ADVERTISEMENT

ಸಂಘಟನೆಯಿಂದ ಉದ್ಯಮದ ಪ್ರಗತಿ: ವೀರೇಂದ್ರ ಹೆಗ್ಗಡೆ

ಹಿಂದೂ ಎಕನಾಮಿಕ್‌ ಫೋರಂ: ಹಿಂದೂ ಆರ್ಥಿಕ ಮಹಾಸಂಗಮ ರಾಷ್ಟ್ರೀಯ ಚಾಪ್ಟರ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:13 IST
Last Updated 21 ಫೆಬ್ರುವರಿ 2026, 4:13 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಹಿಂದೂ ಎಕನಾಮಿಕ್‌ ಫೋರಂ ವತಿಯಿಂದ ಆಯೋಜಿಸಿದ್ದ ‘ಹಿಂದೂ ಆರ್ಥಿಕ ಮಹಾಸಂಗಮ’ ರಾಷ್ಟ್ರೀಯ ಚಾಪ್ಟರ್‌ಗಳ ಸಮಾವೇಶವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು 
ಹುಬ್ಬಳ್ಳಿಯಲ್ಲಿ ಶುಕ್ರವಾರ ಹಿಂದೂ ಎಕನಾಮಿಕ್‌ ಫೋರಂ ವತಿಯಿಂದ ಆಯೋಜಿಸಿದ್ದ ‘ಹಿಂದೂ ಆರ್ಥಿಕ ಮಹಾಸಂಗಮ’ ರಾಷ್ಟ್ರೀಯ ಚಾಪ್ಟರ್‌ಗಳ ಸಮಾವೇಶವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು    

ಹುಬ್ಬಳ್ಳಿ: ‘ಹಿಂದೂ ವ್ಯಾಪಾರಸ್ಥರು, ಉದ್ಯಮಿಗಳು ಸಂಘಟನಾತ್ಮಕ, ಆರ್ಥಿಕವಾಗಿ ಸಬಲರಾಗಬೇಕು. ಇದು ಉದ್ಯಮದ ಬೆಳವಣಿಗೆ ಜೊತೆಗೆ ದೇಶದ ಜಿಡಿಪಿ ಪ್ರಗತಿಗೂ ಪೂರಕವಾಗುತ್ತದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದಲ್ಲಿ ಶುಕ್ರವಾರ ಹಿಂದೂ ಎಕನಾಮಿಕ್‌ ಫೋರಂ ವತಿಯಿಂದ ಆಯೋಜಿಸಿದ್ದ ‘ಹಿಂದೂ ಆರ್ಥಿಕ ಮಹಾಸಂಗಮ’ ರಾಷ್ಟ್ರೀಯ ಚಾಪ್ಟರ್‌ಗಳ (ಹುಬ್ಬಳ್ಳಿ–ಧಾರವಾಡ) ಸಮಾವೇಶದಲ್ಲಿ ಮಾತನಾಡಿದ ಅವರು, ‘ಹಿಂದೂ ಉದ್ಯಮಿಗಳು ತಮ್ಮ ವ್ಯಾಪಾರ ಜ್ಞಾನ ವೃದ್ಧಿಸಿಕೊಳ್ಳಲು ಹಿಂದೂ ಎಕನಾಮಿಕ್‌ ಫೋರಂ ಉತ್ತಮ ವೇದಿಕೆಯಾಗಿದೆ’ ಎಂದರು. 

‘ದೇಶದಲ್ಲಿ ಈ ಹಿಂದೆ ಶೇ 30ಕ್ಕೂ ಹೆಚ್ಚು ಹಿಂದೂ ಉದ್ಯಮಿಗಳು ಉದ್ಯಮ ನಡೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇದು ಶೇ 6ರಷ್ಟು ಇಳಿದಿದೆ. ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಿಂದೂ ಉದ್ಯಮಿಗಳಲ್ಲಿ ಒಂದಾಗಬೇಕು’ ಎಂದರು.

ADVERTISEMENT

ಉದ್ಯಮಿ ಆನಂದ ಸಂಕೇಶ್ವರ ಮಾತನಾಡಿ, ‘ಉದ್ಯಮದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯ. ಇದಕ್ಕೆ ಯೋಜನಾಬದ್ಧತೆ, ನಗದು ನಿರ್ವಹಣೆಯ ತಿಳಿವಳಿಕೆ ಅವಶ್ಯ. ಇಂತಹ ವೇದಿಕೆಗಳಲ್ಲಿ ಒಗ್ಗೂಡಿ ಚರ್ಚಿಸುವುದರಿಂದ ಉದ್ಯಮದ ಬೆಳವಣಿಗೆಗೆ ಪೂರಕ ಮಾಹಿತಿ ಪಡೆಯಬಹುದು’ ಎಂದರು.

ಪ್ರೊ.ಆರ್‌.ವೈದ್ಯನಾಥನ್‌ ಅವರು, ‘ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾದ ನಂತರ ವ್ಯಾಪಾರ, ಉದ್ಯಮ ಕ್ಷೇತ್ರದಲ್ಲಿ ಪಾರದರ್ಶಕತೆ ಬಂದಿದೆ. ತಂತ್ರಜ್ಞಾನದಿಂದ ಹೆಚ್ಚು ಬಳಕೆಯಿಂದ ಭ್ರಷ್ಟಾಚಾರ ತಗ್ಗಿದೆ’ ಎಂದರು.

ವಿಶ್ವ ಹಿಂದೂ ಪರಿಷತ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ವಿಜ್ಞಾನಾನಂದ ಸ್ವಾಮೀಜಿ, ‘ಪ್ರತಿಯೊಬ್ಬರೂ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬೇಕು. ಇದು ಕುಟುಂಬ ಹಾಗೂ ಉದ್ಯಮದ ರಕ್ಷಣೆಯೊಂದಿಗೆ ದೇಶದ ಪ್ರಗತಿಗೂ ಸಹಾಯಕವಾಗುತ್ತದೆ’ ಎಂದರು. 

ಫೋರಂನ ಟಿ.ಆರ್‌.ಶಿವಪ್ರಸಾದ್‌ ಅವರು, ‘ಹಿಂದೂಗಳು ನಾವೆಲ್ಲರೂ ಒಂದು ಎಂಬ ಒಗ್ಗಟ್ಟು ಮಂತ್ರ ನಮ್ಮದಾಗಬೇಕು.  2027ರೊಳಗೆ ರಾಜ್ಯದೆಲ್ಲೆಡೆ 1 ಸಾವಿರ ಹಿಂದೂ ಎಕನಾಮಿಕ್‌ ಫೋರಂನ ಶಾಖೆಗಳನ್ನು ಆರಂಭಿಸಬೇಕು’ ಎಂದರು.

ಇದೇ ವೇಳೆ ಸುವರ್ಣ ಶಕ್ತಿ ಸೌಹಾರ್ಧ ಕೋ– ಆಪರೇಟಿವ್‌ ಸೊಸೈಟಿಯನ್ನು ಉದ್ಘಾಟಿಸಲಾಯಿತು.

ವೀರೇಂದ್ರ ಹೆಗ್ಗಡೆ, ಉದ್ಯಮಿ ವಿ.ಎಸ್‌.ವಿ.ಪ್ರಸಾದ್, ಮಜೇಥಿಯಾ ಫೌಂಡೇಶನ್‌ನ ಜಿತೇಂದ್ರ ಮಜೇಥಿಯಾ, ಉದ್ಯಮಿ ಆನಂದ ಸಂಕೇಶ್ವರ ಹಾಗೂ ಹಿಂದೂ ಎಕನಾಮಿಕ್‌ ಫೋರಂನ ವಿಜೇಶ್‌ ಸೈಗಲ್‌, ಗೌತಮ್‌ ಬಪ್ನಾ, ಶ್ರೀನಿವಾಸ ಮಾನೆ, ಗಿರೀಶ್‌ ಮಾನೆ, ನಿತೀಶ್‌ ಶರ್ಮಾ ಅವರನ್ನು ಸನ್ಮಾನಿಸಲಾಯಿತು. 

ನಂದಕುಮಾರ್‌, ನವೀನ್‌ ಅಕಳವಾಡಿ, ಸಂತೋಷ್‌ ಪಾಟೀಲ, ರಾಹುಲ್ ಸೋರಾನಾ, ಅರ್ಜುನ್‌ ಮಹಾಜನ್‌ ಹಾಗೂ ಫೋರಂನ ಪ್ರಮುಖರು ಹಾಜರಿದ್ದರು.  

ದೇಶದಲ್ಲಿ ತಂತ್ರಜ್ಞಾನ ಉದ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಬೆಳವಣಿಗೆಯೊಂದಿಗೆ ಜಿಡಿಪಿ ದರವೂ ಉತ್ತಮವಾಗಿದೆ
. –ಪ್ರೊ.ಆರ್‌.ವೈದ್ಯನಾಥನ್‌ ಅರ್ಥಶಾಸ್ತ್ರಜ್ಞ
ಹಿಂದೂ ವ್ಯಾಪಾರಿಗಳು ಹೂಡಿಕೆದಾರರು ಹಾಗೂ ಚಿಂತಕರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಮೂಲಕ ಅವರ ಉದ್ಯಮದ ಬೆಳವಣಿಗೆಗೆ ಸಹಕರಿಸುತ್ತಿರುವ ವೇದಿಕೆಯ ಚಿಂತನೆಗಳು ಉತ್ತಮವಾಗಿವೆ.
ವೀರೇಂದ್ರ ಹೆಗ್ಗಡೆ. ಧರ್ಮಾಧಿಕಾರಿ ಶ್ರೀಕ್ಷೇತ್ರ ಧರ್ಮಸ್ಥಳ

ಸಮಾವೇಶದಲ್ಲಿ ಇಂದು..

ಶನಿವಾರ ಬೆಳಿಗ್ಗೆ 10ಕ್ಕೆ ಉದ್ಯಮ ಪ್ರಗತಿಯ ಚರ್ಚಾಗೋಷ್ಠಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಸಂಸದ ಬಸವರಾಜ ಬೊಮ್ಮಾಯಿ ಶಾಸಕರಾದ ಪ್ರಸಾದ ಅಬ್ಬಯ್ಯ ಮಹೇಶ ಟೆಂಗಿನಕಾಯಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹಾಗೂ ಹಿಂದೂ ಎಕನಾಮಿಕ್‌ ಫೋರಂನ ಪ್ರಮುಖರು ಭಾಗವಹಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.