ADVERTISEMENT

ಕಾಯಕಲ್ಪಕ್ಕೆ ಕಾದಿರುವ ಮುಂಡರಗಿ ಕೋಟೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 12:44 IST
Last Updated 3 ಜೂನ್ 2018, 12:44 IST
ಮುಂಡರಗಿಯ ಕನಕಪ್ಪನ ಗುಡ್ಡದ ಮೇಲಿನ ಕೋಟೆ ಕಾವಲು ಗೋಪುರ
ಮುಂಡರಗಿಯ ಕನಕಪ್ಪನ ಗುಡ್ಡದ ಮೇಲಿನ ಕೋಟೆ ಕಾವಲು ಗೋಪುರ   

ಮುಂಡರಗಿಯ ಕನಕಪ್ಪನ ಗುಡ್ಡ ಪ್ರವಾಸಿ ತಾಣ. ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿರುವ ಈ ಗುಡ್ಡದಲ್ಲಿ ಲಕ್ಷ್ಮೀಕನಕನರಸಿಂಹ, ಆಂಜನೇಯ ಹಾಗೂ ಮಲ್ಲಿಕಾರ್ಜುನ ದೇವಸ್ಥಾನಗಳಿವೆ. ಗುಡ್ಡದ ಮುಂದಿರುವ ಹಿರೇಹಳ್ಳ ಕೂಡ ಆಕರ್ಷಣೀಯ ಸ್ಥಳ. ವಾರಾಂತ್ಯದಲ್ಲಿ ಪಟ್ಟಣದ ಜನರು ಇಲ್ಲಿಗೆ ವಿಹಾರಕ್ಕೆ ಬರುತ್ತಾರೆ.

ಕನಕಪ್ಪನ ಗುಡ್ಡದ ಮೇಲಿನ ಕಲ್ಲಿನ ಕೋಟೆ 400 ವರ್ಷಗಳಷ್ಟು ಹಳೆಯದು. ಸದ್ಯ ಇದು ಶಿಥಿಲಾವಸ್ಥೆ ತಲುಪಿದೆ.ಈ ಕೋಟೆಯನ್ನು ಮುಂಡರಗಿ ಮಂಡಗೈ ಭೀಮರಾಯನ ವಂಶಸ್ಥರು ಕಟ್ಟಿದ್ದಾರೆ ಎನ್ನುತ್ತದೆ ಇತಿಹಾಸ. ಕಣ್ಣಪ್ಪ ನಾಯಕ ಕಟ್ಟಿಸಿದ್ದಾನೆ ಎನ್ನುತ್ತದೆ ಮತ್ತೊಂದು ಐತಿಹ್ಯ. ಕೋಟೆ ನಿರ್ಮಿಸಿದವರು ಯಾರು ಎನ್ನುವುದರ ಕುರಿತು ಖಚಿತತೆ ಇಲ್ಲ. ಇತಿಹಾಸ ತಜ್ಞರು ಹಾಗೂ ಸಂಶೋಧಕರು ಆಸಕ್ತಿ ವಹಿಸಿದರೆ ನೈಜ ಇತಿಹಾಸ ಬೆಳಕಿಗೆ ಬರುತ್ತದೆ.

ಕನಕಪ್ಪನ ಗುಡ್ಡದ ನೆತ್ತಿಯ ಮೇಲೆ 4 ಎಕರೆ ಪ್ರದೇಶದಲ್ಲಿ ಈ ಕೋಟೆ ನಿರ್ಮಿಸಲಾಗಿದೆ. ಕೋಟೆಯ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮದಲ್ಲಿ ತಲಾ ಒಂದೊಂದು ಬುರುಜುಗಳನ್ನು (ಕಾವಲು ಗೋಪುರ) ನಿರ್ಮಿಸಲಾಗಿದೆ. ಸದ್ಯ ಈ ನಾಲ್ಕು ಬುರುಜುಗಳಲ್ಲಿ ಎರಡು ಬುರುಜುಗಳು ಸಂಪೂರ್ಣ ಹಾಳಾಗಿದ್ದು,ಇನ್ನೇನು ನೆಲಕ್ಕುರುಳುವ ಹಂತದಲ್ಲಿವೆ.

ADVERTISEMENT

ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಸುಮಾರು 15 ಅಡಿ ಎತ್ತರದ ಹಾಗೂ ನಾಲ್ಕು ಅಡಿ ಅಗಲದ ಗೋಡೆ ನಿರ್ಮಿಸಲಾಗಿದೆ. ಮಳೆ, ಗಾಳಿ, ಬಿಸಿಲಿಗೆ ಸಿಲುಕಿ ಕೋಟೆಯ ಗೋಡೆಗಳು ಭಾಗಶಃ ಧರೆಗುರುಳಿವೆ. ನಾಲ್ಕೂ ದಿಕ್ಕುಗಳಲ್ಲಿ ಕಲ್ಲಿನ ದ್ವಾರಗಳಿದ್ದವು. ಈಗ ಕೇವಲ ಪೂರ್ವ ದಿಕ್ಕಿನಲ್ಲಿರುವ ದ್ವಾರ ಮಾತ್ರ ಉಳಿದುಕೊಂಡಿದೆ. ಕೋಟೆಯ ಮಧ್ಯದಲ್ಲಿ ಪುರಾತನ ಮಲ್ಲಿಕಾರ್ಜುನ ದೇವಸ್ಥಾನವಿದೆ.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ದಲ್ಲಿ ಕನಕಪ್ಪನ ಗುಡ್ಡದ ಮೇಲಿರುವ ಕೋಟೆಯು ಸದಾ ಚಟುವಟಿಕೆಯಿಂದ ಕೂಡಿತ್ತು. ಮುಂಡರಗಿ ಮಂಡಗೈ ವಂಶಸ್ಥರಾಗಿದ್ದ ಭೀಮರಾಯರೊಂದಿಗೆ ಡಂಬಳ, ಹಮ್ಮಿಗಿ, ಶಿರಹಟ್ಟಿ, ಕೊಪ್ಪಳ ಮೊದಲಾದ ದೇಸಾಯಿ ಮನೆತನಗಳು ಬ್ರಿಟಿಷರೊಂದಿಗೆ ಹೋರಾಡಿದ್ದರು ಎನ್ನುತ್ತದೆ ಇತಿಹಾಸ. ಶಿಥಿಲಗೊಳ್ಳುತ್ತಿರುವ ಈ ಕೋಟೆಯನ್ನು ಪ್ರಾಚ್ಯವಸ್ತು ಇಲಾಖೆು ಜೀರ್ಣೋದ್ಧಾರ ಮಾಡಬೇಕು ಎನ್ನುವುದು ಪಟ್ಟಣದ ನಿವಾಸಿಗಳ ಆಗ್ರಹ.

ಕನಕಪ್ಪನ ಗುಡ್ಡದ ಪಶ್ಚಿಮ ದಿಕ್ಕಿನಲ್ಲಿ ಲಕ್ಷ್ಮಿ ಕನಕನರಸಿಂಹ ದೇವಸ್ಥಾನವಿದೆ. ದಕ್ಷಿಣಕ್ಕೆ ಆಂಜನೇಯ ದೇವಸ್ಥಾನವಿದೆ. ಗುಡ್ಡದ ಮುಂದೆ ಹಿರೇಹಳ್ಳವಿದೆ. ಕಪ್ಪತಗುಡ್ಡದಲ್ಲಿ ಭಾರಿ ಮಳೆ ಸುರಿದರೆ ಹಿರೇಹಳ್ಳಕ್ಕೆ ನೀರು ಬರುತ್ತದೆ. ಈಗ ಕನಕಪ್ಪನ ಗುಡ್ಡದ ಮುಂದೆ ಚಕ್ ಡ್ಯಾಂ ನಿರ್ಮಿಸಲಾಗಿದ್ದು, ಸಾಕಷ್ಟು ನೀರು ಸಂಗ್ರಹವಾಗಿದೆ.

‘ಕನಕಪ್ಪನ ಗುಡ್ಡದ ಮುಂದೆ ಉದ್ಯಾನ ನಿರ್ಮಿಸಿದರೆ ಅದೊಂದು ಪ್ರೇಕ್ಷಣೀಯ ಸ್ಥಳ ಆಗುತ್ತದೆ. ಈ ಕುರಿತು ಪುರಸಭೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ದೇವಪ್ಪ ಇಟಗಿ.

ಕಾಶೀನಾಥ ಬಿಳಿಮಗ್ಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.