ADVERTISEMENT

ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ | ‘ಭೂಮಿಕಾ’: ಮಹಿಳಾ ಪ‍್ರತಿಭೆ ಪ್ರದರ್ಶನ

ವತಿಯಿಂದ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:10 IST
Last Updated 26 ಅಕ್ಟೋಬರ್ 2025, 7:10 IST
<div class="paragraphs"><p>ಭೂಮಿಕಾ ಕ್ಲಬ್‌</p></div>

ಭೂಮಿಕಾ ಕ್ಲಬ್‌

   

ಧಾರವಾಡ: ಜಾದೂ, ಅಡುಗೆ ಸ್ಪರ್ಧೆ, ನೃತ್ಯ ಸೊಬಗು, ಕಿರು ನಾಟಕ, ಗಾಯನ, ಸ್ವಯಂ ರಕ್ಷಣೆ ಕಲೆ ಮಾರ್ಗದರ್ಶನ ಮೊದಲಾದ ಸಾಂಸ್ಕೃತಿಕ ಸಿರಿಯ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ರಸದೌತಣ ನೀಡಿದವು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ಹೆರಾಲ್ಡ್‌’ ವತಿಯಿಂದ ಫ್ರೀಡಂ ಹೆಲ್ದಿ ಕುಕ್ಕಿಂಗ್‌ ಆಯಿಲ್, ರೋಟರಿ ಸೆವೆನ್‌ ಹಿಲ್ಸ್‌ ಧಾರವಾಡ ಹಾಗೂ ಐ ಬಡ್ಡಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಗರದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ADVERTISEMENT

ಗಾಯನ, ನೃತ್ಯ ವೈಭವ: ನಗರದ ಗಣೇಶ ನೃತ್ಯ ಶಾಲೆಯ ತಂಡದವರು ‘ಗಣನಾಯಕಯಾ...’ ಹಾಗೂ ‘ವಂದೇ ಮಾತರಂ...’ ಗೀತೆಗೆ ನೃತ್ಯ ಪ್ರದರ್ಶಿಸಿದರು. ಗಣೇಶ ನೃತ್ಯಶಾಲೆಯ ತಂಡದವರು ಮೂಡಲ್‌ ಕುಣಿಗಲ್‌ ಕೆರೆ...’ ಹಾಡಿಗೆ ನೃತ್ಯ ಮಾಡಿದರು.

ಭಾಗ್ಯಾ ಕುಲಕರ್ಣಿ ಮತ್ತು ಸ್ನೇಹಾ ಕುಲಕರ್ಣಿ ಸಹೋದರಿಯರು ‘ಸುಲಭವಾಗಿ ಕಾಣದಂಥ ಸೃಷ್ಟಿಕರ್ತ ದೇವನ... ತಾಯಿ ನಿನ್ನ ರೂಪದಲ್ಲಿ ಸಹಜವಾಗಿ ಕಂಡೆನಾ ಸೃಷ್ಟಿಕರ್ತ ದೇವನಾ...’ ಗೀತೆಯನ್ನು ಸುಮಧುರವಾಗಿ ಹಾಡಿದರು. ಗಾಯನ, ನೃತ್ಯ ವೈಭವ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಕ ಸ್ಪರ್ಧೆ: ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷೆ ಜಯಶ್ರೀ ಜಿ.ಜೋಶಿ ಅವರು ಚೀಟಿ ಎತ್ತುವ ಮೂಲಕ ಅಡುಗೆ ಸ್ಪರ್ಧೆಗೆ ಇಬ್ಬರನ್ನು ಆಯ್ಕೆ ಮಾಡಿದರು. ಫ್ರೀಡಂ ಅಡುಗೆ ಎಣ್ಣೆ ಪಾಕ ಸ್ಪರ್ಧೆಗೆ ಆಯ್ಕೆಯಾದ ತೇಜಸ್ವಿ ನಗರದ ಅನಸೂಯ ಕಮ್ಮಾರ ಮತ್ತು ಹೊಸಯಲ್ಲಾಪುರದ ಜೈಭೀಮ್‌ನಗರದ ರೇಖಾ ಲಡ್ವಾ ಅವರು ಸ್ಪರ್ಧೆಯಲ್ಲಿ ಕೇಸರಿ ಬಾತ್‌ ತಯಾರಿಸಿದರು.

ಮಾಧುರಿ ಕುಲಕರ್ಣಿ, ಸಮಿತಾ ಸಾರಂಗ ಮತ್ತು ಸುಜಾ‌ತಾ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ಅನಸೂಯ ಅವರು ಪ್ರಥಮ ಸ್ಥಾನ ಹಾಗೂ ರೇಖಾ ದ್ವಿತೀಯ ಸ್ಥಾನ ಪಡೆದರು.

ಜಾದೂ ಪ್ರದರ್ಶನ: ಬೆಂಗಳೂರಿನ ಮ್ಯಾಜಿಶಿಯನ್‌ ಎಸ್‌.ಪಿ.ನಾಗೇಂದ್ರ ಪ್ರಸಾದ್‌ ಅವರ ಲೈವ್‌ ಮ್ಯಾಜಿಕ್‌ ಶೋ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ‘ಕೈಯಲ್ಲಿ ಒಂದೆರಡು ವಸ್ತು ಹಿಡಿದು ಮೂರು, ನಾಲ್ಕು... ಆಗಿ ಹೆಚ್ಚಿಸುವುದು, ‘ಕೈಯಲಿ ಹಿಡಿದ ವಸ್ತುವನ್ನು ಮಾಯವಾಗಿಸುವುದು’, ‘ಹಗ್ಗಕ್ಕೆ ಗಂಟು ಹಾಕಿ ನಂತರ ಗಂಟು ಇಲ್ಲದಂತೆ ಮಾಡುವುದು’ ಮೊದಲಾದ ಜಾದೂಗಳನ್ನು ಪ್ರದರ್ಶಿಸಿದರು.

ಕೆಲವು ಚಿಣ್ಣರು, ಮಹಿಳೆಯರನ್ನು ವೇದಿಕೆಗೆ ಆಹ್ವಾನಿಸಿ ಪ್ರದರ್ಶನ ನೀಡಿದರು. ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹಷೋದ್ಗಾರ ವ್ಯಕ್ತಪಡಿಸಿದರು.

ಸ್ವಯಂ ರಕ್ಷಣೆ ಕಲೆ ಮಾರ್ಗದರ್ಶನ: ನಗರದ ಟೆಕ್ವಾಂಡೊ ಕ್ರೀಡಾಪಟು ಅದಿತಿ ಪರಪ್ಪ ಅವರು ಪ್ರೇಕ್ಷಕರಿಗೆ ಸ್ವಯಂರಕ್ಷಣೆ ಕಲೆ ಸುಲಭ ಪಟ್ಟುಗಳ ಕುರಿತು ಮಾಹಿತಿ ನೀಡಿದರು. ಅಪಾಯ ಸಂದರ್ಭಗಳಲ್ಲಿ ಧೈರ್ಯ, ಆತ್ಮಸ್ಥೈರ್ಯವೇ ಸರ್ವತ್ರ ಸಾಧನ ಎಂಬುದನ್ನು ಕೆಲ ಪಟ್ಟುಗಳನ್ನು ಪ್ರದರ್ಶಿಸಿ ವಿವರಿಸಿದರು.

ಯಾವ ಭಾಗಕ್ಕೆ ಮತ್ತು ಹೇಗೆ ಹೊಡೆದರೆ ವ್ಯಕ್ತಿಯನ್ನು ಮಣಿಸಬಹುದು, ಆತನಿಂದ ತಪ್ಪಿಸಿಕೊಳ್ಳಬಹುದು ಎಂಬ ಕುರಿತು ಮಾರ್ಗದರ್ಶನ ನೀಡಿದರು. ನಮ್ಮನ್ನ ನಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಿರು ನಾಟಕ: ಶ್ರೇಯಾ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್‌ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳು ‘ಸಮಾಜದ ಬೆಳವಣಿಗೆಯಲ್ಲಿ ಯುವತಿಯರ ಪಾತ್ರ’ ಎಂಬ ಕಿರುನಾಟಕ ಪ್ರದರ್ಶಿಸಿದರು. ‘ಶಿಕ್ಷಣವೇ ಮಹಿಳಾ ಸಬಲೀಕರಣದ ಹೆಜ್ಜೆ’, ‘ಮಹಿಳೆಯ ಶಕ್ತಿಯನ್ನು ಗೌರವಿಸಿ ಮೂಡನಂಬಿಕೆಯನ್ನು ತೊಡುಹಾಕಿ’ ಮೊದಲಾದ ಸಂದೇಶಗಳನ್ನು ಸಾರಿದರು.

ಲಕ್ಕಿ ಡ್ರಾ: ಕಾರ್ಯಕ್ರಮದಲ್ಲಿ ನಡೆದ ಲಕ್ಕಿ ಡ್ರಾದಲ್ಲಿ ನಗರದ ಸಪ್ತಾಪೂರದ ಸುಮಿತ್ರಾ ಪಿ.ಟಿ ಅವರು ₹15 ಸಾವಿರ ಮೌಲ್ಯದ ವಾಟರ್‌ ಪ್ಯೂರಿಫೈರ್‌ ಅನ್ನು ಪಡೆದುಕೊಂಡರು.

ರೋಟರಿ ಕ್ಲಬ್‌ ಆಫ್‌ ಸೆವೆನ್‌ ಹಿಲ್ಸ್‌ನ ಅಧ್ಯಕ್ಷ ಮಾಧುರಿ ಬಿರಾದಾರ ಮಾತನಾಡಿ, ರೋಟರಿ ಸಂಸ್ಥೆಯು ಪೊಲಿಯೊ ನಿರ್ಮೂಲನೆಗೆ ಶ್ರಮಿಸುತ್ತಿದೆ. ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದರು.

ಕಾರ್ಯದರ್ಶಿ ಡಾ.ದೃಷ್ಟಿ ದೇಶಪಾಂಡೆ ಹಂಪಿಹೊಳಿ ಮಾತನಾಡಿ, ರೋಟರಿ ವತಿಯಿಂದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್‌ ಸ್ಥಾಪಿಸಲಾಗಿದೆ. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮೊದಲಾದ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ರೋಟರಿ ಕ್ಲಬ್‌ ಆಫ್‌ ಸೆವೆನ್‌ ಹಿಲ್ಸ್‌ನ ಸೇವಾ ಪ್ರಯಾಣದ ವಿಡಿಯೊ ಪ್ರದರ್ಶಿಸಲಾಯಿತು. ಸ್ನೇಹಾ ನಿರೂಪಣೆ ಮಾಡಿದರು. ಪ್ರಜಾವಾಣಿ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥ ರಾಹುಲ ಬೆಳಗಲಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಬ್ಯೂರೊ ಮುಖ್ಯಸ್ಥ ವೆಂಕಟರಾಜು, ಭೂಮಿಕಾ ಕ್ಲಬ್‌ ಕಾರ್ಯಕ್ರಮ ಮುಖ್ಯಸ್ಥ ಪ್ರಮೋದ್‌, ಫ್ರೀಡಂ ಆಯಿಲ್ ಉತ್ತರ ಕರ್ನಾಟಕ ಭಾಗದ ವ್ಯವಸ್ಥಾಪಕ ಕಲ್ಪೇಶ್‌ ಅವರು ಪ್ರಮಾಣ ಪತ್ರ, ಸ್ಮರಣಿಕೆ ವಿತರಿಸಿದರು.

ಫ್ರೀಡಂ ಹೆಲ್ದಿ ಕುಕ್ಕಿಂಗ್‌ ಆಯಿಲ್ ಧಾರವಾಡ ವಿಭಾಗದ ದೀಪಕ್, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಬಳಗದವರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.