ADVERTISEMENT

ಮಹಾತ್ಮರ ಸ್ಮರಣೆ, ಉತ್ತಮ ಕಾರ್ಯ: ವೀರೇಂದ್ರ ಹೆಗ್ಗಡೆ

ಸಿದ್ಧೇಶ್ವರ ಮಠದ ದ್ವಾರ ಬಾಗಿಲು ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:13 IST
Last Updated 21 ಫೆಬ್ರುವರಿ 2026, 4:13 IST
ಹುಬ್ಬಳ್ಳಿಯ ಉಣಕಲ್ಲನ ಸಿದ್ಧೇಶ್ವರ ಮಠದ (ಹೊಸ ಮಠ) ದ್ವಾರ ಬಾಗಿಲು ನಿರ್ಮಾಣಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗುರುವಾರ ಭೂಮಿಪೂಜೆ ನೆರವೇರಿಸಿದರು
ಹುಬ್ಬಳ್ಳಿಯ ಉಣಕಲ್ಲನ ಸಿದ್ಧೇಶ್ವರ ಮಠದ (ಹೊಸ ಮಠ) ದ್ವಾರ ಬಾಗಿಲು ನಿರ್ಮಾಣಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗುರುವಾರ ಭೂಮಿಪೂಜೆ ನೆರವೇರಿಸಿದರು   

ಹುಬ್ಬಳ್ಳಿ: ‘ನಾವು ಮಾಡಿದ ಕೆಲಸಗಳು ಮಾತ್ರ ಸದಾ ಜನಮಾನಸದಲ್ಲಿ ಇರುತ್ತವೆ. ಮಹಾತ್ಮರನ್ನು ಸ್ಮರಿಸುವ ಸಂಸ್ಕೃತಿ ಈ ಭಾಗದಲ್ಲಿ ಇನ್ನೂ ಉಳಿದಿದ್ದು, ಇದು ಉತ್ತಮ ಕಾರ್ಯ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

ಇಲ್ಲಿನ ಉಣಕಲ್ಲನ ಸಿದ್ಧೇಶ್ವರ ಮಠದ (ಹೊಸ ಮಠ) ದ್ವಾರ ಬಾಗಿಲು ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

'ಉಣಕಲ್ಲ ಸಿದ್ದಪ್ಪಜನವರು ಶ್ರೇಷ್ಠ ಶರಣರಾಗಿದ್ದರು. ಅವರ ಇತಿಹಾಸ ದೊಡ್ಡದು. ಸಮಾಜವನ್ನು ಎಚ್ಚರಿಸಿ, ಜಾಗೃತಿ ಮೂಡಿಸಿದ್ದೇ ಮಹಾತ್ಮರ ನಿಜವಾದ ಪವಾಡ’ ಎಂದರು.

ADVERTISEMENT

‘ಒಂದು ಕನಸು ಕಂಡರೆ ಅದನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಅದರಂತೆ ಇಲ್ಲಿನ ಸಿದ್ಧಪ್ಪಜ್ಜನ ಹೊಸಮಠವನ್ನು ನಿರ್ಮಾಣ ಮಾಡಲಾಗಿದೆ. ಆದಷ್ಟು ಶೀಘ್ರ ಮಠದ ಶಿಲಾ ದ್ವಾರವನ್ನು ನಿರ್ಮಿಸಬೇಕು’ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ‘ಹೊಸಮಠವನ್ನು ನಿರ್ಮಾಣ ಮಾಡಲು ಎರಡು ವರ್ಷಗಳ ಹಿಂದೆ ಸಂಕಲ್ಪ ಮಾಡಲಾಗಿತ್ತು. ಅದಕ್ಕೆ ಅನೇಕ ದಾನಿಗಳು, ಧರ್ಮಸ್ಥಳ ಸಂಘದಿಂದಲೂ ನೆರವು ಸಿಕ್ಕಿದೆ’ ಎಂದರು.

‘ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶಿಕ್ಷಣ ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ್ಲಲಿ ಸೇವೆ ಸಲ್ಲಿಸಿದ್ದಾರೆ. ಅವರು ಸಮಾಜಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಹೇಳಿದರು.

‘ಮುಂದಿನ ವರ್ಷದ ಜಾತ್ರೆ ಒಳಗಾಗಿ ಮಠದ ದ್ವಾರವನ್ನು ನಿರ್ಮಿಸಲಾಗುವುದು. ಯುಗಾದಿ ಸಂದರ್ಭದಲ್ಲಿ ಸಿದ್ಧಪ್ಪಜ್ಜನ ಜಾತ್ರೆ ಒಂದು ತಿಂಗಳು ನಡೆಯಲಿದ್ದು, 21 ದಿನ ಪ್ರವಚನ ಜರುಗಲಿದೆ. ಸಾಮೂಹಿಕ ವಿವಾಹ, ಬಯಲು ಕುಸ್ತಿ, ಅನ್ನಸಂತರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ಮಿಸ್ ಯೂನಿವರ್ಸಲ್ ಪೆಟೀಟ್–2024 ಸ್ಪರ್ಧೆಯ ವಿಜೇತರಾದ ಡಾ.ಶೃತಿ ಹೆಗಡೆ, ಕುಸ್ತಿ ಪಟು ವಿಕ್ರಂ ಚಿಲ್ಲಣ್ಣವರ, ಕೊಕ್ಕೊ ಪಟು ಖುಷಿ ಮತ್ತು ಮಠಕ್ಕೆ ದೇಣಿಗೆ ನೀಡಿದ ಭಕ್ತರನ್ನು ಸನ್ಮಾನಿಸಲಾಯಿತು.

ವಿಶ್ವನಾಥ ಕೊರವಿ ಸ್ವಾಗತಿಸಿದರು. ರಾಮಣ್ಣ ಪದ್ಮಣ್ಣವರ, ಗುರು ಎಂಜಿನಿಯರ್‌, ಗುರುಸಿದ್ಧಪ್ಪ ಮೆಣಸಿನಕಾಯಿ, ದಯಾಶೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.