ADVERTISEMENT

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ದಾಖಲೆ ನಾಶಕ್ಕೆ ಮೊಬೈಲ್‌ ಒಡೆದ ದಿವ್ಯಾ ಹಾಗರಗಿ

ಬೆಳಿಗ್ಗೆಯಿಂದ ಆರೋಪಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 10:51 IST
Last Updated 30 ಏಪ್ರಿಲ್ 2022, 10:51 IST
 ದಿವ್ಯಾ ಹಾಗರಗಿ
ದಿವ್ಯಾ ಹಾಗರಗಿ   

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪದಡಿ ಬಂಧಿತರಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಬಂಧಿಸುವ ಮುನ್ನವೇ ತಮ್ಮ ಮೊಬೈಲ್‌ ಒಡೆದು ಹಾಕಿದ್ದಾರೆ. ಅದರಲ್ಲಿ ಯಾವುದೇ ದಾಖಲೆ ಸಿಗಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ ಮಹಾರಾಷ್ಟ್ರದ ಪುಣೆಯ ಬಳಿ ಅವರನ್ನು ಬಂಧಿಸಲು ಸಿಐಡಿ ಅಧಿಕಾರಿಗಳ ತಂಡ ತೆರಳಿತ್ತು. ದೂರದಿಂದಲೇ ಪೊಲೀಸರನ್ನು ಕಂಡ ದಿವ್ಯಾ, ತಮ್ಮ ಕೈಯಲ್ಲಿದ್ದ ಮೊಬೈಲನ್ನು ಎಸೆದರು. ನೆಲಕ್ಕೆ ಕುಳಿತು ಜೋರಾದ ದನಿಯಲ್ಲಿ ಅಳಲು ಶುರು ಮಾಡಿದರು ಎಂದು ಬಂಧನಕ್ಕೆ ತೆರಳಿದ್ದ ತಂಡದವರು ಮಾಹಿತಿ ನೀಡಿದ್ದಾರೆ.

ಆದರೆ, ಎಸೆದ ಮೊಬೈಲ್‌ ಏನಾಯಿತು? ಅದರ ಒಡೆದ ತುಣುಕುಗಳು, ಸಿಮ್‌ಕಾರ್ಡ್‌ ಪೊಲೀಸರಿಗೆ ಸಿಕ್ಕವೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ADVERTISEMENT

ಬೆಳಿಗ್ಗೆಯಿಂದಲೇ ವಿಚಾರಣೆ: ದಿವ್ಯಾ ಸೇರಿ ಏಳು ಮಂದಿಯನ್ನು 11 ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಶುಕ್ರವಾರ ರಾತ್ರಿ ನಗರದ ಮಹಿಳಾ ನಿಲಯದಲ್ಲಿ ಇರಿಸಿದ್ದ ದಿವ್ಯಾ ಅವರನ್ನು ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಬಳಿಕ ಸಿಐಡಿ ಅಧಿಕಾರಿಗಳು ಐವಾನ್‌ ಇ ಶಾಹಿ ಅತಿಥಿಗೃಹಕ್ಕೆ ಕರೆತಂದು ವಿಚಾರಣೆ ಆರಂಭಿಸಿದರು.

ದಿವ್ಯಾ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶಿಕ್ಷಕಿಯರಾದ, ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ಹೊತ್ತಿದ್ದ ಅರ್ಚನಾ, ಸುನಂದಾ, ಮಹಾರಾಷ್ಟ್ರದ ಸೊಲ್ಲಾಪುರದ ಮರಳು ಉದ್ಯಮಿಗಳಾದ ಸುರೇಶ ಕಾಟೇಗಾಂವ, ಕಾಳಿದಾಸ ಇವರ ಕಾರ್‌ ಚಾಲಕ ಸದ್ದಾಂ ಅವರನ್ನೂ ವಿಚಾರಣೆಗೆ ತೆಗೆದುಕೊಂಡರು.

ಉಡಾಫೆ ತೋರಿದ ಸುರೇಶ:

ಇಲ್ಲಿನ ಐವಾನ್‌ ಇ ಶಾಹಿ ಅತಿಥಿಗೃಹದ ಕೋಣೆಯೊಲ್ಲಿ ನಡೆದ ವಿಚಾರಣೆ ವೇಳೆ, ಶೌಚಕ್ಕಾಗಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಹೊರಬಂದಿದ್ದ ಆರೋಪಿ ಸುರೇಶ ಕಾಟೇಗಾಂವ, ಹೊರಗೆ ನಿಂತಿದ್ದ ಮಾಧ್ಯಮದವನ್ನು ಕಂಡು ‘ತಗಿತಗಿ ಚೆನ್ನಾಗಿ ತಗಿ... (ವಿಡಿಯೊ ಚೆನ್ನಾಗಿ ಮಾಡು)’ ಎಂದು ಲೇವಡಿ ಮಾಡುವ ರೀತಿಯಲ್ಲಿ ಹೇಳಿದರು.

ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಹಾಗೂ ಅವರಿಗೆ ಆಶ್ರಯ ನೀಡಿದ ಆರೋಪದಡಿ ಸುರೇಶ, ಕಾಳಿದಾಸ, ಸದ್ದಾಂ ಅವರನ್ನು ಬಂಧಿಸಲಾಗಿದೆ ಎಂಬುದು ಅಧಿಕಾರಿಗಳ ಮಾಹಿತಿ.

ಎ.ಸಿ ಹಾಕಿಸಿ ಎಂದ ಬೆಂಬಲಿಗರು:

ದಿವ್ಯಾ, ಅರ್ಚನಾ, ಸುನಂದಾ, ಜ್ಯೋತಿ ಅವರನ್ನು ಶುಕ್ರವಾರ ರಾತ್ರಿ ನಗರದ ಮಹಿಳಾ ನಿಲಯದಲ್ಲಿ ಇರಿಸಲು ಕರೆದೊಯ್ಯಲಾಯಿತು. ಅಷ್ಟೊತ್ತಿಗೆ ಸ್ಥಳಕ್ಕೆ ಬಂದುನಿಂತಿದ್ದ ದಿವ್ಯಾ ಅವರ ಕೆಲವು ಬೆಂಬಲಿಗರು ‘ಈ ನಿಲಯದಲ್ಲಿ ಫ್ಯಾನ್‌ ಮಾತ್ರ ಇದೆ. ಬೇಸಿಗೆಯಲ್ಲಿ ಅವರಿಗೆ ಕಷ್ಟವಾಗುತ್ತದೆ. ಕೂಲರ್‌ ಅಥವಾ ಎ.ಸಿ ವ್ಯವಸ್ಥೆ ಮಾಡಿ’ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.