ಹುಬ್ಬಳ್ಳಿ: ‘ರಾಜಭವನವನ್ನು ಈಗಾಗಲೇ ಹೆಡ್ ಆಫೀಸ್ ಮಾಡಿಕೊಂಡಿರುವ ಬಿಜೆಪಿ, ಈಗ ಸಭಾಪತಿ ಕಚೇರಿಯನ್ನು ತನ್ನ ಪರವಾಗಿರುವಂತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ವೇದವ್ಯಾಸ ಕೌಲಗಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹತ್ತಿಕ್ಕಲು ಬಿಜೆಪಿಯು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ದಾಳವಾಗಿ ಬಳಸಿಕೊಂಡಿದೆ. ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ್ದರೂ ಇಲ್ಲ ಎಂದು ವಾದಿಸಿದರು. ಈಗ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪದೇ ಪದೇ ದೂರು ನೀಡುತ್ತಿದ್ದಾರೆ. ಮಹಿಳೆ ಬಗ್ಗೆ ಬಳಸಿರುವ ಪದವೇ ಸಿ.ಟಿ. ರವಿ ಅವರ ವ್ಯಕ್ತಿತ್ವ ಹೇಗೆಂದು ತೋರಿಸುತ್ತದೆ’ ಎಂದರು.
‘ಸಿಬಿಐ ಅನ್ನು ಬ್ಯೂರೋ ಆಫ್ ಕಾಂಗ್ರೆಸ್ ಇನ್ವೆಸ್ಟಿಗೇಶನ್ ಎಂದು ಕರೆಯುತ್ತಿದ್ದ ಬಿಜೆಪಿ ನಾಯಕರು, ಈಗ ಪ್ರಕರಣ ಸಿಬಿಐಗೆ ನೀಡಿ ಎನ್ನುತ್ತಿರುವುದು ದುರಾದೃಷ್ಟ ಸಂಗತಿ. ಗುತ್ತಿಗೆದಾರ ಸಚಿನ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಸಚಿವ ಪ್ರಿಯಾಂಕ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವ ನೈತಿಕತೆಯನ್ನು ಬಿಜೆಪಿ ಉಳಿಸಿಕೊಂಡಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.