ADVERTISEMENT

ನಷ್ಟದಲ್ಲಿ ತರಕಾರಿ ವ್ಯಾಪಾರಿಗಳು, ಆರಂಭವಾಗುತ್ತಿದಂತೆಯೇ ಮುಗಿದು ಹೋಗುವ ವಹಿವಾಟು!

ಎಂ.ನವೀನ್ ಕುಮಾರ್
Published 30 ಏಪ್ರಿಲ್ 2021, 3:57 IST
Last Updated 30 ಏಪ್ರಿಲ್ 2021, 3:57 IST
ಹುಬ್ಬಳ್ಳಿಯ ಗುರುದೇವನಗರದಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿರುವ ತರಕಾರಿ ವ್ಯಾಪಾರಿ
ಹುಬ್ಬಳ್ಳಿಯ ಗುರುದೇವನಗರದಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿರುವ ತರಕಾರಿ ವ್ಯಾಪಾರಿ   

ಹುಬ್ಬಳ್ಳಿ: ವ್ಯಾಪಾರದ ಸಮಯದ ಅಭಾವದ ಕಾರಣ ತರಕಾರಿ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಹತ್ತಾರು ವರ್ಷಗಳಿಂದ ಮಾಡುತ್ತಿರುವ ವ್ಯಾಪಾರವನ್ನು ಬಿಡುವಂತಿಲ್ಲ, ಮಾಡುವಂತೆಯೂ ಇಲ್ಲ ಎಂಬ ಸಂದಿಗ್ಧದಲ್ಲಿ ಸಿಲುಕಿದ್ದಾರೆ.

ಸರ್ಕಾರ ಕರ್ಫ್ಯೂ ಅವಧಿಯಲ್ಲಿ ನಿಗದಿಪಡಿಸಿರುವ ವ್ಯಾಪಾರದ ಸಮಯವೇ ಇದಕ್ಕೆ ಕಾರಣ. ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಈ ಅವಧಿಯಲ್ಲಿ ಲಾಭಯುತ ವ್ಯಾಪಾರ ಮಾಡುವುದಿರಲಿ, ಅಸಲು ಗಳಿಸುವುದು ಸಹ ಕಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಎಪಿಎಂಸಿಯಲ್ಲಿಯೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ಚಿಲ್ಲರೆ ವ್ಯಾಪಾರಿಗಳು ಅಲ್ಲಿ ಖರೀದಿ ಮಾಡಲು ಹೆಚ್ಚಿನ ಸಮಯವಾಗುತ್ತಿದೆ. ಖರೀದಿ ಮಾಡಿ ತಂದು ನಿರ್ದಿಷ್ಟ ಸ್ಥಳದಲ್ಲಿ ಜೋಡಿಸುವಷ್ಟರಲ್ಲಿ ಬೆಳಿಗ್ಗೆ 8 ಗಂಟೆಯಾಗುತ್ತದೆ. ಅಲ್ಲಿಂದ ವ್ಯಾಪಾರ ಶುರುವಾಗುತ್ತದೆ. ಆದರೆ ಗ್ರಾಹಕರು ಬರುವುದು 9 ಗಂಟೆಯ ನಂತರವೇ. ಆದ್ದರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ ತಂದ ಮಾಲನ್ನು ಮಾರಲು ಸಾಧ್ಯವಾಗುತ್ತಿಲ್ಲ’ ಎಂದು ನಗರದ ವಿವಿಧ ಬಡಾವಣೆಗಳಲ್ಲಿ ತರಕಾರಿ ಮಾಡುವ ವ್ಯಾಪಾರಿಗಳು ಅಳಲು ತೋಡಿಕೊಂಡರು.

ADVERTISEMENT

‘ದಿನ 2–3 ಸಾವಿರ ಮೊತ್ತದ ತರಕಾರಿ ತರುತ್ತೇನೆ. ಈಗ ನೀಡಿರುವ ಸಮಯ ಯಾವುದಕ್ಕೂ ಸಾಲುವುದಿಲ್ಲ. ಸಿಟಿ ಜನ ಬೆಳಿಗ್ಗೆ ಬೇಗ ಎದ್ದು ಬರುವುದಿಲ್ಲ. ತಂದ ಮಾಲು ಉಳಿಯುತ್ತಿದ್ದು, ನಾವು ಬದುಕುವುದಾದರೂ ಹೇಗೆ? ಈ ಹಿಂದೆ ದಿನಕ್ಕೆ ಕನಿಷ್ಠ ₹3 ಸಾವಿರ ವ್ಯಾಪಾರವಾಗುತ್ತಿತ್ತು, ಈಗ ಅರ್ಧವೂ ಆಗುತ್ತಿಲ್ಲ. ಅದರಲ್ಲೂ ತರಕಾರಿ ಉಳಿಯುವುದರಿಂದ ನಷ್ಟವಾಗುತ್ತಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ರವಿ.

‘ಎಪಿಎಂಸಿಯಲ್ಲಿ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕು. ಬೆಳಿಗ್ಗೆ 4 ಗಂಟೆಗೆ ಎಪಿಎಂಸಿಗೆ ಹೋದರೆ ಖರೀದಿ ಮಾಡಿಕೊಂಡು ಬರುವಷ್ಟರಲ್ಲಿ 6 ಗಂಟೆಯಾಗಿರುತ್ತದೆ. ನಂತರ ಅದನ್ನು ಜೋಡಿಸಲು ಒಂದಿಷ್ಟು ಸಮಯಬೇಕು. ಇಷ್ಟೆಲ್ಲ ಮಾಡಿ ವ್ಯಾಪಾರ ಮಾಡೋಣ ಎಂದರೆ ಆ ವೇಳೆಗಾಗಲೇ ಸಮಯ ಆಗಿರುತ್ತದೆ. ಸಮಯದ ಅಭಾವ ಇರುವುದರಿಂದ ಜನರು ನಿಲ್ಲಲು ಕೇಳುತ್ತಿಲ್ಲ, ಗಡಿಬಿಡಿಯಲ್ಲಿ ಬಂದು ಹೋಗುತ್ತಿದ್ದಾರೆ’ ಎನ್ನುತ್ತಾರೆ ಅಶೋಕನಗರದ ತರಕಾರಿ ವ್ಯಾಪಾರಿ ಇಜಾಜ್.

ವ್ಯಾಪಾರ ಮಾಡಲು ಮಧ್ಯಾಹದ ವರೆಗೆ ಸಮಯ ನೀಡಬೇಕು ಎಂಬುದು ವ್ಯಾಪಾರಿಗಳ ಒಕ್ಕೊರಲ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.