ADVERTISEMENT

ಯೋಗ ದೇಶಾಭಿಮಾನದ ಪ್ರತೀಕ: ಉಪರಾಷ್ಟ್ರಪತಿ ನಾಯ್ಡು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 14:22 IST
Last Updated 2 ಫೆಬ್ರುವರಿ 2020, 14:22 IST
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಭಾನುವಾರ ಪಾಲ್ಗೊಂಡಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡ ಬಾಬಾ ರಾಮದೇವ್
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಭಾನುವಾರ ಪಾಲ್ಗೊಂಡಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡ ಬಾಬಾ ರಾಮದೇವ್   

ಹುಬ್ಬಳ್ಳಿ: ಬದುಕಿನ ಉತ್ಸಾಹ ಹೆಚ್ಚಿಸುವ ಯೋಗ ಸುಂದರ ಕಲೆಯೂ ಹೌದು, ವಿಜ್ಞಾನವೂ ಹೌದು; ನಿತ್ಯ ಯೋಗಾಸನ ಮಾಡುವುದು ದೇಶಭಕ್ತಿಯ ಪ್ರತೀಕ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಬಣ್ಣಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಅವರು ಬಾಬಾ ರಾಮದೇವ್‌ ಜೊತೆ ಯೋಗ ಮಾಡಿದ ಬಳಿಕ ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ತೆಲುಗು ಭಾಷೆ ಮಿಶ್ರಿತವಾಗಿ ಮಾತನಾಡಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯ ನಾಯ್ಡು 'ಬಾಬಾ ರಾಮದೇವ್ ದೇಶದ ಎಲ್ಲ ಭಾಗಕ್ಕೂ ಪತಂಜಲಿ ಯೋಗ ತಲುಪಿಸಿದ್ದಾರೆ. ಅವರು ವಯಸ್ಸಿನಲ್ಲಿ ನನಗಿಂತಲೂ ಚಿಕ್ಕವರಾದರೂ ಯೋಗ ಕೌಶಲಕ್ಕಾಗಿ ಅವರನ್ನು ಮೆಚ್ಚಿ ನಾನೂ ಕೂಡ ಗುರು ಎಂದು ಕರೆಯುತ್ತೇನೆ‘ ಎಂದಾಗ ಭಾರಿ ಕರತಾಡನ ಕೇಳಿಬಂತು.

ADVERTISEMENT

’ನಾಗರಿಕರು ಯೋಗದ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಯೋಗಾಸನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯಕ್ಕೆ ಅತ್ಯಗತ್ಯ. ಇದನ್ನು ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಪ್ರಾಚೀನ ಕೊಡುಗೆಯಾಗಿದೆ. ಕೋಸ್ಟರಿಕಾ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಶಾಲೆಗಳಲ್ಲಿ ಯೋಗಾ ಕಡ್ಡಾಯಗೊಳಿಸಿದ್ದು ಕಂಡು ನಮ್ಮ ದೇಶದ ಬಗ್ಗೆ ಹೆಮ್ಮೆಯಾಯಿತು‘ ಎಂದರು.

’ಆಧುನಿಕ ಕಾಲದ ಒತ್ತಡದ ಭರದಲ್ಲಿ ಯುವಜನತೆ ಸ್ವಯಂ ನಿಯಂತ್ರಣ ಹಾಗೂ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಯೋಗ ರೂಢಿಸಿಕೊಂಡರೆ ಯುವಜನತೆ ದೇಶದ ಅಮೂಲ್ಯ ಆಸ್ತಿಯಾಗುತ್ತಾರೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ ಸರಳ ಮತ್ತು ಉಚಿತ ಸೂತ್ರವಾಗಿದೆ‘ ಎಂದರು.

’ಜಗತ್ತಿನ ಎಲ್ಲಾ ದೇಶಗಳು ಯೋಗದ ಕಡೆಗೆ ವಾಲುತ್ತಿವೆ. ಭಾರತ ತನ್ನ ಇತಿಹಾಸದಲ್ಲಿ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ. ಭಾರತೀಯ ಸಮಾಜದ ಹಿಂದೂ ಧರ್ಮ ಕೇವಲ ಧರ್ಮವಷ್ಟೇ ಅಲ್ಲ, ಶ್ರೇಷ್ಠ ಜೀವನ ಪದ್ಧತಿಯಾಗಿದೆ‘ ಎಂದು ಬಣ್ಣಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೀದರ್ ಸಂಸದ ಭಗವಂತ ಖೂಬಾ, ಉದ್ಯಮಿ ಆನಂದ ಸಂಕೇಶ್ವರ, ಪತಂಜಲಿ ಯೋಗ ಸಮಿತಿಯ ಕರ್ನಾಟಕದ ಮುಖ್ಯಸ್ಥ ಭವರಲಾಲ್ ಆರ್ಯ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.