ಧಾರವಾಡ ತಾಲ್ಲೂಕಿನ ದುಬ್ಬನಮರಡಿ ಗ್ರಾಮದ ಹೊಲದಲ್ಲಿ ರೈತರೊಬ್ಬರು ಹಳದಿ ರೋಗಬಾಧಿತ ಹೆಸರುಗಿಡಗಳನ್ನು ಕಿತ್ತುಹಾಕಿದರು
ಧಾರವಾಡ: ಹಲವೆಡೆ ಹೆಸರು ಬೆಳೆಗೆ ಹಳದಿ ರೋಗ (ನಂಜುರೋಗ) ಕಾಣಿಸಿಕೊಂಡಿದೆ. ಇಳುವರಿ ಕುಸಿಯುವ, ಬೆಳೆ ನಾಶವಾಗುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.
ತಾಲ್ಲೂಕಿನ ದುಬ್ಬನಮರಡಿ, ಅಗಸನಹಳ್ಳಿ, ಕೋಟೂರ, ತಡಕೋಡ, ಕುರುಬಗಟ್ಟಿ, ಮಾದನಬಾವಿ, ಕೊಟಬಾಗಿ, ಗರಗ, ಅಮ್ಮಿನಬಾವಿ, ಶಿವಳ್ಳಿ, ಹಾರೋಬೆಳವಡಿಯಲ್ಲಿ ಕೆಲವು ಹೊಲಗಳಲ್ಲಿ ರೋಗ ಕಂಡುಬಂದಿದೆ.
ಹೆಸರು ಗಿಡದ ಎಲೆಯ ಮೇಲೆ ಹಳದಿ ಚುಕ್ಕೆಗಳಾಗಿವೆ. ಇದರಿಂದ ಗಿಡದ ಬೆಳವಣಿಗೆಗೆ ಕುಂಠಿತವಾಗಿ ಚಿಗುರೊಡೆಯದೆ ಹಳದಿ ಬಣ್ಣಕ್ಕೆ ತಿರುಗಿದವೆ. ಇಂತಹ ಗಿಡಗಳನ್ನು ರೈತರು ಕಿತ್ತು ಹಾಕುತ್ತಿದ್ದಾರೆ.
ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಆಗಾಗ ತುಂತುರು ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ಇದೆ. ಮುಂಗಾರು ಪೂರ್ವ ಹಾಗೂ ಆರಂಭದಲ್ಲಿ ಹದ ಮಳೆಯಾಗಿದ್ದು, ಜಿಲ್ಲೆಯಾದ್ಯಂತ 96 ಸಾವಿರ ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ.
‘ಎರಡು ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೇನೆ. ಬೀಜ ಬಿತ್ತನೆ, ರಸಗೊಬ್ಬರ, ಎಡೆ ಖರ್ಚು ಸೇರಿ
ಪ್ರತಿ ಎಕರೆಗೆ ₹25 ಸಾವಿರ ವೆಚ್ಚವಾಗಿದೆ. ಎರಡು ಬಾರಿ ಔಷಧ ಸಿಂಪಡಿಸಿದರೂ ಹಳದಿ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಹಾಕಿದ ಬಂಡವಾಳವೂ ವಾಪಸ್ ಸಿಗುವ ಭರವಸೆ ಇಲ್ಲದಂತಾಗಿದೆ’ ಎಂದು ದುಬ್ಬನಮರಡಿ ರೈತ ಈರಪ್ಪ ಲಕ್ಕುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಳದಿ ರೋಗಕ್ಕೆ ವೈಟ್ ಪ್ಲೈ (ಬಿಳಿ ನೊಣ) ಕಾರಣವಾಗಿದ್ದು, ಒಂದು ಗಿಡದಿಂದ ಗಿಡಕ್ಕೆ ಹೋಗಿ
ರಸ ಹೀರುವುದರಿಂದ ರೋಗ ಹರಡುತ್ತದೆ. ಅರಂಭದಲ್ಲೇ ನಿಯಂತ್ರಿಸಬೇಕು. ರೋಗಪೀಡಿತ ಗಿಡಗಳನ್ನು ರೈತರು ಕಿತ್ತು ಹೂಳಬೇಕು. ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು. ರೋಗದಿಂದ ಬೆಳೆಗಳಲ್ಲಿ ಸಾರಜನಕ ಕಡಿಮೆಯಾಗಿರುತ್ತದೆ. ರೈತರು 19-19-19 ರಸಗೊಬ್ಬರ ಅಥವಾ ನ್ಯಾನೊ ಯೂರಿಯಾ ಸಿಂಪಡಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಸವರಾಜ ಏಣಗಿ ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಹೆಸರು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೆಳೆಗಳನ್ನು ಉಳಿಸಿಕೊಳ್ಳಲು ಪರಿಹಾರ ತಿಳಿಸಬೇಕುಮಲ್ಲಿಕಾರ್ಜುನ ಬಾಳನಗೌಡ್ರ, ಶಿರೂರ ಗ್ರಾಮದ ರೈತ
‘ರೋಗ ಹತೋಟಿಗೆ ಮುಂದಾಗಿ’
‘ಹಳದಿ ರೋಗ ಹತೋಟಿಗೆ ಒಂದು ಲೀಟರ್ ನೀರಿಗೆ ಪ್ರೋಪಿಕೋನಜೋಲ್ ಮೂರು ಗ್ರಾಂ, ಗಂಧಕ ಅಥವಾ ಕಾರ್ಬನ್‍ಡೈಜೀಮ್ ಅಥವಾ 1 ಮಿ.ಲೀ. ಹೇಕ್ಸಾಕೋನಜೋಲ್ ಬೆರೆಸಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ ಅಂತರ ವ್ಯಾಪಿ ಕೀಟನಾಶಕಗಳಾದ 5 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್‍ಎಲ್ ಅಥವಾ ಮುರು ಗ್ರಾಂ ಅಸಿಟಾಮಿಪ್ರೀಡ್ 20 ಎಸ್‍ಪಿ ಅಥವಾ 3 ಗ್ರಾಂ ಥಯಾಮಿಥಾಕ್ಸಾಂ 25 ಡಬ್ಲೂಪಿ ಬೆರೆಸಿ ಸಿಂಪಡಿಸಬೇಕು’ ಎಂದು ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.