ADVERTISEMENT

ಮಿಸಳ್‌, ಉಸುಳಿ ರುಚಿ ಸವಿಯಲು ಹುಬ್ಬಳ್ಳಿಯ ಸುವರ್ಣ ಮಂದಿರಕ್ಕೆ ಬನ್ನಿ

ಶ್ರೀಪಾದ ಜೋಶಿ
Published 16 ಅಕ್ಟೋಬರ್ 2019, 8:49 IST
Last Updated 16 ಅಕ್ಟೋಬರ್ 2019, 8:49 IST
   

ನೋಡಿದಾಕ್ಷಣ ಅದು ಒಂದು ಹೋಟೆಲ್ ಇರಬಹುದು ಎಂಬ ಕಲ್ಪನೆಯೂ ಬಾರದು. ಹುಬ್ಬಳ್ಳಿಯ ದುರ್ಗದಬೈಲಿನ ಜನನಿಬಿಡ ರಸ್ತೆಯಲ್ಲಿ ಇರುವ ಈ ಹೋಟೆಲ್‌ಗೆ 80 ವರ್ಷಗಳ ಇತಿಹಾಸವಿದೆ.

ಹೋಟೆಲ್ ಹೆಸರು ಸಹ ವಿಶಿಷ್ಟವಾಗಿದೆ. ಇದರ ಹೆಸರು ಹೋಟೆಲ್ ಸುವರ್ಣ ಮಂದಿರ. ಹೋಟೆಲ್ ಎಂಬುದು ಚಿಕ್ಕ ಅಕ್ಷರದಲ್ಲಿದ್ದರೆ ಸುವರ್ಣ ಮಂದಿರ ಎಂಬುದು ದೊಡ್ಡ ಅಕ್ಷರಗಳಲ್ಲಿವೆ. ಹೀಗಾಗಿ ಹೋಟೆಲ್ ಶಬ್ದವನ್ನು ಗಮನಿಸದೇ ಹೋದರೆ ಇದಾವುದೋ ದೇವಸ್ಥಾನವೇ ಇರಬೇಕು ಎಂಬ ಭಾವನೆ ಮೂಡಿದರೆ ಅಚ್ಚರಿಯೇನಿಲ್ಲ.

ಮಡಕೆ ಕಾಳಿನ ಉಸಳಿ

ಅವಲಕ್ಕಿ, ಸಾಂಬರ್‌ ಬೆರೆಸಿದ ಮಿಸಳ್ (ಮಿಸಾಳ್) ಇಲ್ಲಿನ ವಿಶೇಷತೆ. ಮಡಕೆ ಕಾಳಿನ ಉಸಳಿ (ಉಸುಳಿ) ಇಲ್ಲಿನ ಮತ್ತೊಂದು ವಿಶೇಷ ತಿನಿಸು. ಇವೆರಡನ್ನು ತಿನ್ನಲು ಅನೇಕ ವರ್ಷಗಳಿಂದ ಮಕ್ಕಳು, ಮೊಮ್ಮಕಳ ಜತೆ ಬಂದು ತಿಂಡಿ ತಿನಿಸು ಸವಿದು ಜನರು ವಾಪಸಾಗುವುದು ಕಂಡುಬರುತ್ತದೆ.

ADVERTISEMENT

ಈ ಹೋಟೆಲ್‌ನ ಇತಿಹಾಸದ ಪ್ರಥಮ ಪುಟ ಆರಂಭವಾಗುವುದು 80 ವರ್ಷಗಳ ಹಿಂದಿನಿಂದ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಗ್ಗೋಣದ ವೆಂಕಟರಮಣ ಶಂಭು ಭಟ್ಟ ಎಂಬ ಯುವಕರೊಬ್ಬರು ಉದ್ಯೋಗ ಅರಸಿಕೊಂಡು ಹುಬ್ಬಳ್ಳಿಗೆ ಬಂದರು.ವೆಂಕಟರಮಣ ಭಟ್ಟರಿಗೆ ವಯಸ್ಸಾದ ಬಳಿಕ ಅವರ ಮಕ್ಕಳಾದ ಗಜಾನನ ಭಟ್ಟ ಹಾಗೂ ಮಹಾಬಲೇಶ್ವರ ಭಟ್ಟರು ಹೋಟೆಲ್‌ ಮುನ್ನಡೆಸಿಕೊಂಡು ಬಂದರು. ಈಗ ಗಜಾನನ ಭಟ್ಟರ ಮಗ ಅರುಣ ಮತ್ತು ಮಹಾಬಲೇಶ್ವರ ಭಟ್ಟರ ಮಗ ಪ‍್ರಕಾಶ ಭಟ್ಟರು ನಡೆಸುತ್ತಿದ್ದಾರೆ.

ಮಿಸಳ್

ಹೋಟೆಲ್‌ನಲ್ಲಿ ಮೂವರು ಹೆಂಗಸರು ಮತ್ತು ಮೂವರು ಗಂಡಸರು ಕೆಲಸ ಮಾಡುತ್ತಿದ್ದು ನರಗುಂದ ತಾಲ್ಲೂಕಿನ ಕದಲಿಯ ಸಿದ್ದಪ್ಪ ಹೊರಕೇರಿ (ಸಂತರು) ರುಚಿಕಟ್ಟಾದ ತಿಂಡಿ ತಿನಿಸುಗಳನ್ನು ಮಾಡುತ್ತ ಹೋಟೆಲ್‌ನ ಜನಪ್ರಿಯತೆಯನ್ನು ಹೆಚ್ಚಿಸಿದ್ದಾರೆ.

ಇಬ್ರಾಹಿಂಪುರ

ಆರು ದಶಕಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಆಗ ಬಹುಶಃ ಇವರ ಅಜ್ಜ ಗಲ್ಲೆ ಮೇಲೆ ಕೂಡ್ರುತ್ತಿದ್ದರು ಎಂದು ಕಾಣುತ್ತದೆ. ಆಗಿನಿಂದಲೂ ಇಲ್ಲಿನ ತಿಂಡಿ ತಿನಿಸುಗಳ ರುಚಿ ಮತ್ತು ಗುಣಮಟ್ಟ ಒಂದೇ ತೆರನಾಗಿದೆ ಎಂದರು ಬಂಕಾಪುರದ ಆರ್‌ಎಂಪಿ ವೈದ್ಯ ಎಸ್‌.ಬಿ. ಇಬ್ರಾಹಿಂಪುರ.

ಹಳೆಯ ಕುರ್ಚಿ, ಟೇಬಲ್...

ಗಮನ ಸೆಳೆಯುವ ಹಳೆಯ ಕಾಲದ ಕುರ್ಚಿ, ಟೇಬಲ್‌ಗಳು ಇಲ್ಲಿನ ವಿಶೇಷ. ಮೊದಲೆಲ್ಲ ಕುರ್ಚಿ, ಟೇಬಲ್‌ಗಳು ಇರಲಿಲ್ಲ. ಹೋಟೆಲ್‌ನ ಅಂಗಳದಲ್ಲಿ ಚಪ್ಪಲಿ ಬಿಟ್ಟು ಕಾಲು, ಕೈ ತೊಳೆದುಕೊಂಡು ಬಂದು ಮಣೆಯ ಮೇಲೆ ಕುಳಿತು ಉಪಾಹಾರ ಸೇವಿಸುತ್ತಿದ್ದರು. ಈಗ ಕಾಲಕ್ಕೆ ತಕ್ಕಂತೆ ಟೇಬಲ್‌, ಕುರ್ಚಿಗಳು ಬಂದಿವೆ. ಅಷ್ಟೇ ಏಕೆ ಸಿ.ಸಿ.ಟಿವಿ ಕ್ಯಾಮೆರಾವನ್ನೂ ಅಳವಡಿಸಿ ಆಧುನಿಕತೆಗೆ ಶರಣೆನ್ನಲಾಗಿದೆ.

ದರಪಟ್ಟಿ
ಪ್ರಕಾಶ್‌ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.