ಹುಬ್ಬಳಿ: ಕಣ್ಣು ಹಾಯಿಸಿದ ಕಡೆಯಲೆಲ್ಲ ಕಸದ ರಾಶಿ, ಸುತ್ತ ನೋಡಿದಷ್ಷು ಬಿದ್ದ ಗೋಡೆಗಳು. ಅಲಲ್ಲಿ ತೆಗ್ಗಿನಲ್ಲಿ ನಿಂತ ನೀರು, ಮುರಿದ ಬೆಂಚು. ಜೊತೆಗೆ ತ್ಯಾಜ್ಯ ರಾಶಿ. ಇದೆಲ್ಲವೂ ಕಂಡು ಬಂದಿದ್ದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ–5ರ ವಲಯ ಕಚೇರಿ ಬಳಿಯಿರುವ ವಿದ್ಯಾನಗರದ ಉದ್ಯಾನದಲ್ಲಿ.
ನಿರ್ವಹಣೆ ಕಾಣದೇ ಉದ್ಯಾನವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದು ಹೊರತುಪಡಿಸಿ ಸುತ್ತಮುತ್ತಲೂ ಉತ್ತಮ ಉದ್ಯಾನವಿರದ ಕಾರಣ ಬಹುತೇಕ ಮಂದಿ, ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಕ್ಕೆ ಇಲ್ಲಿಯೇ ಬರುತ್ತಾರೆ. ದುರ್ನಾತ ಬೀರುವ ಆವರಣದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯುತ್ತಾರೆ.
‘ಉದ್ಯಾನದ ಒಳಗಿನ ಮಕ್ಕಳ ಆಟದ ಸಾಧನಗಳು ಹಾಗೂ ಗೊಂಬೆಗಳು ಮುರಿದು ಬಿದ್ದಿವೆ. ಅವುಗಳಿಂದ ಗಾಯಗಳ ಸಾಧ್ಯತೆ ಹೆಚ್ಚಾಗಿದೆ. ಆಸನಗಳು ಮುರಿದು ಬಿದ್ದಿದ್ದು, ಕೂರಲು ಸೂಕ್ತ ಸ್ಥಳಾವಕಾಶ ಇಲ್ಲ. ಅಲ್ಲಲ್ಲಿ ಕಸದ ಡಬ್ಬಿಗಳಿವೆ. ಆದರೆ, ಅದರ ಒಳಗಿನ ತ್ಯಾಜ್ಯ ತೆರವು ಆಗುವುದೇ ಇಲ್ಲ’ ಎಂಬ ಬೇಸರ ಸಾರ್ವಜನಿಕರದ್ದು.
‘ಪಾಲಿಕೆ ಕಚೇರಿಯು ಪಕ್ಕದಲ್ಲೇ ಇದೆ. ಅಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಅವರು ಈ ಉದ್ಯಾನದತ್ತ ಕೊಂಚ ಗಮನ ಹರಿಸಿದರೆ, ಸುಧಾರಣೆ ನಿರೀಕ್ಷಿಸಬಹುದು. ಕಳೆಗಿಡಗಳನ್ನು ಕಟಾವು ಮಾಡಬೇಕು. ಹೂಗಿಡಗಳು ಚೆನ್ನಾಗಿ ಬೆಳೆಯಲು ನೀರು ಪೂರೈಸಬೇಕು. ಕಳೆ ಬೆಳೆಯದಂತೆ ನಿರ್ವಹಿಸಬೇಕು. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯ ಸೌಲಭ್ಯ ಇರಬೇಕು’ ಎಂದು ವಿದ್ಯಾನಗರದ ನಿವಾಸಿ ಆಶಾ ತಿಳಿಸಿದರು.
ಪಾಲಿಕೆಯ ವಾರ್ಡ್‌ನ ಸದಸ್ಯರಿಗೆ ನೀಡಲಾಗುವ ಅನುದಾನ ಸಾಕಾಗುತ್ತಿಲ್ಲ. ಹೆಚ್ಚುವರಿ ಅನುದಾನ ಸರ್ಕಾರದಿಂದ ಲಭ್ಯವಾದರೆ ಉದ್ಯಾನ ನವೀಕರಣಕ್ಕೆ ಆದ್ಯತೆ ನೀಡಲಾಗುವುದು.ಆನಂದ ಕಾಂಬಳೆ, 5ನೇ ವಲಯ ಆಯುಕ್ತ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಮಕ್ಕಳಿಗೆ ಆಟವಾಡಲು ಜಾಗವಿಲ್ಲ. ಉದ್ಯಾನವು ಸರಿಯಾಗಿ ಅಭಿವೃದ್ಧಿಪಡಿಸಿದರೆ ಮಕ್ಕಳನ್ನು ಸಂಜೆ ಕರೆದುಕೊಂಡು ಬರಬಹುದು. ಮಕ್ಕಳಿಗೂ ಪರಿಸರ ಬಗ್ಗೆ ಪ್ರೀತಿ ಬರುತ್ತದೆ.ಆಶಾ, ನಿವಾಸಿ ವಿದ್ಯಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.