ADVERTISEMENT

ಹುಬ್ಬಳ್ಳಿ | ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್‌ ಜ್ವರ: ಪಾಲಕರಲ್ಲಿ ಆತಂಕ

ನಾಗರಾಜ್ ಬಿ.ಎನ್‌.
Published 21 ಆಗಸ್ಟ್ 2025, 7:28 IST
Last Updated 21 ಆಗಸ್ಟ್ 2025, 7:28 IST
   

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಎರಡು–ಮೂರು ವಾರಗಳಿಂದ ನಿರಂತರ ಮಳೆಯಾದ ಕಾರಣ ವಾತಾವರಣ  ತಂಪಾಗಿದೆ. ಪರಿಣಾಮ, ಶೀತ, ನೆಗಡಿ, ವೈರಲ್‌ ಜ್ವರಗಳಂಥ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಪಾಲಕರು ಆತಂಕಗೊಂಡಿದ್ದಾರೆ.

ಕೆಲ ದಿನಗಳಿಂದ ಜ್ವರದಿಂದ ಆಸ್ಪತ್ರೆಗೆ ಬರುವ ಮಕ್ಕಳ ಸಂಖ್ಯೆ ಶೇ 10 ರಿಂದ 20ಕ್ಕೆ ಹೆಚ್ಚಳವಾಗಿದೆ. ತಂಪಿನ ಮಧ್ಯೆ ಬಿಸಿಲು ಬೀಳುತ್ತಿರುವುದರಿಂದ ವಾತಾವರಣದ ಸಮತೋಲನ ತಪ್ಪಿದೆ. ಅನಾರೋಗ್ಯಕ್ಕೀಡು ಮಾಡುವ ವೈರಾಣುಗಳು ಉಲ್ಬಣವಾಗುತ್ತಿವೆ. ಸೇವಿಸುವ ಗಾಳಿ, ನೀರು, ಆಹಾರದಲ್ಲಿ ಅದು ಸೇರಿ ವೈರಲ್‌ ಜ್ವರ, ಶೀತ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

ಧಾರವಾಡ ಜಿಲ್ಲಾಸ್ಪತ್ರೆ, ಕೆಎಂಸಿ-ಆರ್‌ಐ ಆಸ್ಪತ್ರೆ, ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ‌. ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಎದುರು ಸಹ ರೋಗಿಗಳು, ಬೆಳಿಗ್ಗೆಯಿಂದ ಸಂಜೆವರೆಗೂ ಸಾಲುಗಟ್ಟಿ ನಿಂತಿರುತ್ತಾರೆ. ಹೀಗಾಗಿ ಎರಡು–ಮೂರು ದಿನ ಮೊದಲೇ ಮುಂಗಡವಾಗಿ ರೋಗಿ ಹೆಸರಲ್ಲಿ ಚೀಟಿಯನ್ನು ಕಾಯ್ದಿರಿಸಲಾಗುತ್ತಿದೆ.

ADVERTISEMENT

‘ಎಂಟು ವರ್ಷದ ಮಗಳಿಗೆ ಆರಂಭದಲ್ಲಿ ಶೀತ ಬಂದಿತ್ತು. ನಂತರ ಜ್ವರ ಕಾಣಿಸಿಕೊಂಡು ವಾಂತಿ–ಬೇಧಿಯಾಗಿತ್ತು. ತಕ್ಷಣ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದೆ. ಇವತ್ತು ಮತ್ತೆ ವಿಪರೀತ ಜ್ವರ ಬಂದಿದೆ. 12 ದಿನವಾದರೂ ಜ್ವರ, ಶೀತ ಕಡಿಮೆಯಾಗುತ್ತಿಲ್ಲ’ ಎಂದು ಕೆಎಂಸಿ-ಆರ್‌ಐ ಆಸ್ಪತ್ರೆಗೆ ಮಗಳನ್ನು ಕರೆದುಕೊಂಡು ಬಂದ ಆನಂದನಗರದ ಸೀತಾಬಾಯಿ ಹೀರಣ್ಣವರ ತಿಳಿಸಿದರು.

‘ವಾತಾವರಣ ತಂಪಾಗಿರುವುದರಿಂದ ನೆಗಡಿ–ಜ್ವರ ಬರುತ್ತಿದೆ ಎನ್ನುವುದಕ್ಕಿಂತ, ವೈರಲ್‌ ಜ್ವರ ಹೆಚ್ಚಾಗಿದೆ. ಕೋವಿಡ್ ಅಲ್ಲದ ಅದೇ ಲಕ್ಷಣದ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಜ್ವರ ಇದಾಗಿದೆ. ಮಳೆಗಾಲದಲ್ಲಿ ಇದು ಸಾಮಾನ್ಯ. ಔಷಧಿಯಿಂದ ಗುಣಪಡಿಸಬಹುದಾಗಿದ್ದು ಆತಂಕಪಡುವ ಅಗತ್ಯವಿಲ್ಲ’ ಎಂದು ವೈದ್ಯರೊಬ್ಬರು ತಿಳಿಸಿದರು‌.

‘ಮಕ್ಕಳ ವಿಭಾಗಕ್ಕೆ ಒಳರೋಗಿಗಳಾಗಿ ದಾಖಲಾಗುವ ಮಕ್ಕಳ ಸಂಖ್ಯೆ ಸಾಮಾನ್ಯ ದಿನಕ್ಕಿಂತ ಶೇ 10ರಷ್ಟು ಹೆಚ್ಚಾಗಿದೆ. ವಿಪರೀತ ಜ್ವರದಿಂದ ಬಳಲಿ ನಿತ್ರಾಣ ಆಗಿರುವ ಮಕ್ಕಳಿಗೆ ಸಲೈನ್ ಹಚ್ಚಲಾಗುತ್ತದೆ. ಕೆಲವರನ್ನು ಒಂದು-ಎರಡು ದಿನ ಒಳರೋಗಿಗಳಾಗಿ ಇಟ್ಟುಕೊಂಡು ಚಿಕಿತ್ಸೆ ನೀಡಿ ಕಳುಹಿಸಲಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾಂಕ್ರಾಮಿಕ ಜ್ವರ ಅವರನ್ನು ಬೇಗ ಬಾಧಿಸುತ್ತದೆ’ ಎಂದು ಕೆಎಂಸಿ-ಆರ್‌ಐ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಾಜಶೇಖರ ದ್ಯಾಬೇರಿ ತಿಳಿಸಿದರು.

ಮುನ್ನೆಚ್ವರಿಕೆ ಕ್ರಮಗಳು

l ಶೀತ, ಜ್ವರ ಲಕ್ಷಣವಿದ್ದರೆ, ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ

l ಮಳೆಯಲ್ಲಿ ನೆನೆಸಿಕೊಳ್ಳಬೇಡಿ. ಛತ್ರಿ ಅಥವಾ ರೇನ್‌ಕೋಟ್ ಬಳಸಿ

l ಕಾಯಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು

l ತರಕಾರಿ, ಹಣ್ಣುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಿರಿ

l ಸೊಳ್ಳೆ ನಿಯಂತ್ರಕ ಸಾಧನ, ಸೊಳ್ಳೆ ಪರದೆ ಬಳಸುವುದು ಉತ್ತಮ

l ಮನೆಗಳ ಸುತ್ತಮುತ್ತಲ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ

l ಮನೆಯಲ್ಲಿ ತಯಾರಿಸಿದ ಬಿಸಿ ಆಹಾರ ಆರೋಗ್ಯಕ್ಕೆ ಒಳ್ಳೆಯದು

l ಚಳಿಯಿಂದ ಪಾರಾಗಲು ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು

l ವೈರಾಣುಗಳು ಹರಡುವಿಕೆ ತಡೆಯಲು ಕೈಗಳನ್ನು ಸಾಬೂನಿನಿಂದ ತೊಳೆಯಿರಿ

ಸಾಮಾನ್ಯವಾಗಿ ಮಳೆಗಾಲದಲ್ಲಿ ಜ್ವರ, ಶೀತ ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷ್ಯ ಮಾಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಜಾಗೃತಿ ಮೂಡಿಸಲಾಗುತ್ತಿದೆ
ಎಸ್‌.ಎಂ. ಹೊನಕೇರಿ, ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ
ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಈ ವರ್ಷ ಕಡಿಮೆಯಾಗಿದೆ. ಜ್ವರಬಾಧೆಯಂತಹ ಸಾಮಾನ್ಯವಾಗಿ ಕಂಡುಬರುವ ರೋಗಗಳಿಗೆ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ
ಡಾ.ಈಶ್ವರ ಆರ್‌.ಹೊಸಮನಿ, ನಿರ್ದೇಶಕ, ಕೆಎಂಸಿಆರ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.