ADVERTISEMENT

ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಆಗ್ರಹ

ದ್ವೇಷದ ಅಭಿಯಾನ ನಿಲ್ಲಿಸಲು ಪಿಎಫ್‌ಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 15:41 IST
Last Updated 8 ಅಕ್ಟೋಬರ್ 2020, 15:41 IST
ಹುಬ್ಬಳ್ಳಿಯಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರು ಮೆರವಣಿಗೆ ನಡೆಸಿದರು
ಹುಬ್ಬಳ್ಳಿಯಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರು ಮೆರವಣಿಗೆ ನಡೆಸಿದರು   

ಹುಬ್ಬಳ್ಳಿ: ಹಥಾರಸ್‌ನಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆ ಕ್ರೌರ್ಯದ ಪರಮಾವಧಿಯಾಗಿದ್ದು, ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರು ಆಗ್ರಹಿಸಿದರು.

ಗುರುವಾರ ನಗರದ ಅಂಬೇಡ್ಕರ್‌ ವೃತ್ತದಿಂದ ತಹಶೀಲ್ದಾರ್‌ ಕಚೇರಿ ತನಕ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ‘ಯೋಗಿ ಆದಿತ್ಯನಾಥ್‌ ಸರ್ಕಾರವನ್ನು ವಜಾ ಮಾಡಬೇಕು, ಮೃತ ಬಾಲಕಿಯ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ₹ 5 ಕೋಟಿ ಪರಿಹಾರ ನೀಡಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಮಾನವ ವಿರೋಧಿ ಕೃತ್ಯಗಳು ನಡೆಯುತ್ತಲೇ ಇವೆ. ಆದಿತ್ಯನಾತ್‌ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ನೀಡುವ ಆದ್ಯತೆಯನ್ನು ಮನುಷ್ಯರ ರಕ್ಷಣೆಗೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕೆ. ಹೊಸಮನಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಮುಶೆನವರ, ಮುಖಂಡರಾದ ಸದಾನಂದ ಡಂಗನವರ, ಅನಿಲ ಕುಮಾರ ಪಾಟೀಲ, ಶಾಕೀರ್‌ ಸನದಿ, ಸಾಗರ ಹಿರೇಮನಿ, ಕಿರಣ ಮೂಗಬಸವ, ಆನಂದ ಜಾಧವ, ಶಾರೂಕ್‌ ಮುಲ್ಲಾ, ಬಸವರಾಜ ಮೆಣಸಗಿ, ಮೋಹನ್‌ ಹಿರೇಮನಿ, ಅಕ್ಕಮ್ಮ ಕಾಂಬ್ಳಿ ಇದ್ದರು.

ADVERTISEMENT

ಅಭಿಯಾನ ನಿಲ್ಲಿಸಿ: ಉತ್ತರ ಪ್ರದೇಶ ಸರ್ಕಾರವನ್ನು ರಕ್ಷಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಹಥಾರಸ್‌ ಘಟನೆಯನ್ನು ನಮ್ಮ ಸಂಘಟನೆ ಜೊತೆ ತಳುಕು ಹಾಕುತ್ತಿದೆ. ಈ ದ್ವೇಷದ ಅಭಿಯಾನ ನಿಲ್ಲಿಸಬೇಕು ಎಂದು ಪಾ‍ಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಸದಸ್ಯರು ಆಗ್ರಹಿಸಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಘೋಷಣೆ ಕೂಗಿದ ಸದಸ್ಯರು ‘ನಮ್ಮ ಪಕ್ಷ ಈ ನೆಲದ ಕಾನೂನು ಗೌರವಿಸಿಕೊಂಡು ಪ್ರಜಾಸತಾತ್ಮಕ ಹೋರಾಟಗಳಲ್ಲಿ ನಂಬಿಕೆ ಇಟ್ಟುಕೊಂಡು ಬಂದಿದೆ. ಬಿಜೆಪಿ ಸರ್ಕಾರದ ನಿಯಂತ್ರಣದಲ್ಲಿರುವ ತನಿಖಾ ಸಂಸ್ಥೆಗಳು ಕಾಲಕಾಲಕ್ಕೆ ಪಿಎಫ್‌ಐ ಹೆಸರು ಕೆಡಿಸುವ ಕುತಂತ್ರ ಮಾಡಿವೆ ಎಂದು ಆರೋಪಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಖಲೀಕ್‌ ಅಹ್ಮದ್, ಮುಖಂಡರಾದ ಇಜಾದ್‌ ದಿವಾನ್‌ ಅಲಿ, ರಿಯಾಜ್ ಉಪ್ಪಿನ ಬೆಟಗೇರಿ, ವಾಸೀಮ್‌ ಬ್ಯಾಹಟ್ಟಿ, ಶಫಿ ಸವಣೂರು, ಮುಜಾಹಿದ್‌ ಪಿಂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.