ಹುಬ್ಬಳ್ಳಿ: ಅವಳಿ ನಗರಕ್ಕೆ ನೀರು ಪೂರೈಸಲು ಮಹಾನಗರ ಪಾಲಿಕೆ ಹಾಗೂ ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕ ಜೊತೆ ಕೈಜೋಡಿಸಿರುವ ಎಲ್ ಆ್ಯಂಡ್ ಟಿ ಸಂಸ್ಥೆಯ ಪ್ರಯತ್ನದ ಫಲವಾಗಿ 2024–25ರ ಸಾಲಿನಲ್ಲಿ ನೀರಿನ ತೆರಿಗೆ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. 2024–25ನೇ ಸಾಲಿನಲ್ಲಿ ನಿರೀಕ್ಷೆಯ ₹ 51.13 ಕೋಟಿಗೆ ಹೋಲಿಸಿದರೆ ₹ 47.32 ಕೋಟಿ ಅಂದರೆ ಶೇ 93ರಷ್ಟು ಸಂಗ್ರಹವಾಗಿರುವುದು ಗಮನಾರ್ಹ.
ಹಿಂದಿನ ವರ್ಷ ನೀರಿನ ತೆರಿಗೆಯ ಗುರಿ ₹ 51.06 ಕೋಟಿ ಇತ್ತು. ಇದರಲ್ಲಿ ₹ 44.47 ಕೋಟಿ (ಶೇ 87) ಸಂಗ್ರಹವಾಗಿತ್ತು. ಈ ವರ್ಷ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಹಲವು ಕ್ರಮ ಕೈಗೊಂಡಿದ್ದರ ಫಲವಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಮುಂಬರುವ ವರ್ಷದಲ್ಲಿ ನೂರಕ್ಕೆ ನೂರರಷ್ಟು ಗುರಿ ಸಾಧಿಸುವ ನಿರೀಕ್ಷೆಯನ್ನು ಮಹಾನಗರ ಪಾಲಿಕೆ ಹಾಗೂ ಎಲ್ ಆ್ಯಂಡ್ ಟಿ ಸಂಸ್ಥೆ ಹೊಂದಿದೆ.
ಅವಳಿ ನಗರದಲ್ಲಿ 1.82 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ಇವುಗಳಲ್ಲಿ ಕೆಲ ಮನೆಗಳಿಗೆ ದಿನದ 24 ತಾಸೂ ನಿರಂತರ ನೀರು ಪೂರೈಸಲಾಗುತ್ತಿದೆ. ಕೆಲವು ಪ್ರದೇಶಗಳ ಮನೆಗಳಿಗೆ ದಿನಕ್ಕೊಮ್ಮೆ, 2–3 ದಿನಗಳಿಗೊಮ್ಮೆ ಹೀಗೆ ಪ್ರತ್ಯೇಕ ಅವಧಿಗಳಲ್ಲಿ ನೀರು ಪೂರೈಸಲಾಗುತ್ತಿದೆ. ನೀರು ಬಳಸಿದ ಆಧಾರದ ಮೇಲೆ ಪ್ರತಿ ತಿಂಗಳು ನೀರಿನ ಶುಲ್ಕ ಸಂಗ್ರಹಿಸಲಾಗುತ್ತಿದೆ. ತಿಂಗಳೊಂದಕ್ಕೆ ನೀರು ಪೂರೈಸಲು ಸುಮಾರು ₹ 4 ಕೋಟಿ ಅನುದಾನ ಅವಶ್ಯಕತೆ ಇದ್ದು, ಈ ಹಣವನ್ನು ಈಗ ಶುಲ್ಕದ ರೂಪದಲ್ಲಿ ಆಕರಿಸಲಾಗುತ್ತಿದೆ. ಒಂದು ರೀತಿಯಲ್ಲಿ ಆತ್ಮನಿರ್ಭರ್ ಸಾಧಿಸಲಾಗಿದೆ.
ಕುಡಿಯುವ ನೀರು ಪೂರೈಕೆಯನ್ನು ಎಲ್ ಆ್ಯಂಡ್ ಟಿ ವಹಿಸಿಕೊಂಡ ಮೇಲೆ ನೀರಿನ ಪೂರೈಕೆ ಜೊತೆಜೊತೆಗೆ ನೀರಿನ ಶುಲ್ಕ ಸಂಗ್ರಹಿಸಲು ಕೂಡ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಯಾ ತಿಂಗಳ ಶುಲ್ಕದ ಜೊತೆಗೆ ಹಿಂದಿನ ತಿಂಗಳ ಬಾಕಿ ಕೂಡ ಸೇರಿಸಿ, ಶುಲ್ಕ ಸಂಗ್ರಹಿಸಲು ಆರಂಭಿಸಲಾಗಿದೆ. ಇದರ ಪ್ರಯತ್ನದ ಫಲವಾಗಿ ಶುಲ್ಕ ಸಂಗ್ರಹಣೆಯಲ್ಲಿ ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗುತ್ತ ಸಾಗಿದೆ.
ಶೇ 100ರಷ್ಟು ಸಂಗ್ರಹ
ವರ್ಷದ ಮೂರು ತಿಂಗಳಲ್ಲಿ ತೆರಿಗೆ ಶೇ 100ಕ್ಕಿಂತಲೂ ಹೆಚ್ಚು ಸಂಗ್ರಹವಾಗಿದೆ. ಜೂನ್ ತಿಂಗಳಿನಲ್ಲಿ ₹ 4.14 ಕೋಟಿ ಸಂಗ್ರಹದ ಗುರಿಯಿತ್ತು. ಹಿಂದಿನ ಬಾಕಿಯೂ ಸೇರಿದಂತೆ ₹ 4.42 ಕೋಟಿ (ಶೇ 107) ಸಂಗ್ರಹವಾಗಿದೆ. ಜುಲೈ ತಿಂಗಳಿನಲ್ಲಿ ನಿರೀಕ್ಷಿತ ಗುರಿಯ ₹ 3.97 ಕೋಟಿಗೆ ಹೋಲಿಸಿದರೆ ₹ 4.05 ಕೋಟಿ (ಶೇ 102) ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ನಿರೀಕ್ಷಿತ ಗುರಿಯ ₹ 4.04 ಕೋಟಿಗೆ ಹೋಲಿಸಿದರೆ ₹ 4.10 ಕೋಟಿ (ಶೇ 101) ಸಂಗ್ರಹಿಸಲಾಗಿದೆ ಎಂದು ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರತಿಭಾ ಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.