ADVERTISEMENT

ಅವಳಿ ನಗರದಲ್ಲಿ ಕಟ್ಟಡ ನಿಯಮ ಉಲ್ಲಂಘನೆ: ಪಾರ್ಕಿಂಗ್‌ ಸ್ಥಳ ಹುಡುಕುವುದೇ ಸವಾಲು!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 6:35 IST
Last Updated 24 ನವೆಂಬರ್ 2023, 6:35 IST
<div class="paragraphs"><p>ಹುಬ್ಬಳ್ಳಿಯ ಬಹುಮಹಡಿ ಕಟ್ಟಡವೊಂದರ ಪಾರ್ಕಿಂಗ್‌ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿರುವುದರಿಂದ ದ್ವಿಚಕ್ರ ವಾಹನಗಳನ್ನು ರಸ್ತೆಬದಿ ನಿಲ್ಲಿಸಲಾಗಿದೆ </p></div>

ಹುಬ್ಬಳ್ಳಿಯ ಬಹುಮಹಡಿ ಕಟ್ಟಡವೊಂದರ ಪಾರ್ಕಿಂಗ್‌ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿರುವುದರಿಂದ ದ್ವಿಚಕ್ರ ವಾಹನಗಳನ್ನು ರಸ್ತೆಬದಿ ನಿಲ್ಲಿಸಲಾಗಿದೆ

   

–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡದ ಬಹುತೇಕ ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್‌ ಸ್ಥಳಗಳನ್ನು ಅತಿಕ್ರಮಿಸಿ ಅನ್ಯ ಉದ್ದೇಶಕ್ಕೆ ಬಳಕೆ ಆಗುತ್ತಿದೆ. ಪಾಲಿಕೆ ನಿಯಮಗಳು ಪದೇ ಪದೇ ಉಲ್ಲಂಘನೆ ಆಗುತ್ತಿದ್ದರೂ ಈವರೆಗೆ ಕಡಿವಾಣ ಬಿದ್ದಿಲ್ಲ.

ADVERTISEMENT

ಅವಳಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶ ಸೇರಿ ಬಹುತೇಕ ಬಡಾವಣೆಯ ಪ್ರಮುಖ ವಾಣಿಜ್ಯ ಕಟ್ಟಡಗಳಲ್ಲಿನ ಪಾರ್ಕಿಂಗ್‌ ಸ್ಥಳ ವಾಣಿಜ್ಯ ವ್ಯವಹಾರಕ್ಕೆ ಮೀಸಲಾಗಿದೆ.

ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆ, ಕೋಯಿನ್‌ ರಸ್ತೆ, ಗೋಕುಲ ರಸ್ತೆ, ದೇಶಪಾಂಡೆ ನಗರ, ವಿಜಯನಗರ, ದುರ್ಗದ ಬೈಲ್‌, ವಿದ್ಯಾನಗರ, ಕಾರವಾರ ರಸ್ತೆ, ಕೇಶ್ವಾಪುರ, ನವನಗರ ಹಾಗೂ ಧಾರವಾಡದ ಜುಬ್ಲಿ ವೃತ್ತ, ಸಪ್ತಾಪುರ, ಸುಭಾಸ ರೋಡ್‌, ಲೈನ್‌ ಬಜಾರ್, ಗಾಂಧಿ ಚೌಕ, ಶ್ರೀನಗರ ಕ್ರಾಸ್‌ ಸೇರಿ ಪ್ರಮುಖ ಪ್ರದೇಶಗಳಲ್ಲಿನ ಕಟ್ಟಡಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯೇ ಇಲ್ಲ.

ವ್ಯಾಪಾರ, ವಹಿವಾಟಿಗೆ ಬಂದ ಗ್ರಾಹಕರು ಪಾದಚಾರಿ ಮಾರ್ಗದಲ್ಲಿ ಅಥವಾ ರಸ್ತೆ ಪಕ್ಕ ವಾಹನಗಳನ್ನು ನಿಲ್ಲಿಸುತ್ತಾರೆ. ಪರಿಣಾಮ ವಾಹನಗಳ ಸಂಚಾರ ದಟ್ಟಣೆಯಾಗುತ್ತಿದೆ.

‘ಬಹುಮಹಡಿ ಕಟ್ಟಡದ ನೆಲಮಹಡಿ ವಾಹನ ನಿಲುಗಡೆಗೆ ಬಿಡಬೇಕು ಎಂಬ ನಿಯಮವಿದ್ದು, ಅದರಂತೆಯೇ ಕಟ್ಟಡದ ನಕ್ಷೆ ಹಾಗೂ ವಿನ್ಯಾಸ ಸಹ ಸಿದ್ಧವಾಗಿರುತ್ತದೆ. ಕೆಲ ಕಟ್ಟಡದ ಮಾಲೀಕರು, ನಕ್ಷೆಯಲ್ಲಷ್ಟೇ ಪಾರ್ಕಿಂಗ್‌ ಸ್ಥಳ ತೋರಿಸಿ, ಅವುಗಳನ್ನು ಸಹ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು, ತೋರಿಸುವ ಜಾಗಕ್ಕಿಂತ ಕಡಿಮೆ ಜಾಗ ವಾಹನ ನಿಲುಗಡೆಗೆ ಮೀಸಲಿಟ್ಟಿದ್ದಾರೆ’ ಎಂಬ ಆರೋಪವಿದೆ.

2010ರಲ್ಲಿ ಪಾಲಿಕೆ ಸಮೀಕ್ಷೆ ನಡೆಸಿದಾಗ 321 ಕಟ್ಟಡಗಳ ಮಾಲೀಕರು ಪಾರ್ಕಿಂಗ್‌ ಸ್ಥಳ ಅತಿಕ್ರಮಿಸಿಕೊಂಡಿದ್ದು ಪತ್ತೆಯಾಗಿತ್ತು. ನಂತರ ಮತ್ತೊಮ್ಮೆ ಸಮೀಕ್ಷೆ ನಡೆಸಿದಾಗ 1,350 ಕಟ್ಟಡಗಳಲ್ಲಿ 389 ಕಟ್ಟಗಳ ಮಾಲೀಕರು ಅತಿಕ್ರಮಿಸಿಕೊಂಡಿದ್ದು ಕಂಡು ಬಂದಿತ್ತು.

2013ರಲ್ಲಿ ಪಾಲಿಕೆ ಆಯುಕ್ತರಾಗಿದ್ದ ಪಿ. ಮಣಿವಣ್ಣನ್‌ ಮತ್ತು 2015ರಲ್ಲಿ ಆಯುಕ್ತರಾಗಿದ್ದ ಸಿ.ಎಂ. ಮನ್ಸೂರ್‌ ಅವರು ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ 90ರಷ್ಟು ಅತಿಕ್ರಮಣ ಸ್ಥಳಗಳನ್ನು ತೆರವುಗೊಳಿಸಿದ್ದರು. ಆದರೆ, ನಂತರ ಕಾರ್ಯಾಚರಣೆ ಸ್ಥಗಿತವಾಯಿತು.

‘ಇತ್ತೀಚೆಗೆ ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಮತ್ತಷ್ಟು ಕಟ್ಟಡಗಳು ತಲೆ ಎತ್ತಿದ್ದು, ಅವುಗಳ ನೆಲಮಹಡಿ ಸಂಪೂರ್ಣ ವಾಣಿಜ್ಯ ಮಳಿಗೆಗಳಿಂದ ತುಂಬಿಕೊಂಡಿವೆ. ಕೆಲ ಕಟ್ಟಡಗಳಿಗೆ ಪಾರ್ಕಿಂಗ್‌ ಸ್ಥಳವನ್ನೇ ಬಿಟ್ಟಿಲ್ಲ. ಮತ್ತೆ ಕೆಲವು ಕಡೆ ಕಟ್ಟಡದ ನಕ್ಷೆಯಲ್ಲಿ ಪಾರ್ಕಿಂಗ್‌ಗೆ ತೋರಿಸಿದ ಜಾಗ ಒಂದು ಕಡೆಯಾದರೆ, ಮೀಸಲಿಟ್ಟ ಜಾಗ ಮತ್ತೊಂದು ಕಡೆಯಿದೆ. ಪಾಲಿಕೆ ಅಧಿಕಾರಿಗಳಿಗೆ ಈ ಕುರಿತು ದೂರು ಸಲ್ಲಿಸಿದರೂ ಯಾವ ಪ್ರಯೋಜನವಿಲ್ಲ’ ಎಂದು ಹಳೇಹುಬ್ಬಳ್ಳಿ ವ್ಯಾಪಾರಸ್ಥ ರಮೇಶ ದಾಸಪ್ಪನವರ ಹೇಳುತ್ತಾರೆ.

‘ಕೆಲವು ಬಹುಮಹಡಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಯಿದ್ದು, ಅದು ಉಚಿತವಾಗಿದ್ದರೂ, ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಪಾರ್ಕಿಂಗ್‌ಗೆ ಹಣ ಪಡೆಯಬಾರದು ಎನ್ನುವ ಸ್ಪಷ್ಟ ನಿಯಮವಿದೆ. ಹತ್ತಾರು ವರ್ಷಗಳಿಂದ ಕಣ್ಣಿಗೆ ಕಾಣುವ ಹಾಗೆ ಅಕ್ರಮ ನಡೆಯುತ್ತಿದ್ದರೂ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಸಂಚಾರವೂ ಹೆಚ್ಚುತ್ತಿವೆ. ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ತೆರವುಗೊಳಿಸಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ವಿಕಾಸ ಸೊಪ್ಪಿನ್‌ ಆಗ್ರಹಿಸಿದರು.

ಬಹುಮಹಡಿ ವಾಣಿಜ್ಯ ಕಟ್ಟಡದಲ್ಲಿ ವಾಹನ ನಿಲುಗಡೆ ಉಚಿತವಾಗಿದ್ದು ಅದಕ್ಕೆ ಹಣ ಪಡೆಯುವಂತಿಲ್ಲ. ಸಾರ್ವಜನಿಕರು ಮಾಹಿತಿ ನೀಡಿದರೆ ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
‘ಸಮೀಕ್ಷೆ; ಶೀಘ್ರ ತೆರವು ಕಾರ್ಯಾಚರಣೆ ’
‘ಕಟ್ಟಡ ಪರವಾನಗಿ ನೀಡುವಾಗ ನಕ್ಷೆಯಲ್ಲಿ ತೋರಿಸಿದಂತೆ ಕಡ್ಡಾಯವಾಗಿ ವಾಹನಗಳ ನಿಲುಗಡೆಗೆ ಜಾಗ ಮೀಸಲಿಡಬೇಕು. ಆದರೆ ಅವಳಿನಗರದ ಕೆಲವು ಕಟ್ಟಡಗಳ ಮಾಲೀಕರು ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗುವುದು. ಪಾರ್ಕಿಂಗ್‌ ಜಾಗ ಅತಿಕ್ರಮಿಸಿ ನಿರ್ಮಿಸಿದ ಮಳಿಗೆಗಳ ತೆರವಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.