ADVERTISEMENT

ಹುಬ್ಬಳ್ಳಿ: ಮುಷ್ಕರ ನಡೆಸಿದ ನೌಕರರ 5 ದಿನಗಳ ವೇತನ ಕಡಿತ ಮಾಡಿದ ಜಲಮಂಡಳಿ

ಏಳು ದಿನ ಮುಷ್ಕರ ನಡೆಸಿದ ನೌಕರರಿಗೆ ಶಾಕ್ ಕೊಟ್ಟ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 6:17 IST
Last Updated 19 ಮೇ 2022, 6:17 IST
ಡಾ.ಬಿ. ಗೋಪಾಲಕೃಷ್ಣ
ಡಾ.ಬಿ. ಗೋಪಾಲಕೃಷ್ಣ   

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮುಷ್ಕರ ನಡೆಸಿದ್ದ ಹೊರಗುತ್ತಿಗೆ ನೌಕರರ ಏಪ್ರಿಲ್ ತಿಂಗಳದ ಐದು ದಿನಗಳ ವೇತನವನ್ನು ಜಲಮಂಡಳಿ ಕಡಿತಗೊಳಿಸಿದೆ.

ಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಪಾಲಿಕೆಯ ನೌಕರರಾಗಿ ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ನೌಕರರು ಏಪ್ರಿಲ್ 26ರಿಂದ ಮೇ 2ರವರೆಗೆ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸಿದ್ದರು.

‘ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಜಲಮಂಡಳಿಗೆ ಮನವಿ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅನಿವಾರ್ಯವಾಗಿ ಮುಷ್ಕರ ನಡೆಸಬೇಕಾಯಿತು. ಅದೇ ಕಾರಣಕ್ಕೆ, ವೇತನ ಕಡಿತಗೊಳಿಸಿದ್ದಾರೆ. ಮೇ ತಿಂಗಳಲ್ಲಿ ಎರಡು ದಿನದ ವೇತನ ಕಡಿತಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ನೌಕರರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಸಮಾಧಾನ ತೋಡಿಕೊಂಡರು.

ADVERTISEMENT

‘ಮೇ 16ರ ವರೆಗೂ ವೇತನಕ್ಕಾಗಿ ನೌಕರರು ಹಾಗೂ ಜಲಮಂಡಳಿ ನಡುವೆ ಹಗ್ಗಜಗ್ಗಾಟ ನಡೆದಿತ್ತು. ನಿತ್ಯವೂ ಮನವಿ ಮಾಡಿ ಬೇಸತ್ತು ಬುಧವಾರ ಒಂದು ತಾಸು ಪ್ರತಿಭಟಿಸಿದೆವು. ಆಗ ಹಿರಿಯ ಅಧಿಕಾರಿಗಳು ಸಂಜೆಯ ಹೊತ್ತಿಗೆ ವೇತನ ಪಾವತಿಗೆ ವ್ಯವಸ್ಥೆ ಮಾಡಿದರು. ಇಂದು ಶೇ 40ರಷ್ಟು ಮಂದಿಗೆ ವೇತನ ಕೈಸೇರಿದೆ. ಉಳಿದವರಿಗೆ ಗುರುವಾರ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದರು.

ಸರ್ವಾಧಿಕಾರಿ ಧೋರಣೆ: ‘ಬಡ ನೌಕರರ ವೇತನ ಕಡಿತವು ಜಲಮಂಡಳಿಯ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಕಡಿತ ಮಾಡಿರುವ ವೇತನವನ್ನು ಕೂಡಲೇ ಮರುಪಾವತಿಸಬೇಕು’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಹಳಕಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನೀರು ಪೂರೈಕೆಯ ಸಂಪೂರ್ಣ ಹೊಣೆಯನ್ನು ಮೇ 2ರಂದು ಎಲ್‌ ಅಂಡ್ ಟಿ ಕಂಪನಿಗೆ ಹಸ್ತಾಂತರಿಸುವುದಕ್ಕೆ ಮುಂಚೆಯೇ ನಮ್ಮ ಬೇಡಿಕೆಗಳನ್ನು ಪರಿಗಣಿಸಬೇಕಿತ್ತು. ಮುಷ್ಕರ ಹಿಂಪಡೆದಿದ್ದರೂನೌಕರರು ಕಂಪನಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ’ ಎಂದು ತಿಳಿಸಿದರು.

‘ನೌಕರರ ಬೇಡಿಕೆ ಕುರಿತು ಮೇ 17ರಂದು ಪಾಲಿಕೆ ಆಯುಕ್ತರೊಂದಿಗೆ ನಡೆಯಬೇಕಿದ್ದ ಸಂಘದ ಪದಾಧಿಕಾರಿಗಳ ಸಭೆ ರದ್ದಾಗಿದೆ. ಸದ್ಯದಲ್ಲೇ ಮತ್ತೊಂದು ಸಭೆಗೆ ದಿನ ನಿಗದಿಯಾಗಲಿದೆ. ಮೈಸೂರು ಮಾದರಿಯಲ್ಲಿ ಇಲ್ಲಿನ ನೌಕರರನ್ನು ಸಹ ಪಾಲಿಕೆ ನೌಕರರೆಂದು ಪರಿಗಣಿಸಿ, ಪಾಲಿಕೆಯಿಂದಲೇ ವೇತನ ಪಾವತಿಸದ ಹೊರತು ಕೆಲಸಕ್ಕೆ ವರದಿ ಮಾಡಿಕೊಳ್ಳುವುದಿಲ್ಲ’ ಎಂದರು.

‘ಯಾರೇ ಆಗಲಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಮಾಡಿದರೆ, ಆ ಅವಧಿಯ ವೇತನ ಕಡಿತಗೊಳಿಸಲಾಗುವುದು. ಜಲಮಂಡಳಿ ನೌಕರರನ್ನು ಕಂಪನಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.