ADVERTISEMENT

ಹುಬ್ಬಳ್ಳಿಯ ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:57 IST
Last Updated 11 ಆಗಸ್ಟ್ 2025, 2:57 IST
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಭಾನುವಾರ ವಿದ್ಯಾರ್ಥಿನಿಯರು ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ರೈಲಿನ ಎದುರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಭಾನುವಾರ ವಿದ್ಯಾರ್ಥಿನಿಯರು ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ರೈಲಿನ ಎದುರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ:  ಬೆಳಗಾವಿ–ಬೆಂಗಳೂರು ನಡುವೆ ಸಂಚರಿಸುವ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಭಾನುವಾರ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಗಣ್ಯರು ಸ್ವಾಗತಿಸಿದರು. 

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಬೆಂಗಳೂರು–ಧಾರವಾಡ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಓಡಿಸಿದಾಗ, ಬೆಳಗಾವಿಯವರೆಗೂ ವಿಸ್ತರಿಸಬೇಕು ಎಂಬ ಬೇಡಿಕೆ ಇತ್ತು. ಆದರೆ, ಆ ಸಮಯದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗ ಮೂಲಸೌಕರ್ಯ ಸುಧಾರಿಸಿ ಹೊಸ ರೈಲನ್ನು ಬೆಳಗಾವಿಯವರೆಗೆ ಓಡಿಸಲಾಗುತ್ತಿದೆ’ ಎಂದರು.

‘ವಂದೇ ಭಾರತ್‌ ನೂತನ ರೈಲು ಬೆಳಗಾವಿಯಿಂದ ಬೆಳಿಗ್ಗೆ 5.20ಕ್ಕೆ ಹೊರಟು, ಹುಬ್ಬಳ್ಳಿಗೆ 7.30ಕ್ಕೆ ತಲುಪುತ್ತದೆ. ಬೆಳಗಾವಿಯಿಂದ ಬೆಂಗಳೂರಿನ ಪ್ರಯಾಣಕ್ಕೆ ಸಾಮಾನ್ಯ ರೈಲಿಗಿಂತ ಎಂಬತ್ತು ನಿಮಿಷ ಉಳಿತಾಯವಾಗಲಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಭಾಗದ ಜನರು, ಉದ್ಯಮಿಗಳ ಓಡಾಟಕ್ಕೆ ಅನುಕೂಲವಾಗಿದೆ’ ಎಂದು ಹೇಳಿದರು.

ADVERTISEMENT

‘ರೈಲುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಂಟು ಸಾವಿರ ಕೋಟಿ ರೂಪಾಯಿ ವಿನಿಯೋಗಿಸಿದೆ. ಶೇ 99ರಷ್ಟು ಹಳಿಗಳು ವಿದ್ಯುದ್ದೀಕರಣವಾಗಿವೆ. ದಾವಣಗೆರೆ–ತುಮಕೂರು ಮಾರ್ಗ ವಿದ್ಯುದ್ದೀಕರಣವಾದರೆ ರೈಲಿನ ವೇಗ ಮತ್ತಷ್ಟು ಹೆಚ್ಚಲಿದೆ. ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ’ ಎಂದರು.

‘ಅರಣ್ಯ ಇಲಾಖೆ ಸಲಹೆ ಪ್ರಕಾರ ಅಂಕೋಲಾ–ಹುಬ್ಬಳ್ಳಿ ರೈಲು ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ, ಉಪ ಮೇಯರ್ ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಗುಂಡೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.