ಧಾರವಾಡ: ‘ಯುವಜನರಲ್ಲಿ ಸ್ಪರ್ಧಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ಸೃಜನಶೀಲ ಗುಣ ಮೈಗೂಡಿಸಲು ಯುವಜನೋತ್ಸವಗಳು ಸಹಕಾರಿಯಾಗಿವೆ. ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನ ಉತ್ಸವ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳು ಒಗ್ಗಟ್ಟು, ಬದ್ಧತೆ ಮತ್ತು ಸ್ವಾಭಿಮಾನ ವೃದ್ಧಿಸುತ್ತವೆ. ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಮೂಲಕ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಸಮಯ ಮತ್ತು ಸಾಮರ್ಥ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮ, ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು ಸಮಾಜದ ಉನ್ನತಿಗೆ ಬಳಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ಯುವಸಮುದಾಯದ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಕರ್ನಾಟಕ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಎಂ.ಜಿ. ದಳಪತಿ, ವಾರ್ತಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಎಂ. ಹಿರೇಮಠ ಇದ್ದರು.
ಸ್ಪರ್ಧೆಯಲ್ಲಿ ಸೋಲು–ಗೆಲುವು ಸಹಜ. ಸೋಲನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು. ಚೆನ್ನಾಗಿ ತಯಾರಿ ನಡೆಸಿ ಯಶಸ್ಸು ಸಾಧಿಸಬೇಕುಮಲ್ಲಿಕಾರ್ಜುನ ತೊದಲಬಾಗಿ ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ
‘ನಾಯಕತ್ವ ಗುಣ ಬೆಳೆಸಿಕೊಳ್ಳಿ’
‘ಯುವಜನೋತ್ಸವಗಳಲ್ಲಿ ಯುವಜನರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಯುವಸಮುದಾಯವು ತಮ್ಮ ಪ್ರತಿಭೆಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಬೇಕು. ಅಧ್ಯಯನದ ಜತೆಗೆ ಕೌಶಲಗಳನ್ನು ಕಲಿಯಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ನಿರ್ದಿಷ್ಟವಾದ ಗುರಿ ಇರಬೇಕು. ಶ್ರದ್ಧೆ ಮತ್ತು ಸತತ ಪರಿಶ್ರಮದಿಂದ ಯಶಸ್ಸು ಸಾಧಿಸಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.