ಬಿ.ವೈ. ವಿಜಯೇಂದ್ರ - ಬಸನಗೌಡ ಪಾಟೀಲ ಯತ್ನಾಳ
ಹುಬ್ಬಳ್ಳಿ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೀನು ಮತ್ತೊಬ್ಬರ ಭಿಕ್ಷೆಯ ಮೇಲೆ ಶಾಸಕನಾಗಿರುವೆ. ಧಮ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆ ಎದುರಿಸು. ನಾನೂ ಸಹ ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಭಗವಾಧ್ವಜದ ಮೇಲೆ ಚುನಾವಣೆ ಎದುರಿಸುವೆ. ನನಗೆ ಮುಸ್ಲಿಂ ಮತಗಳು ಬೇಕಿಲ್ಲ’ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲೆಸೆದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ನಿಷ್ಠುರವಾಗಿ ಮಾತನಾಡಿದ ಕಾರಣಕ್ಕೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಾನು ಯಾವುದೇ ಪಕ್ಷ ಕಟ್ಟಲ್ಲ. ಹಿಂದುತ್ವದಿಂದ ದೂರ ಸರಿದಿರುವ ಬಿಜೆಪಿಯನ್ನು ಮತ್ತೆ ಹಿಂದುತ್ವಕ್ಕೆ ಮರಳಿ ತರಲು ಹೋರಾಟ ನಡೆಸುತ್ತೇನೆ’ ಎಂದು ಪುನರುಚ್ಚರಿಸಿದರು.
‘ಉಚ್ಚಾಟನೆಯನ್ನು ಖಂಡಿಸಿ, ಈಗಾಗಲೇ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಹಾಗೂ ಹಿಂದೂ ಸಂಘಟನೆಗಳಿಂದ ರಾಜ್ಯದಲ್ಲಿ ಪ್ರತಿಭಟನೆ ನಡೆದಿವೆ. ನಾನು ಯಾರಿಗೂ ದುಡ್ಡುಕೊಟ್ಟು ನನ್ನ ಪರವಾಗಿ ಹೋರಾಟ ಮಾಡಿ ಎಂದು ಹೇಳಿಲ್ಲ. ಅಭಿಮಾನ, ಪ್ರೀತಿ, ವಿಶ್ವಾಸದಿಂದ ನನ್ನ ಪರವಾಗಿ ಹೋರಾಟ ಮಾಡುತ್ತಿದ್ದಾರೆ’ ಎಂದರು.
ನ್ಯಾಯಾಂಗ ತನಿಖೆ ಸ್ವಾಗತಾರ್ಹ:
‘ಬೆಳಗಾವಿಯಲ್ಲಿ ಈ ಹಿಂದೆ ನಡೆದ ಅಧಿವೇಶನದ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣವನ್ನು ಧಾರವಾಡ ಹೈಕೋರ್ಟ್ ಪೀಠ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಿ, ಕಾಲಮಿತಿಯಲ್ಲಿ ವರದಿ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಕೇಳುತ್ತಿರುವುದು ನಮ್ಮ ನ್ಯಾಯಯುತವಾದ ಹಕ್ಕು’ ಎಂದರು.
‘ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಅವರ ರಕ್ಷಣೆಗಾಗಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಕಾನೂನು ಘಟಕ ಸ್ಥಾಪನೆ ಮಾಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.