದ ಊರಿಗೆ ಅಲೆದಾಟ: ತೇವಾಂಶ ಹೆಚ್ಚಳದಿಂದ ಬೆಳೆಗಳ ಬೆಳವಣಿಗೆ ಕುಂಠಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:03 IST
Last Updated 24 ಜುಲೈ 2025, 4:03 IST
ಕುಂದಗೋಳ ಪಟ್ಟಣದ ಡಿ.ಪಿ.ಪಿ ಸೂಸೈಟಿಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಸರದಿಯಲ್ಲಿ ಕಾಯುತ್ತಿದ್ದ ರೈತರು
ಕುಂದಗೋಳ ಪಟ್ಟಣದ ಡಿ.ಪಿ.ಪಿ ಸೂಸೈಟಿಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಸರದಿಯಲ್ಲಿ ಕಾಯುತ್ತಿದ್ದ ರೈತರು   
ಗೊಬ್ಬರದ ಜೊತೆ ದ್ರವ ರೂಪದ ನ್ಯಾನೊ ಯೂರಿಯಾ ಲಿಂಕ್ | ನ್ಯಾನೊ ಯೂರಿಯಾ ಸಿಂಪಡಣೆ ಹೆಚ್ಚು ವೆಚ್ಚದಾಯಕ

ಕುಂದಗೋಳ: ಮುಂಗಾರು ಹಂಗಾಮಿಗೆ ಬಿತ್ತಿ, ಬೆಳೆ ಆರೈಕೆ ಮಾಡಿದ ತಾಲ್ಲೂಕಿನ ರೈತರು ಫಸಲು ಕೈ ಸೇರುವ ಮುನ್ನವೇ ಬೇಸತ್ತು ಹೋಗುತ್ತಿದ್ದಾರೆ. ಬೆಳೆಗೆ ಬೇಕಾದ ಯೂರಿಯಾ ಗೊಬ್ಬರ ಸಿಗದೆ ಚಿಂತಿತರಾಗಿದ್ದಾರೆ.

ಜಿಟಿಜಿಟಿ ಮಳೆ, ಭೂಮಿಯಲ್ಲಿ ಹೆಚ್ಚಾದ ತೇವಾಂಶದಿಂದ ಗೋವಿನಜೋಳ, ಸೋಯಾಬೀನ್, ಹತ್ತಿ, ಶೇಂಗಾ, ಹೆಸರು ಮತ್ತಿತರ ಬೆಳೆಗಳು ಹಳದಿಯಾಗುತ್ತಿದ್ದು, ಬೆಳವಣಿಗೆ ಕುಂಠಿತವಾಗುತ್ತಿದೆ.

ಸೊಸೈಟಿಯಲ್ಲಿ, ಮಾರಾಟಗಾರರು ಐದು ಯೂರಿಯಾ ಗೊಬ್ಬರ ಚೀಲಗಳ ಜೊತೆ ಲಿಂಕ್ ಮಾಡಿ ಒಂದು ದ್ರವ ರೂಪದ ನ್ಯಾನೊ ಯೂರಿಯಾ ಅಥವಾ 20.20 ದ್ರವ ವಿತರಿಸುತ್ತಿದ್ದಾರೆ. ಇದಕ್ಕೆ‌ ಹೆಚ್ಚುವರಿ ಹಣ ಪಾವತಿಸಬೇಕಿದೆ. ಕೆಲವು ಗೊಬ್ಬರ ವಿತರಕ ಸಂಸ್ಥೆ, ವ್ಯಾಪಾರಸ್ಥರು ನಿಗದಿಗಂತ ಹೆಚ್ಚಿನ ಹಣವನ್ನೂ ಪಡೆಯುತ್ತಿದ್ದಾರೆ. ಪರಿಣಾಮವಾಗಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಊರಿಂದ ಊರಿಗೆ ಅಲೆಯುತ್ತಿದ್ದಾರೆ.

ADVERTISEMENT

‘ರೈತರು ಬಿತ್ತನೆ ಪೂರ್ವದಲ್ಲಿ ಜಿಂಕ್ ಬಳಸದ ಕಾರಣ ಬೆಳೆ ಹಳದಿಯಾಗುತ್ತದೆ. ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೊ ಯೂರಿಯಾ ಅಥವಾ ನೀರಿನಲ್ಲಿ ಕರಗುವ 19.19.19, 12.61.00, 13.40.13 ದ್ರಾವಣವನ್ನು ಪ್ರತಿ ಲೀಟರ್‌ಗೆ 5 ಗ್ರಾಂ ಅಳತೆಯಲ್ಲಿ ಸಿಂಪಡಣೆ ಮಾಡಬಹುದು. ತಾಲ್ಲೂಕಿನಲ್ಲಿ ಜುಲೈ ತಿಂಗಳಿಗೆ 2,352.98 ಟನ್ ಗೊಬ್ಬರಕ್ಕೆ ಬೇಡಿಕೆ ಇದೆ. ಈವರೆಗೆ 1,945 ಟನ್ ಸರಬರಾಜಾಗಿದ್ದು, 84 ಟನ್ ದಾಸ್ತಾನು ಇದೆ’ ಎಂದು ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ ಮಾಹಿತಿ ನಿಡಿದರು.

ಆದರೆ, ಯೂರಿಯಾ ಗೊಬ್ಬರ ಭೂಮಿಗೆ ಹಾಕುವುದಕ್ಕಿಂದ ನ್ಯಾನೊ ಯೂರಿಯಾ ಸಿಂಪಡಣೆ ಹೆಚ್ಚು ವೆಚ್ಚದಾಯಕ ಎಂಬುದು ರೈತರ ವಾದ.

‘ಅತಿಯಾದ ಮಳೆಯಿಂದ ಎರಡೆರಡು ಸಲ ಬಿತ್ತನೆ ಮಾಡಿದ್ದೇವೆ. ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಹಳದಿಯಾಗುತ್ತಿವೆ. ಕೆಲವು ಕಡೆ ಮನಸಿಗೆ ಬಂದ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ದರದಲ್ಲಿ ಗೊಬ್ಬರ ಸಿಕ್ಕರೆ ಅನುಕೂಲ. ಆದರೆ ರೈತರ ಕಷ್ಟ ಕೇಳುವವರೇ ಇಲ್ಲದಾಗಿದೆ’ ಎಂದು ಗುಡೆನಕಟ್ಟಿ ರೈತ ಬಸವರಾಜ ಯೋಗಪ್ಪನವರ ರೈತರ ಸಂಕಷ್ಟವನ್ನು ಹೇಳುತ್ತಾರೆ.

ಕೃಷಿ ಮಾಡಲು ಬೇಕಾಗುವ ಬೀಜ, ಗೊಬ್ಬರ ಸುಲಭವಾಗಿ ಮತ್ತು ಕಡಿಮೆ ದರಕ್ಕೆ ಲಭಿಸಿ ನೆಮ್ಮದಿದಾಯಕ ಕೃಷಿ ಮಾಡವಂಥ ವಾತಾವರಣ ನಿರ್ಮಾಣವಾಗಬೇಕು ಎಂದು‌ ಕುಂದಗೋಳ ರೈತ ಬಸವರಾಜ ಹರವಿ ಅವರ ಆಗ್ರಹ.

ಕುಂದಗೋಳ ತಾಲ್ಲೂಕಿನ ಬೇನಕನಹಳ್ಳಿ ಗ್ರಾಮದ ಹೊಲದಲ್ಲಿ ಹಳದಿಯಾದ ಹೆಸರು ಬೆಳೆ
ಕುಂದಗೋಳ – ಹುಬ್ಬಳ್ಳಿ ಮಾರ್ಗದ ಬದಿಯ ಹೊಲದಲ್ಲಿ ಹಳದಿಯಾದ ಗೋವಿನಜೋಳ
ಖಾಸಗಿ ವ್ಯಾಪಾರಸ್ಥರು ಮಾರಾಟ ಮಾಡುವ ಗೊಬ್ಬರದ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಇರುವುದಿಲ್ಲ. ಹೊರಗಡೆಯ ರೈತರೂ ಗೊಬ್ಬರ ತೆಗೆದುಕೊಂಡು ಹೋಗುವುದರಿಂದ ಕೊರತೆ ಕಾಡುತ್ತಿದೆ
ಭಾರತಿ ಮೆಣಸಿನಕಾಯಿ ತಾಲ್ಲೂಕು ಕೃಷಿ ಸಹಾಯ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.