ADVERTISEMENT

ಸಮಾನ ಅವಕಾಶ ಪ್ರಪಂಚ ಸೃಷ್ಟಿಸೋಣ...

ಹುಬ್ಬಳ್ಳಿ–ಧಾರವಾಡ ಮೆಟ್ರೊ– ಮಹಿಳಾ ದಿನ ವಿಶೇಷ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:45 IST
Last Updated 6 ಮಾರ್ಚ್ 2020, 19:45 IST
ಒಟಿಲ್ಲೆ ಅನ್ಬನ್‌ಕುಮಾರ್‌
ಒಟಿಲ್ಲೆ ಅನ್ಬನ್‌ಕುಮಾರ್‌   

ಆತ್ಮೀಯ ಮಹಿಳೆಯರೇ,

‘ನಾವು ನಮ್ಮನ್ನು ಸ್ವೀಕರಿಸುವ ಬಗೆ, ನಮ್ಮೊಡನೆ ವರ್ತಿಸುವ ರೀತಿ, ಯಾವುದನ್ನು ಸ್ವೀಕರಿಸಬೇಕು, ತಿರಸ್ಕರಿಸಬೇಕು ಹಾಗೂ ಯಾವುದನ್ನು ಬೆಂಬಲಿಸಬೇಕು ಎನ್ನುವುದನ್ನು ಜನರಿಗೆ ಕಲಿಸಿಕೊಡುತ್ತೇವೆ...’

ಯುವ ವಯಸ್ಸಿನಿಂದಲೂ ನಾನು, ನನ್ನನ್ನು ಒಬ್ಬ ವ್ಯಕ್ತಿ ಎಂದೇಭಾವಿಸಿ, ನಂಬಿಕೊಂಡಿದ್ದೇನೆ. ಆದ್ದರಿಂದ ನನ್ನನ್ನು ಮಹಿಳೆಯೆಂದು ಭಾವಿಸಿ, ವಿಶೇಷ ರೀತಿಯಲ್ಲಿ ಪರಿಗಣಿಸಬೇಕು ಎಂದು ನಾನು ಎಂದಿಗೂ ನಿರೀಕ್ಷಿಸಿಲ್ಲ. ಈ ನಿಟ್ಟಿನಲ್ಲಿ ನಾನೂ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಆ ಸಂದರ್ಭದಲ್ಲಿ ಸದೃಢವಾಗಿ ನಿಂತಾಗ, ವಿಶ್ವವೇ ರೂಪಾಂತರಗೊಂಡು ಎಲ್ಲ ರೀತಿಯಲ್ಲೂ ಸಮಾನತೆಯನ್ನು ಪಡೆದುಕೊಳ್ಳುತ್ತೇವೆ, ಪಡೆದುಕೊಂಡಿದ್ದೇನೆ. ಯಾವುದೇ ಕೆಲಸವನ್ನು ಮಾಡುವಾಗ ಇದು ನನಗಾಗಿ ಮಾತ್ರವಲ್ಲ, ಇದು ಎಲ್ಲರಿಗೂ ಎಂದು ಯಾವಾಗಲೂ ಭಾವಿಸುತ್ತೇನೆ.

ADVERTISEMENT

ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಆಗಿರುವುದರಿಂದ, ಪ್ರತಿ ದಿನವೂ ವ್ಯಕ್ತಿಯಾಗಿ ನನ್ನ ಸಾಮರ್ಥ್ಯಕ್ಕನುಗುಣವಾಗಿ ಸವಾಲುಗಳಿಗೆ ನಾನು ತೆರೆದುಕೊಳ್ಳುತ್ತೇನೆ. ಆದರೆ, ನಾನು ಮಹಿಳೆ ಎಂದು ಎಂದಿಗೂ ನನ್ನನ್ನು ಸೀಮಿತಗೊಳಿಸಿಕೊಂಡಿಲ್ಲ.ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಮಾಡುವ ಕಾರ್ಯಗಳಿಗೆ ‘ಒಟಿಲ್ಲೆ, ಮಹಿಳೆಯಾಗಿದ್ದರೂ ಎಲ್ಲವನ್ನೂ ಅದ್ಭುತವಾಗಿ ನಿರ್ವಹಿಸುತ್ತಾರೆ’ ಎಂಬ ಪ್ರಶಂಸನಾ ಹೇಳಿಕೆಗಳು ಬಂದಿವೆ. ಇಂತಹ ಬಹುಪಾಲು ‌ಹೇಳಿಕೆಗಳು ಮಹಿಳೆಯರ ಬಗೆಗಿನ ಪೂರ್ವಭಾವಿ ಕಲ್ಪನೆಗಳು ಎಂಬುದರ ಬಗ್ಗೆ ನನಗೆ ಅರಿವಿದೆ. ಹೀಗಿದ್ದರೂ, ನಾನು ಲಿಂಗ ತಾರತಮ್ಯದ ಸಮಸ್ಯೆಯನ್ನು ನನ್ನ ಕ್ಷೇತ್ರದಲ್ಲಿ ಎದುರಿಸಿಲ್ಲ. ಏಕೆಂದರೆ, ನಾನು ಆ ರೀತಿಯ ಆಲೋಚನೆಯಿಂದ ಕೆಲಸ ಮಾಡುವುದಿಲ್ಲ. ಹೀಗಾಗಿ, ಲಿಂಗಾಧಾರಿತವಾಗಿರುವ ಯಾವುದೇ ವಿಷಯದ ಬಗ್ಗೆ ಮಾತನಾಡುವುದನ್ನು ಮನೆ, ಕಚೇರಿ ಅಥವಾ ಸಮಾಜದಲ್ಲಿ ಎಂದಿಗೂ ನಾನು ಪ್ರೋತ್ಸಾಹಿಸುವುದಿಲ್ಲ.

ನನ್ನ ಎರಡೂ ಕ್ಷೇತ್ರದಲ್ಲೂ ನನ್ನ ದೃಷ್ಟಿ ಹಾಗೂ ಧ್ಯೇಯದ ಧ್ವನಿಯನ್ನು ಯಾವುದೇ ಮುಜುಗರವಿಲ್ಲದೆ ಪ್ರಸ್ತುತಪಡಿಸುತ್ತೇನೆ. ಪ್ರಾರಂಭದಲ್ಲಿ ನಾನು ಕೆಲವು ಸವಾಲುಗಳನ್ನು ಎದುರಿಸಿದ್ದೇನೆ. ಏಕೆಂದರೆ, ಕಥೆಗಳಲ್ಲಿ ಹೇಳುವಂತೆ ಮಹಿಳೆಯರಿಗೆ ಮಾರ್ಗದರ್ಶನ, ರಕ್ಷಣೆ ಬೇಕಿದೆ ಎಂದು ಬಹಳಷ್ಟು ಮಹಿಳೆಯರು ಈಗಲೂ ನಂಬಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ವಲಯದ ಹಲವು ಮಂಡಳಿ ಹಾಗೂ ಸಮಿತಿಗಳಲ್ಲಿ ನನ್ನ ಭಾವನೆ ವ್ಯಕ್ತಪಡಿಸಿದಾಗ ಮಹಿಳೆ ಎಂಬ ಕಾರಣಕ್ಕೆ ಸಲಹೆ, ಅಭಿಪ್ರಾಯಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರದಿರುವುದೂ ಇದೆ. ಆದರೆ, ನನ್ನ ವಯಸ್ಸು ಮತ್ತು ಮಹಿಳೆ ಎಂಬ ಕಾರಣಕ್ಕೆ ನನ್ನ ಮೌಲ್ಯಯುತ ಅಭಿಪ್ರಾಯಗಳನ್ನು ತೆಗೆದುಹಾಕುವ ಸಂದರ್ಭಗಳು ಸಾಕಷ್ಟು ದಿನ ಹಾಗೇ ಉಳಿಯಲಿಲ್ಲ. ನನ್ನ ಸಾಮರ್ಥ್ಯದ ಅರಿವಾಗಿರುವುದರಿಂದ ಇದೀಗ ನನ್ನ ಭಾಗವಹಿಸುವಿಕೆ ಹಾಗೂ ಮಾರ್ಗದರ್ಶನ ಅವರಿಗೆ ಮುಖ್ಯಭಾಗವಾಗಿದೆ.

ಹೆಚ್ಚಿನ ಹುಡುಗಿಯರು ಮತ್ತು ಮಹಿಳೆಯರು ನಾಯಕತ್ವದ ಪಾತ್ರ ವಹಿಸಿಕೊಂಡು ಇತರರಿಗೆ ಆದರ್ಶಪ್ರಾಯರಾಗಬೇಕು ಎಂದು ನಾನು ಬಯಸುತ್ತೇನೆ. ಸಮಾಜ ನಮ್ಮನ್ನು ಲಿಂಗಾಧಾರವಾಗಿ ತಾರತಮ್ಯ ಮಾಡುತ್ತಿದೆ ಎಂದಾದರೆ, ನಾವು ಆ ಸಮಾಜದ ಅವಿಭಾಜ್ಯ ಅಂಗ ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಪುರುಷರು ಮತ್ತು ಮಹಿಳೆಯರೆಂಬ ಲಿಂಗಭೇದವಿಲ್ಲದೆ ಪ್ರತಿಯೊಬ್ಬರನ್ನೂ ಗೌರವಿಸುವ ಮತ್ತು ಸಮಾನ ಅವಕಾಶಗಳನ್ನು ನೀಡುವ ಪ್ರಪಂಚವನ್ನು ನಾವು ಸೃಷ್ಟಿಸೋಣ.

ಸದೃಢ ಮಹಿಳೆಯಾಗಿ.. ನಾವು ಅವರಾಗೋಣ; ಅವರನ್ನು ನಾವು ಗುರುತಿಸೋಣ; ಅವರನ್ನು ನಾವು ಬೆಳೆಸೋಣ..

ಒಟಿಲ್ಲೆ ಅನ್ಬನ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.