ಹುಬ್ಬಳ್ಳಿ: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು. ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಅವರವರ ವಿವೇಚನೆಗೆ ಬಿಟ್ಟಿದ್ದು ಎಂದಿರುವ ಸಚಿವ ಈಶ್ವರ ಖಂಡ್ರೆ ಹೇಳಿಕೆ ವೈಯಕ್ತಿವಾದದ್ದೇ ಹೊರತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರವಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾವೇಶದಲ್ಲಿ ಕೆಲ ಸ್ವಾಮೀಜಿಗಳು ಧರ್ಮದ ಕುರಿತು ವಿತಂಡವಾದ ಮಂಡಿಸಿದ್ದಾರೆ. ಇವೆಲ್ಲ ರಾಜಕೀಯ ಪ್ರೇರಿತ ಹೇಳಿಕೆಗಳು. ಮಹಾಸಭಾ ಯಾರ ವೈಯಕ್ತಿಕ ಆಸ್ತಿಯಲ್ಲ’ ಎಂದು ಕಿಡಿಕಾರಿದರು.
‘ಎಡಪಂಥೀಯರ ಟೂಲ್‌ಕಿಟ್‌ನಿಂದ ಸಮಾಜವನ್ನು ದಾರಿ ತಪ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಕುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು, ಕ್ರಿಶ್ಚಿಯನ್‌ಗೆ ಸಂಬಂಧಿಸಿ ನಲವತ್ತಾರು ಜಾತಿಗಳನ್ನು ಸಿದ್ದರಾಮಯ್ಯ ಹೆಸರಿಸಿದ್ದಾರೆ. ಮತಾಂತರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಾತಿ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ದೂರಿದರು.
‘ಸಿದ್ದರಾಮಯ್ಯ ತಮ್ಮ ಅಧಿಕಾರಕ್ಕೆ ಧಕ್ಕೆ ಆದಾಗಲೆಲ್ಲ ಜಾತಿ, ಧರ್ಮವನ್ನು ಮುಂಚೂಣಿಗೆ ತರುತ್ತಾರೆ. ಹೈಕಮಾಂಡ್‌ಗೆ ಹತ್ತಿರವಾಗಬೇಕು ಎನ್ನುವುದು ಅವರ ಉದ್ದೇಶ’ ಎಂದು ಶಾಸಕ ಎಂ.ಆರ್.ಪಾಟೀಲ ಟೀಕಿಸಿದರು.
‘ಹುಬ್ಬಳ್ಳಿ ಸಮಾವೇಶ ವಿಫಲ’
ಗದಗ: ‘ಹುಬ್ಬಳ್ಳಿಯಲ್ಲಿ ನಡೆದಿದ್ದು ಕೇವಲ ಬೇಡ ಜಂಗಮರ ಸಮಾವೇಶ. ಅದು ವಿಫಲವಾಗಿದೆ’ ಎಂದು ವಚನಾನಂದ ಶ್ರೀ ಟೀಕಿಸಿದರು. ‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮಾವೇಶ ಮಾಡಿದರೂ ಅಲ್ಲಿ ಸೇರಿದ್ದು ಏಳು ಸಾವಿರ ಜನರು ಮಾತ್ರ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ‘ವೇದಿಕೆ ಮೇಲೆ ಕೆಲವು ಸ್ವಾಮೀಜಿಗಳು ಕುಳಿತಿದ್ದರು. ಅವರನ್ನು ಬಿಟ್ಟರೆ ಉಳಿದವರೆಲ್ಲಾ ಊರ ಪುರೋಹಿತರೇ ಇದ್ದರು. ಸಮಾವೇಶದಲ್ಲಿ ಸ್ಪಷ್ಟತೆ ಇರಲಿಲ್ಲ. ಸಮಾವೇಶದ ಮೂಲಕ ಏನು ಸಂದೇಶ ಕೊಟ್ಟರು ಎಂಬುದೇ ಗೊತ್ತಾಗಲಿಲ್ಲ’ ಎಂದು ಲೇವಡಿ ಮಾಡಿದರು. ‘ನಾನು ಮತ್ತು ಕೂಡಲಸಂಗಮ ಸ್ವಾಮೀಜಿಯವರು ಹುಬ್ಬಳ್ಳಿ ಸಮಾವೇಶಕ್ಕೆ ಹೋಗಬಾರದು ಎಂದು ತಿಳಿಸಿದ್ದೆವು. ಭಕ್ತರು ನಮ್ಮ ಸೂಚನೆ ಪಾಲಿಸಿದ್ದು ಅವರಿಗೆ ಧನ್ಯವಾದ ತಿಳಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.