ADVERTISEMENT

ಸೂಲಿಬೆಲೆ ಚಿಂತನೆ ಪಾಠ ಇದ್ದರೆ ತಪ್ಪೇನು? ಶಾಸಕ ಜಗದೀಶ ಶೆಟ್ಟರ್‌ ಪ್ರಶ್ನೆ

ಹುಬ್ಬಳ್ಳಿಯಲ್ಲಿ ಶಾಸಕ ಜಗದೀಶ ಶೆಟ್ಟರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 12:31 IST
Last Updated 22 ಮೇ 2022, 12:31 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಹಿಂದೂಪರ ಚಿಂತನೆಗಳನ್ನು ಶಾಲಾ ಪಠ್ಯ–ಪುಸ್ತಕಗಳಲ್ಲಿ ಅಳವಡಿಸಿದರೆ ತಪ್ಪೇನು’ ಎಂದು ಶಾಸಕ ಜಗದೀಶ ಶೆಟ್ಟರ್ ಪ್ರಶ್ನಿಸಿದರು.

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚಕ್ರವರ್ತಿ ಸೂಲಿಬೆಲೆ ಅವರ ಸಾಕಷ್ಟು ಲೇಖನಗಳನ್ನು, ಪುಸ್ತಕಗಳನ್ನು ನಾನು ಓದಿದ್ದೇನೆ. ಅವರ ಅನೇಕ ಭಾಷಣಗಳನ್ನು ಸಹ ಕೇಳಿದ್ದೇನೆ. ಹಿಂದೂ ಸಮಾಜದ ಸಂಘಟನೆ ಮತ್ತು ಉದ್ಧಾರಕ್ಕೆ ಅವರು ಶ್ರಮಿಸುತ್ತಿದ್ದಾರೆ. ಅವರಂಥ ಚಿಂತಕ, ವಾಗ್ಮಿಯನ್ನು ನಾ ಎಲ್ಲಿಯೂ ನೋಡಿಲ್ಲ. ಅಂಥವರ ವೈಚಾರಿಕ ಲೇಖನಗಳನ್ನು‌ ಶಾಲಾ ಪಠ್ಯ–ಪುಸ್ತಕದಲ್ಲಿ ಸೇರಿಸಿದರೆ ಯಾವುದೇ ತೊಂದರೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಜ್ಞಾನವೃದ್ಧಿಯಾಗಲು ಸಹಕಾರಿಯಾಗಲಿದೆ’ ಎಂದರು.

‘ಟಿಪ್ಪು ಒಬ್ಬ ನರಭಕ್ಷಕ. ಅವನ ದೌರ್ಜನ್ಯದ ಕಥೆಯನ್ನು ಚಿತ್ರದುರ್ಗ ಮತ್ತು ಕೊಡುಗು ಭಾಗದ ಸಾಮಾನ್ಯ ನಾಗರಿಕರನ್ನು ಕೇಳಿದರೂ ಹೇಳುತ್ತಾರೆ. ಅಂಥವರ ಬಗ್ಗೆ ಇರುವ ಮಾಹಿತಿ ಪಠ್ಯದಿಂದ ಕೈ ಬಿಟ್ಟರೆ ಯಾವ ತಪ್ಪೂ ಇಲ್ಲ’ ಎಂದ ಶೆಟ್ಟರ್‌, ಪಠ್ಯಪುಸ್ತಕದ ಸಮಿತಿ ರಚನೆ ಕುರಿತು ಎಚ್. ವಿಶ್ವನಾಥ ಅವರು ನೀಡುತ್ತಿರುವ ಹೇಳಿಕೆ ವೈಯಕ್ತಿಕ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೇಳಿಕೆಗಳನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಭಗತ್ ಸಿಂಗ್ ಪಠ್ಯ ಕೈ ಬಿಟ್ಟಿದ್ದಾರೆ ಎನ್ನುವ ಊಹಾಪೋಹದ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಈಗಾಗಲೇ, ಪಠ್ಯ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.

‘ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಎರಡು ದಿನಗಳ ಒಳಗೆ ಅಂತಿಮವಾಗಲಿದೆ. ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ’ ಎಂದರು.

‘ಸಚಿವ ಸ್ಥಾನವೇ ಬೇಡ ಎಂದು ಬಿಟ್ಟುಕೊಟ್ಟಿದ್ದೇನೆ. ಹಾಗಿದ್ದಾಗ, ಸಚಿವ ಸಂಪುಟ ವಿಸ್ತರಣೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದರಲ್ಲಿ ಅರ್ಥವಿಲ್ಲ. ಅಲ್ಲದೆ, ಈ ಕುರಿತು ಹುಟ್ಟಿಕೊಳ್ಳುವ ಅಂತೆ, ಕಂತೆಗಳಿಗೆ ಯಾವುದೇ ಪ್ರತಿಕ್ರಿಯೆ ಸಹ ನೀಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.