ADVERTISEMENT

ಹುಬ್ಬಳ್ಳಿ | ವೀರಶೈವ ಲಿಂಗಾಯತ ಏಕತಾ ಸಮಾವೇಶ; ಮುಂಜಾಗ್ರತಾ ಸಭೆ

ಕಾರ್ಯಕ್ರಮ ಸಂಘಟಕರೊಂದಿಗೆ ಸಭೆ ನಡೆಸಿದ ಪೊಲೀಸ್‌ ಇಲಾಖೆ, ಸಲಹೆ–ಸೂಚನೆ ನೀಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:44 IST
Last Updated 18 ಸೆಪ್ಟೆಂಬರ್ 2025, 4:44 IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿರುವ ಏಕತಾ ಸಮಾವೇಶಕ್ಕೆ ವೇದಿಕೆ ನಿರ್ಮಾಣ ಹಾಗೂ ಪೆಂಡಾಲ್‌ ಹಾಕುವ ಕೆಲಸ ಭರದಿಂದ ಸಾಗಿದೆ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿರುವ ಏಕತಾ ಸಮಾವೇಶಕ್ಕೆ ವೇದಿಕೆ ನಿರ್ಮಾಣ ಹಾಗೂ ಪೆಂಡಾಲ್‌ ಹಾಕುವ ಕೆಲಸ ಭರದಿಂದ ಸಾಗಿದೆ   

ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ದ ಹಿನ್ನೆಲೆಯಲ್ಲಿ ಬುಧವಾರ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದ ಸಂಘಟಕರೊಂದಿಗೆ ಸಭೆ ನಡೆಸಿದರು. ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಭದ್ರತೆ ಕುರಿತು ಚರ್ಚೆ ನಡೆಸಿದರು.

ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಮಠಾಧೀಶರು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್‌. ಅವರು ಕೈಗೊಳ್ಳಬೇಕಾದ ಭದ್ರತೆ, ಮುಂಜಾಗ್ರತಾ ಕ್ರಮಗಳು ಹಾಗೂ ವಾಹನಗಳ ಸಂಚಾರ ದಟ್ಟಣೆ ನಿರ್ವಹಣೆ ಮತ್ತು ಪಾರ್ಕಿಂಗ್‌ ಸೌಲಭ್ಯದ ಕುರಿತು ವಿವರಿಸಿದರು.

ಬೇರೆ ಜಿಲ್ಲೆಗಳಿಂದ ವಾಹನದಲ್ಲಿ ಬರುವ ಸಾರ್ವಜನಿಕರನ್ನು ನೆಹರೂ ಮೈದಾನದ ಬಳಿ ಇಳಿಸಿ ಕಾರವಾರ ರಸ್ತೆಯ ಗಿರಣಿಚಾಳ ಮೈದಾನ, ರೈಲ್ವೆ ಮೈದಾನ ಹಾಗೂ ಗದಗ ರಸ್ತೆಯಲ್ಲಿರುವ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಲ್ಯಾಮಿಂಗ್ಟನ್‌ ಮೈದಾನದಲ್ಲಿ ಹಾಗೂ ಮಹಿಳಾ ಮಹಾವಿದ್ಯಾಲಯದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಗಣ್ಯವ್ಯಕ್ತಿಗಳ ಹಾಗೂ ಸ್ವಾಮೀಜಿಗಳ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

‘220X50 ಅಡಿ ಉದ್ದ–ಅಗಲದ ಬೃಹತ್‌ ವೇದಿಕೆ ನಿರ್ಮಾಣವಾಗುತ್ತಿದ್ದು, 1,000 ಸ್ವಾಮೀಜಿ ಹಾಗೂ 200 ಗಣ್ಯರಿಗೆ ಸ್ಥಳಾವಕಾಶ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ 25 ಸಾವಿರ ಆಸನಗಳನ್ನು ಹಾಕಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಮಧ್ಯಾಹ್ನ 12 ರಿಂದ ಊಟದ ವ್ಯವಸ್ಥೆ ಸಹ ಮಾಡಲಾಗಿದೆ’ ಎಂದು ಸಂಘಟಕ ಮಲ್ಲಿಕಾರ್ಜುನ ಸಾವುಕಾರ ತಿಳಿಸಿದರು.

‘ರಾಜ್ಯದ ವಿವಿಧ ಮಠಾಧೀಶರ ಜೊತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಸಾವಿರಕ್ಕೂ ಹೆಚ್ಚು ಸ್ವಾಮೀಜಿಗಳು ಮಧ್ಯಾಹ್ನ 2 ಗಂಟೆಗೆ ಮೂರುಸಾವಿರ ಮಠದಿಂದ ಪಾದಯಾತ್ರೆ ಮೂಲಕ ನೆಹರೂ ಮೈದಾನಕ್ಕೆ ಬರಲಿದ್ದಾರೆ. 3 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಧಾರವಾಡ ಜಿಲ್ಲೆ ಸೇರಿದಂತೆ ದಾವಣಗೆರೆ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿ, ಗದಗ ಜಿಲ್ಲೆಯ ಸುಮಾರು 30 ಸಾವಿರದಷ್ಟು ಜನರು ಬರುವ ನಿರೀಕ್ಷೆಯಿದೆ’ ಎಂದರು.

ಸ್ವಯಂ ಸೇವಕರ ನೇಮಕ: ಡಿಸಿಪಿ
‘ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಯಕ್ರಮದ ಆಯೋಜಕರಿಗೆ ಮೈದಾನದ ಒಳಗೆ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಸೂಚಿಸಿದ್ದೇವೆ. ವಾಹನ ನಿಲುಗಡೆಗೆ ಕೆಲವೆಡೆ ಪ್ರದೇಶಗಳನ್ನು ಗುರುತಿಸಿದ್ದು ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಇರುವುದಿಲ್ಲ’ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.