ADVERTISEMENT

ಸೋಮಶೇಖರ ರೆಡ್ಡಿ ವಿರುದ್ಧ ಎಫ್‌ಐಆರ್‌

ಮುಸ್ಲಿಮರ ಬೃಹತ್‌ ಪ್ರತಿಭಟನೆ: ಮನೆಗೆ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 19:45 IST
Last Updated 4 ಜನವರಿ 2020, 19:45 IST
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು   

ಬಳ್ಳಾರಿ: ‘ಹಿಂದೂಗಳನ್ನು ಕೆಣಕಿದರೆ ಪರಿಸ್ಥಿತಿ ಬೇರೆಯೇ ಆಗುತ್ತೆ...’ ಎಂದು ಬಹಿರಂಗ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ವಿರುದ್ಧ ಮುಸ್ಲಿಮರು ಶನಿವಾರ ಇಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ರೆಡ್ಡಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಈ ನಡುವೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಅಡಿ ರೆಡ್ಡಿ ವಿರುದ್ಧ ಇಲ್ಲಿನ ಗಾಂಧಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಿವೇಕ್‌ ಎಂಬುವರು ದೂರು ನೀಡಿದ್ದಾರೆ.

ಸೋಮಶೇಖರ ರೆಡ್ಡಿ ವಿರುದ್ಧ ಶುಕ್ರವಾರವೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕಿತ್ತು ಎಂದು ಆಗ್ರಹಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ನಿಯೋಗ ಬೆಂಗಳೂರಿನಲ್ಲಿ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದೆ.

ADVERTISEMENT

ರೆಡ್ಡಿ ಸಹೋದರರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಲಿಖಾನ್‌ ಕೂಡ ಬಳ್ಳಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುಸ್ಲಿಮರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಸೂರ್ಯನಾರಾಯಣರೆಡ್ಡಿ, ಆಂಜನೇಯಲು ಮತ್ತಿತರರು ಭಾಗವಹಿಸಿದ್ದರು.

ನಗರದ ಕೌಲ್‌ ಬಜಾರ್‌ನಿಂದ ಆರಂಭವಾದ ರ‍್ಯಾಲಿಯು ಪ್ರಮುಖ ರಸ್ತೆಗಳ ಮೂಲಕ ಗಡಿಗಿ ಚೆನ್ನಪ್ಪ ವೃತ್ತಕ್ಕೆ ಬಂದು ತಲುಪಿತು. ಬೃಹತ್‌ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ ಮುಸ್ಲಿಮರು ರ‍್ಯಾಲಿಯುದ್ದಕ್ಕೂ ರೆಡ್ಡಿ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ವೇಳೆ ರೆಡ್ಡಿ
ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೊ ವೈರಲ್ ಆಗಿದೆ.

ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾಡಿದ ಮನವಿಗೆ ಯಾರೊಬ್ಬರೂ ಕಿವಿಗೊಡಲಿಲ್ಲ.

‘ರೆಡ್ಡಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಪ್ರತಿಭಟನಕಾರರು ಶಾಂತಿ ಕಾಪಾಡಬೇಕು’ ಎಂದು ಎಸ್ಪಿ ಮನವಿ ಮಾಡಿದರು. ಆಗ ಪ್ರತಿಭಟನಕಾರರು ‘ಎಸ್ಪಿ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಬಳ್ಳಾರಿ ವಲಯದ ಐ.ಜಿ.ಪಿ ನಂಜುಂಡಸ್ವಾಮಿ ಕೈಯಲ್ಲಿ ಲಾಠಿ ಹಿಡಿದು ಬಂದೋಬಸ್ತ್‌ ಮಾಡಿದರು.

ಈ ನಡುವೆ, ನಗರದಲ್ಲೇ ಇದ್ದ ರೆಡ್ಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಶನಿವಾರ ಭೇಟಿಯಾಗಿ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.