ADVERTISEMENT

ಕ್ರಿಸ್ತನ ಸ್ಮರಣೆ; ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:30 IST
Last Updated 25 ಡಿಸೆಂಬರ್ 2012, 6:30 IST

ಗದಗ: ಹೊಸ ವರ್ಷದ ಮುನ್ನ ಆಗಮಿಸುವ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರದಿಂದ ಆಚರಿಸುತ್ತಾರೆ. ಶಾಂತಿ, ಪ್ರೀತಿ, ಸಮಾನತೆ, ಸಂದೇಶವನ್ನು ಜಗತ್ತಿಗೆ ಸಾರುವ ಹಬ್ಬ ಕ್ರಿಸ್‌ಮಸ್. ಮಹಾತ್ಮಾ  ಕ್ರಿಸ್ತನ ಜನ್ಮದಿನ ಕೇವಲ ಕ್ರಿಶ್ಚಿಯನ್ನರ ಹಬ್ಬವಾಗಿ ಉಳಿದಿಲ್ಲ; ಶಾಂತಿಯನ್ನು ಬಯಸುವ ಎಲ್ಲ ಜನರ ಹಬ್ಬವಾಗಿದೆ.   

ಗದಗ-ಬೆಟಗೇರಿ ಅವಳಿ ನಗರದ ಕ್ರೈಸ್ತ ಬಾಂಧವರ ಮನೆಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಕ್ರಿಸ್‌ಮಸ್ ಹಬ್ಬದ ತಯಾರಿ ನಡೆದಿತ್ತು. ಸುಣ್ಣ, ಬಣ್ಣಗಳಿಂದ ಮನೆಗಳನ್ನು ಸಿಂಗರಿಸ ಲಾಗಿದೆ. ಮಾರುಕಟ್ಟೆಯ ವಿವಿಧ ಅಂಗಡಿಗಳಲ್ಲಿ ಕಾಗದದಲ್ಲಿ ತಯಾರಿಸಿದ ವಿವಿಧ ಬಣ್ಣಗಳ ನಕ್ಷತ್ರಗಳು ಕಣ್ಮನ ಸೆಳೆಯುತ್ತಿವೆ. ಶುಭಾಶಯ ಪತ್ರಗಳು ಆಹ್ವಾನಿಸುತ್ತಿವೆ. ಕ್ರಿಸ್‌ಮಸ್ ಟ್ರೀಗಳಿಗೆ ಅಳವಡಿಸಿರುವ ದೀಪಗಳು ಬೆಳಕು ಚೆಲ್ಲುತ್ತಿವೆ. 

ಅವಳಿ ನಗರದ ಬಾಸೆಲ್ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿ ಸುಮಾರು 700 ಕ್ರಿಶ್ಚಿಯನ್ ಕುಟುಂಬಗಳು ಇವೆ. ಮಿಷನ್ ಕಾಂಪೌಂಡ್ ಸೇರಿದಂತೆ ನಗರದ ಕ್ರಿಶ್ಚಿಯನ್ ಬಾಂಧವರ ಮನೆಗಳಲ್ಲಿ ಹಬ್ಬದ ಸಡಗರ ಮತ್ತು ಸಿದ್ಧತೆಗಳು ಭರದಿಂದ ಸಾಗಿತು.

ದಯಾಮಯನಾದ ಕ್ರಿಸ್ತನಿಗೆ ನಗರದ 19 ಚರ್ಚ್‌ಗಳಲ್ಲೂ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಇಎಸ್‌ಐ ಚರ್ಚ್, ಸಿಎಸ್‌ಐ ಚರ್ಚ್, ರೋಮನ್ ಕ್ಯಾಥೊಲಿಕ್ ಚರ್ಚ್, ಎಸ್‌ಪಿಜಿ ಚರ್ಚ್ ಪ್ರಮುಖ ವಾದವು. ವುರ್ಥ ಮೆಮೊರಿಯಲ್ ಸಿಎಸ್‌ಐ ಚರ್ಚ್‌ನಲ್ಲಿ ಫಾದರ್ ಜಾರ್ಜ್ ದೊಡ್ಡಮನಿ       25ರಂದು ಬೆಳಿಗ್ಗೆ 9 ಗಂಟೆಗೆ ಜನತೆಗೆ ಸಂದೇಶ ನೀಡಲಿದ್ದಾರೆ.

ಹಬ್ಬದ ಅಂಗವಾಗಿ ಮಹಿಳೆಯರು ಖರ್ಚಿಕಾಯಿ, ಕೇಕ್, ರೋಸ್ ಕುಕ್, ಚಕ್ಕಲಿ ಸಿದ್ಧಪಡಿಸುವಲ್ಲಿ ಬ್ಯುಸಿಯಾಗಿದ್ದರೆ, ಯುವಕರು `ಗೋದಳಿ' ನಿರ್ಮಿಸುವುದಲ್ಲಿ ಮಗ್ನರಾಗಿರುವುದು ಹಬ್ಬದ ಹಿಂದಿನ ದಿನ ಕಂಡು ಬಂತು. ವಿವಿಧ ಬಗೆಯ ತಿನಿಸುಗಳನ್ನು ಮಾಡಿ ನೆರೆ ಹೊರೆಯವರಿಗೆ ಹಂಚುತ್ತಾರೆ.  ಆರಾಧನೆ ಸಂದರ್ಭದಲ್ಲಿ ಬಡವರಿಗೆ ವಸ್ತ್ರ ವಿತರಿಸಲಾಗುತ್ತದೆ.

ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರ ಧರ್ಮಗ್ರಂಥ `ಬೈಬಲ್' ಪಠಣ ಮತ್ತು ವಿಶೇಷ ಪ್ರಾರ್ಥನೆಗಳು ಚರ್ಚ್‌ಗಳಲ್ಲಿ ನಡೆಯುತ್ತಿದೆ. ಕುಟುಂಬದವರು ಹೊಸ ಬಟ್ಟೆ ಧರಿಸಿಕೊಂಡು ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವ ದೃಶ್ಯ ಕಂಡು ಬಂತು.

ಸೋಮವಾರ (ಡಿ. 24) ಮಧ್ಯರಾತ್ರಿ 12 ಗಂಟೆ ಚರ್ಚ್‌ಗಳಲ್ಲಿ ಯೇಸುವಿನ ಜನ್ಮದಿನವನ್ನು ಆಚರಿಸ ಲಾಗುತ್ತದೆ. ಫಾದರ್ ಜನ್ಮದಿನದ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಬೆಳಗಿನ ಜಾವ ಎರಡು ಗಂಟೆಯವರೆಗೂ ನೆರವೇರುತ್ತದೆ.  ಕ್ರಿಸ್ತನ ಜನನದ ನಂತರ ಕ್ರಿಸ್‌ಮಸ್ ಕೇಕ್ ಅನ್ನು ಎಲ್ಲರಿಗೂ ಹಂಚಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ನಂತರ ಮನೆಗೆ ತೆರಳಿ ಹಬ್ಬದೂಟ ಮಾಡುತ್ತಾರೆ.

ಬೆಟಗೇರಿಯ ವುರ್ಥ ಮೆಮೊರಿಯಲ್ ಸಿಎಸ್‌ಐ ಚರ್ಚ್‌ನಲ್ಲಿ ಹಬ್ಬದ ಹಿಂದಿನ ಕ್ರಿಸ್ತ ಜಯಂತಿ ಕುರಿತ ಕಿರು ನಾಟಕ ಪ್ರದರ್ಶನ ನಡೆಯಿತು. ಮಕ್ಕಳು ಹಾಡು ಹೇಳಿದರು. ಫಾದರ್ ಸಂದೇಶ ನೀಡಿದರು. ಬಳಿಕ ಎಲ್ಲರೂ ಒಂದೆಡೆ ಸೇರಿ ಮೇಣದ ಬತ್ತಿ ಹಚ್ಚಿದರು. ಸಿಹಿ ವಿತರಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

ಗೋದಲಿ: ಯೇಸು ದನದ ಕೊಟ್ಟಿಗೆಯಲ್ಲಿ ಜನಿಸಿದ ಸಂಕೇತವಾಗಿ ಪ್ರತಿ ಮನೆಯಲ್ಲಿ `ಗೋದಲಿ' ನಿರ್ಮಿಸುತ್ತಾರೆ. ಗೋದಳಿ ಪಕ್ಕದಲ್ಲಿ ಕ್ರಿಸ್‌ಮಸ್ ಟ್ರಿ ನೆಟ್ಟಿರುತ್ತಾರೆ.  ಮನೆ ಎದುರು ನಿರ್ಮಿಸಿರುವ ಗೋದಳಿಯಲ್ಲಿ ಸೋಮವಾರ ರಾತ್ರಿ ಬಾಲ ಯೇಸುವನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದ ನಂತರ ಎಲ್ಲರೂ ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಾಂತಾಕ್ಲಾಸ್: ಫಾದರ್ ಆಫ್ ಕ್ರಿಸ್‌ಮಸ್ ಎಂದೇ ಖ್ಯಾತಿ ಪಡೆದ ಸಾಂತಾಕ್ಲಾಸ್ ಮನೆ ಮನೆಗೆ ಬಂದು ಚಾಕೋಲೇಟ್ ಗಿಫ್ಟ್ ನೀಡುತ್ತಾನೆ ಎನ್ನುವ ನಂಬಿಕೆ ಇದೆ. ಸಾಂತಾಕ್ಲಾಸ್ ಮೊದಲ ಹೆಸರು `ಸೇಂಟ್ ನಿಕೋಲಾಸ್'. ಮಕ್ಕಳು ಹಠ ಹಿಡಿದರೆ ಸಾಂತಾಕ್ಲಾಸ್ ಅಜ್ಜ ಬಂದು ಚಾಕೋಲೇಟ್ ನೀಡುತ್ತಾನೆ ಎಂದು ನಂಬಿಸುತ್ತಾರೆ. ಹಬ್ಬದ ದಿವಸ  ಚರ್ಚ್‌ಗಳ ಬಳಿ ಸಾಂತಾಕ್ಲಾಸ್ ವೇಷಧಾರಿ ನಿಂತಿರುತ್ತಾನೆ.

ಕತ್ತಲೆ ನೀಗಿಸಲು ಬೆಳಕಾಗಿ ಬಂದವರು ಯೇಸು. ಬಾಲಯೇಸು ಕಾಣಲು ಬಂದ ಯಾತ್ರಿಕರಿಗೆ ನಕ್ಷತ್ರ ವೊಂದು ದಾರಿ ತೋರಿಸಿತು. ಇದರ ಸಂಕೇತವಾಗಿ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ನಕ್ಷತ್ರಗಳನ್ನು ಮನೆಯ ಮುಂದೆ ತೂಗು ಹಾಕ ಲಾಗುತ್ತದೆ.  ದೇವರ ಬೆಳಕು ನಕ್ಷತ್ರ ಎನ್ನುವುದು ಕ್ರೈಸ್ತರ ನಂಬಿಕೆ.

ಕ್ಯಾರಲ್ಸ್ ಸಿಂಗಿಗ್: ಚರ್ಚ್‌ನ ಫಾದರ್‌ಗಳೊಂದಿಗೆ ಯುವಕರು ಸೇರಿ ಮನೆ ಮನೆಗೆ ಹೋಗಿ ಕ್ರಿಸ್‌ಮಸ್ ಹಾಡುಗಳನ್ನು ಹಾಡುತ್ತಾರೆ. ಕ್ರಿಸ್ತನ ಜನನದ ಕಥನ ಮತ್ತು ಕ್ರಿಸ್‌ಮಸ್ ಶುಭಾಶಯಗಳು ಹಾಡುಗಳಲ್ಲಿ ಒಳಗೊಂಡಿರುತ್ತದೆ.

`ಯೇಸು ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿ ಉಂಟು ಮಾಡಲಿ. ಜಗತ್ತಿನಲ್ಲಿ ಶಾಂತಿ ನೆಲೆಸಿ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ವುರ್ಥ ಮೆಮೊರಿಯಲ್ ಸಿಎಸ್‌ಐ ಚರ್ಚ್ ಫಾದರ್ ಜಾರ್ಜ್ ದೊಡ್ಡಮನಿ `ಪ್ರಜಾವಾಣಿ'ಗೆ ತಿಳಿಸಿದರು.

`ಮಾನವ ಜೀವನಕ್ಕೆ ಯೇಸು ದಾರಿ ದೀಪ. ಯೇಸು ಜನಿಸಿದ ದಿನ ಮಾನವನಿಗೆ ಪ್ರೀತಿ, ಸಮಾನತೆ, ಸಂತೋಷ ಸಿಕ್ಕಿತ್ತು. ಆ ಪ್ರೀತಿ, ಶಾಂತಿ ಮತ್ತು ಸಮಾನತೆ ಸಮಾಜದ ಎಲ್ಲ ವರ್ಗದ ಜನರಿಗೂ ತಲುಪಬೇಕು. ಅದಕ್ಕಾಗಿಯೇ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು' ಎನ್ನುತ್ತಾರೆ ಬೆಟಗೇ ರಿಯ ಎಜಿ ಚರ್ಚ್ ಫಾದರ್ ಜೋಸೆಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.