ADVERTISEMENT

ಆಸ್ಪತ್ರೆ ಹೆರಿಗೆಯಿಂದ ಶಿಶು ಮರಣ ನಿಯಂತ್ರಣ ಸಾಧ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:45 IST
Last Updated 19 ಅಕ್ಟೋಬರ್ 2012, 5:45 IST

ಗಜೇಂದ್ರಗಡ: ಜನನ ವೇಳೆ ಮಕ್ಕಳ ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹತ್ವದ ಯೋಜನೆಗಳನ್ನು ರೂಪಿಸಿವೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಸರ್ಕಾರಿ ಯೋಜನೆಯ ಸದುಪಯೋಗಕ್ಕೆ ಮುಂದಾಗಿ ಮಕ್ಕಳ ಮರಣ ಪ್ರಮಾಣ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹಿರಿಯ ಆರೋಗ್ಯ ಸಹಾಯಕ ವಿ.ಡಿ. ಬೆನ್ನೂರ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಉಣಚಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಮರಣ ಪ್ರಮಾಣ (ಐಎಂಆರ್) ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. 

 ಹೀಗಾಗಿ ಆಸ್ಪತ್ರೆ ಹೆರಿಗೆಯನ್ನು ಕಡ್ಡಾಯಗೊಳಿಸಬೇಕು. ಆಸ್ಪತ್ರೆ ಹೆರಿಗೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಪ್ರಸೂತಿ ಆರೈಕೆ, ಹೆರಿಗೆ ಭತ್ಯೆ, ಮಡಿಲು ಕಿಟ್ಟು ಮುಂತಾದ ಸೌಲಭ್ಯಗಳು ದೊರೆಯುತ್ತವೆ. ಈ ಕಾರಣಕ್ಕಾಗಿ ಮಹಿಳೆಯರು ಆಸ್ಪತ್ರೆ ಹೆರಿಗೆಯನ್ನು ಕಡ್ಡಾಯಗೊಳಿಸಬೇಕೆಂದು ಮನವಿ ಮಾಡಿದರು.

ಪತಿ-ಪತ್ನಿ ತಪಾಣೆ ಕಡ್ಡಾಯ: ಗರ್ಭಿಣಿ ಮಹಿಳೆಯರು ತಪಾಸಣೆ ವೇಳೆ ತಮ್ಮ ಪತಿಯನ್ನು ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಕರೆದುಕೊಂಡು ಬರಬೇಕು. ಆದರೆ, ಮಹಿಳೆ ಮಾತ್ರ ತಪಾಸಣೆಗೆ ಹಾಜರಾಗುತ್ತಾರೆ. ಪತಿಯರು ಮಾತ್ರ ತಪಾಸಣೆಯಿಂದ ದೂರ ಉಳಿಯುತ್ತಿದ್ದಾರೆ. ಇದರಿಂದಾಗಿ ಕೆಲ ಗೌಪ್ಯ ಸಂಗತಿಗಳು ಗೌಣವಾಗಿಯೇ ಉಳಿದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಗರ್ಭಿಣಿ ಹಾಗೂ ಪತಿ ಇಬ್ಬರೂ ತಪಾಸಣೆಗೆ ಒಳಪಡುವುದು ಸೂಕ್ತ ಎಂದರು.

ಶಹರಿ ರೋಜಗಾರ ಯೋಜನೆ ಒಕ್ಕೂಟದ ಅಧ್ಯಕ್ಷೆ ತುಳಸಾ ಪತ್ತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗರ್ಭಿಣಿಯರು ರಕ್ತಹೀನತೆಯಿಂದ ಹೊರ ಬರಬೇಕಾದರೆ ಪೌಷ್ಟಿಕ ಆಹಾರ ಸೇವನೆಗೆ ಅದ್ಯತೆ ನೀಡಬೇಕು. ತಾಯಿ ಹಾಗೂ ಮಗುವಿನ ಆರೈಕೆಯಲ್ಲಿ ಕುಟುಂಬದ ಪಾತ್ರ ಮಹತ್ವದ್ದು. ಹೆರಿಗೆ ಸಮಯದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವುದಕ್ಕಾಗಿಯೇ ಸರ್ಕಾರ ಆಸ್ಪತ್ರೆ ಹೆರಿಗೆಯನ್ನು ಕಡ್ಡಾಯಗೊಳಿಸಿದೆ.
 
ಜೊತೆಗೆ ಗರ್ಭಿಣಿಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯಯುತ ಹೆರಿಗೆಗೆ ಮುಂದಾಗಬೇಕು ಎಂದರು.  ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪಿ.ಎಂ. ದಿವಾಣದ, ಸಂಧ್ಯಾ ದೇಸಾಯಿ, ಎಸ್.ಬಿ. ಹಿರೇಮಠ, ಪೀರವ್ವ ನದಾಫ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.