ADVERTISEMENT

ಹುಬ್ಬಳ್ಳಿ: ಎರಡು ಮಕ್ಕಳ ಕೊಂದ ತಾಯಿಯೂ ಆತ್ಮಹತ್ಯೆಗೆ ಮುಂದಾಗಿದ್ದಳೇ?

ಹಳೇ ಹುಬ್ಬಳ್ಳಿಯ ಅಯೋಧ್ಯಾನಗರದಲ್ಲಿ ಧಾರುಣ ಘಟನೆ

ಮನೋಜ ಕುಮಾರ್ ಗುದ್ದಿ
Published 12 ಡಿಸೆಂಬರ್ 2018, 19:30 IST
Last Updated 12 ಡಿಸೆಂಬರ್ 2018, 19:30 IST
ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಬುಧವಾರ ಜಮಾಯಿಸಿದ್ದ ಪರಶುರಾಮ ಹಾಗೂ ಸುಮಾ ಹುಲಕೋಟಿ ಸಂಬಂಧಿಗಳು
ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಬುಧವಾರ ಜಮಾಯಿಸಿದ್ದ ಪರಶುರಾಮ ಹಾಗೂ ಸುಮಾ ಹುಲಕೋಟಿ ಸಂಬಂಧಿಗಳು   

ಹುಬ್ಬಳ್ಳಿ: ಅಯೋಧ್ಯಾನಗರದ ಮೂರನೇ ಅಡ್ಡರಸ್ತೆಯಲ್ಲಿರುವ ತನ್ನ ಮನೆಯಲ್ಲಿ ಮಕ್ಕಳನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಸುಮಾ ಹುಲಕೋಟಿ ಯತ್ನಿಸಿದ್ದಳೇ?

ಹೌದು ಎನ್ನುತ್ತದೆ ಆಕೆ ಪೊಲೀಸರ ಎದುರು ನೀಡಿದ ಹೇಳಿಕೆ.

‘ಮಕ್ಕಳನ್ನು ವೇಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿ ನಂತರ ನಾನೂ ಅದೇ ವೇಲ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೆ. ಆದರೆ, ಮಕ್ಕಳು ವಿಲವಿಲ ಒದ್ದಾಡಿ ಸತ್ತುಹೋಗಿದ್ದನ್ನು ನೋಡಿ ನನಗೆ ಧೈರ್ಯ ಸಾಲದಾಯಿತು’ ಎಂದು ವಿಚಾರಣೆ ವೇಳೆ ಹೇಳಿದ್ದಾಗಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಾರುತಿ ಗುಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಾವಿನ ಸಂಗತಿ ಮುಚ್ಚಿಟ್ಟಿದ್ದಳು: ಮಕ್ಕಳನ್ನು ಕೊಲೆ ಮಾಡಿದ ವಿಚಾರವನ್ನು ಸುಮಾ ಪರಶುರಾಮ ಹುಲಕೋಟಿ ಕೆಲ ಗಂಟೆಗಳವರೆಗೆ ಮುಚ್ಚಿಟ್ಟಿದ್ದಳು. ಮಕ್ಕಳು ಮಲಗಿದ್ದವು. ನಂತರ ಏನಾಯಿತೋ ಗೊತ್ತಿಲ್ಲ ಎಂದು ಗಂಡ ಪರಶುರಾಮ ಹಾಗೂ ಸಂಬಂಧಿಗಳಿಗೆ ತಿಳಿಸಿದ್ದಳು. ಇದರಿಂದ ಗಾಬರಿಯಾದ ಸಂಬಂಧಿಗಳು, ಮಕ್ಕಳು ಏನೋ ತಿಂದು ಉಸಿರುಕಟ್ಟಿರಬಹುದು ಎಂದು ಶಂಕಿಸಿ ಮಕ್ಕಳ ತಲೆಯನ್ನು ಉಲ್ಟಾ ಮಾಡಿ ಬಾಯಲ್ಲಿ ಏನಾದರೂ ಬಿದ್ದಿದೆಯೇ ಎಂಬುದನ್ನು ಪರಿಶೀಲಿಸಿದ್ದರು. ನಂತರ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಗೆ ತರುವ ವೇಳೆಗಾಗಲೇ ಮಕ್ಕಳು ಕೊನೆಯುಸಿರೆಳೆದಿದ್ದರು ಎಂದು ಪರಶುರಾಮ ಹುಲಕೋಟಿ ಅವರ ಸಂಬಂಧಿ ಮಂಜುನಾಥ ತಿಳಿಸಿದರು.

‘ಗಂಡ–ಹೆಂಡತಿ ಮಧ್ಯೆ ಏನೇ ನಡೆದಿದ್ದರೂ ಅದು ಅವರ ಮಧ್ಯೆಯೇ ಮುಗಿಯಬೇಕಿತ್ತು. ಮುದ್ದಾದ ಮಕ್ಕಳನ್ನು ಕೊಲ್ಲುವ ಹಂತಕ್ಕೆ ಹೋಗಬಾರದಿತ್ತು’ ಎಂದು ಅವರು ಬೇಸರದಿಂದ ಹೇಳಿದರು.

‘ದಿಢೀರ್‌ ನಿರ್ಧಾರ ಅಪಾಯಕಾರಿ’

ಯಾವುದೇ ಘಟನೆ ನಡೆದಾಗ ಸಾವಧಾನವಾಗಿ ಯೋಚಿಸಿ ಪೂರ್ವಾಪರಗಳನ್ನು ಯೋಚಿಸಿದ್ದರೆ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಕೆಲವರಲ್ಲಿ ದಿಢೀರ್‌ ತೀರ್ಮಾನ ಕೈಗೊಳ್ಳುವ ಸ್ವಭಾವ ಇರುತ್ತದೆ. ಮಕ್ಕಳನ್ನು ಕೊಲ್ಲುವ ಮುನ್ನ ಮನೆಯಲ್ಲಿ ಏನಾದರೂ ಮಹತ್ವದ ಘಟನೆ ನಡೆದಿರಬೇಕು ಎನ್ನುತ್ತಾರೆ ಹುಬ್ಬಳ್ಳಿ ಮನಃಶಾಸ್ತ್ರಜ್ಞ ಡಾ. ಶಿವಾನಂದ ಹಿರೇಮಠ.

‘ಇಂತ ಸಂದರ್ಭಗಳಲ್ಲಿ ಮಹಿಳೆಯಲ್ಲಿ ಶೇ 80ರಷ್ಟು ಮಾನಸಿಕ ಕಾಯಿಲೆ ಇರಬೇಕು. ಇಲ್ಲವೇ ಅಹಿತಕಾರವಾದುದು ಏನೋ ಸಂಭವಿಸಿರಬೇಕು. ಹೀಗಾಗಿ, ಮೊದಲು ಮಕ್ಕಳನ್ನು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಮನಃಶಾಸ್ತ್ರಜ್ಞರನ್ನೂ ಕರೆದಿದ್ದರೆ ಆ ಮಹಿಳೆಯ ಮನಸ್ಸಿನ ಮೇಲಾದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದಿತ್ತು' ಎಂದರು.

**

ಸುಮಾ ಮಕ್ಕಳನ್ನು ಏಕೆ ಕೊಂದಳು ಎಂಬುದು ನನಗಿನ್ನೂ ತಿಳಿಯದಾಗಿದೆ. ಎಲ್ಲವೂ ಸುಗಮವಾಗಿಯೇ ನಡೆಯುತ್ತಿತ್ತು
–ಪರಶುರಾಮ ಹುಲಕೋಟಿ, ಸುಮಾ ಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.