ADVERTISEMENT

ಸಾವರ್ಕರ್ ಅವಹೇಳನ ಮಾಡಿದವರ ನಾಲಿಗೆ ಸೀಳುತ್ತೇವೆ: ಪ್ರಮೋದ್ ಮುತಾಲಿಕ್‌

ಮುತಾಲಿಕ್‌ ಎಚ್ಚರಿಕೆ: ಮನೆಗೆ ಸಾವರ್ಕರ್‌, ಮನ ಮನಕೆ ಸಾವರ್ಕರ್‌ ಅಭಿಯಾನಕ್ಕೆ ಚಾಲನೆ‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 5:18 IST
Last Updated 30 ಆಗಸ್ಟ್ 2022, 5:18 IST
ಹುಬ್ಬಳ್ಳಿಯಲ್ಲಿ ವಿಶ್ವ ವಿಪ್ರ ಸೇವಾ ಟ್ರಸ್ಟ್‌ ಆಯೋಜಿಸಿದ್ದ ಮನೆ ಮನೆಗೆ ಸಾವರ್ಕರ್‌, ಮನ ಮನಕೆ ಸಾವರ್ಕರ್‌ ಅಭಿಯಾನ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಗಣ್ಯರು ‘ವೀರ ಸಾವರ್ಕರ್‌: ಸಾಹಸ, ಯಾತನೆ, ಅವಮಾನ’ ಪುಸ್ತಕವನ್ನು ಬಿಡುಗಡೆ ಮಾಡಿದರು
ಹುಬ್ಬಳ್ಳಿಯಲ್ಲಿ ವಿಶ್ವ ವಿಪ್ರ ಸೇವಾ ಟ್ರಸ್ಟ್‌ ಆಯೋಜಿಸಿದ್ದ ಮನೆ ಮನೆಗೆ ಸಾವರ್ಕರ್‌, ಮನ ಮನಕೆ ಸಾವರ್ಕರ್‌ ಅಭಿಯಾನ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಗಣ್ಯರು ‘ವೀರ ಸಾವರ್ಕರ್‌: ಸಾಹಸ, ಯಾತನೆ, ಅವಮಾನ’ ಪುಸ್ತಕವನ್ನು ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ಸಾವರ್ಕರ್ ಸೇರಿದಂತೆ ಕ್ರಾಂತಿಕಾರಿಗಳನ್ನು ಅವಹೇಳನ ಮಾಡಿದರೆ, ಅವರ ನಾಲಿಗೆ ಸೀಳುತ್ತೇವೆ’ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ವಿಶ್ವ ವಿಪ್ರ ಸೇವಾ ಟ್ರಸ್ಟ್‌ ಸೋಮವಾರ ಆಯೋಜಿಸಿದ್ದ ಸಾವರ್ಕರ್‌ ಕುರಿತ ‘ಸಾಹಸ, ಯಾತನೆ, ಅವಮಾನ’ ಪುಸ್ತಕ ವಿತರಣೆಯ ‘ಮನೆ ಮನೆಗೆ ಸಾವರ್ಕರ್‌, ಮನ ಮನಕೆ ಸಾವರ್ಕರ್‌’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮತ್ತು ಮುಸ್ಲಿಮರು ಸಾವರ್ಕರ್‌ ಅವರನ್ನು ಅವಹೇಳನ ಮಾಡಿದ್ದರಿಂದ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಇನ್ನು ಮುಂದೆಯೂ ಅವಹೇಳನ ಸಹಿಸಿಕೊಂಡಿರಲು ಸಾಧ್ಯವಿಲ್ಲ’ ಎಂದರು.

‘ಜವಾಹರಲಾಲ್‌ ನೆಹರೂ, ಮಹಾತ್ಮ ಗಾಂಧೀಜಿ, ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ ಬ್ರಿಟಿಷರಿಗೆ ಭಯ ಇರಲಿಲ್ಲ. ಅವರನ್ನು ಜೈಲಿಗೆ ಕಳಿಸಲಿಲ್ಲ. ಹೋರಾಟ, ತ್ಯಾಗದ ಪ್ರತೀಕವಾಗಿ ಅವರಿಗೆ ಮರಣಾನಂತರ ಜನರೇ ‘ವೀರ’ ಎಂಬ ಬಿರುದು ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಹಿಂದುತ್ವ, ರಾಷ್ಟ್ರೀಯತೆ ಬೆಳೆಯಬಾರದು ಎಂಬುದು ಕಾಂಗ್ರೆಸ್‌ ಉದ್ದೇಶ. ಅಧಿಕಾರ ದಾಹದ ಕಾಂಗ್ರೆಸ್, ಸ್ವಾತಂತ್ರ್ಯ ಪೂರ್ವದಿಂದಲೂ ಕ್ರಾಂತಿಕಾರಿಗಳನ್ನು ತುಳಿಯುತ್ತಾ ಬಂದಿದೆ. ಸುಭಾಷಚಂದ್ರ ಬೋಸ್, ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಸಾವಿಗೆ ಕಾರಣ ಏನೆಂದು 75 ವರ್ಷಗಳಾದರೂ ಗೊತ್ತಾಗಿಲ್ಲ. ಇನ್ನಾದರೂ ಅದನ್ನು ತಿಳಿಸಬೇಕು’ ಎಂದು ಆಗ್ರಹಿಸಿದರು.

ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಮುಖ್ಯಸ್ಥ ಧನಂಜಯ ಶಿಂಧೆ ಮಾತನಾಡಿ, ‘ದೇಶದಲ್ಲಿ ಮುಸ್ಲಿಮರು ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯಗಳು ಬೇರೆ ಯಾವ ದೇಶಗಳಲ್ಲಿಯೂ ಇಲ್ಲ. ದೇಶದ ಹೋರಾಟಗಾರರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ ಅವರ ವಿಚಾರಗಳನ್ನು ತಿಳಿಸುವ ಕೆಲಸ ಮಾಡಬೇಕು’ ಎಂದರು.

ಆಯುರ್ವೇದ ಸೇವಾ ಸಮಿತಿಯ ಅಧ್ಯಕ್ಷ ಗೋವಿಂದ ಜೋಶಿ, ‘ಪಠ್ಯಪುಸ್ತಕದಲ್ಲಿ ಸಾವರ್ಕರ್‌ ಅವರ ವಿಷಯವನ್ನು ಸೇರಿಸದ ಕಾರಣ ಇಂದಿನ ಯುವ ಪೀಳಿಗೆಗೆ ಅವರ ಬಗ್ಗೆ ಗೊತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

ಟ್ರಸ್ಟ್‌ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ‘ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಕೆಲವು ಕಿಡಿಗೇಡಿಗಳು ಹೇಳಿಕೆ ನೀಡಿದ್ದಾರೆ. ಅವರ ಬಗ್ಗೆ ತಿಳಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ವೈದ್ಯ ಜಿ.ಎಚ್‌. ನರೇಗಲ್‌, ಬಿಜೆಪಿ ರಾಜ್ಯ ಘಟಕದ ಪ್ರಕೋಷ್ಠಗಳ ಸಂಯೋಜಕ ಜಯತೀರ್ಥ ಕಟ್ಟಿ, ಸಾಮಾಜಿಕ ಕಾರ್ಯಕರ್ತ ಜಯತೀರ್ಥ ಮಳಗಿ ಮಾತನಾಡಿದರು. ಎ.ಸಿ. ಗೋಪಾಲ, ದತ್ತಮೂರ್ತಿ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.