ADVERTISEMENT

ಗಜೇಂದ್ರಗಡದಲ್ಲಿ ಹೆಚ್ಚುತ್ತಿರುವ ವೈನ್ ಸೆಂಟರ್ಗಳು :ಇಲ್ಲಿ ಕ್ಷೀರದಷ್ಟೇ ಮದ್ಯ ಮಾರಾಟ !

​ಪ್ರಜಾವಾಣಿ ವಾರ್ತೆ
Published 21 ಮೇ 2012, 6:00 IST
Last Updated 21 ಮೇ 2012, 6:00 IST

ಗಜೇಂದ್ರಗಡ: `ವಾಲಿ ಹಾಗೇ ಬಲವಂತ ನಿಲ್ಲ, ಹಾಲಿಗಿಂತ ಸವಿ ಇಲ್ಲ~ ಎನ್ನುವ ನುಡಿಗಟ್ಟಿನಂತೆ ಮೊದಲೆಲ್ಲ ಮಕ್ಕಳಾದಿ ಯಾಗಿ ಯುವಕರು, ವೃದ್ಧರು ಹೆಚ್ಚು ಹೆಚ್ಚು ಹಾಲು ಕುಡಿದು, ತಮ್ಮ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ಹಾಲಿನ ಸವಿಗಿಂತ ಹೆಂಡದ ರುಚಿಯನ್ನು ಹೆಚ್ಚೆಚ್ಚು ಸವಿಯುತ್ತಿದ್ದಾರೆಯೇ? ಹಾಲು ಬೇಡವಾಯಿತೇ? ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.

ಇದಕ್ಕೆ ಸಾಕ್ಷಿ ಎಂಬಂತೆ ಪಟ್ಟಣದಲ್ಲಿ ಪ್ರತಿ ದಿನವೊಂದಕ್ಕೆ ಒಂದು ಸಾವಿರ ಲೀಟರ್ (ಪ್ಯಾಕೇಟ್ ಹಾಲು) ಮಾರಾಟ ವಾಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಹೆಂಡವೂ ಮಾರಾಟ ವಾಗುತ್ತಿರುವುದು ಆಶ್ಚರ್ಯವಾದರೂ ಸತ್ಯ.
ಜಿಲ್ಲೆಯಲ್ಲಿಯೇ ಅತ್ಯಂತ ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣ ಎಂಬ ಹೆಗ್ಗಳಿಕೆ ಹೊಂದಿರುವ ಗಜೇಂದ್ರ ಗಡದಲ್ಲಿ ಪ್ರತಿಯೊಂದು ವ್ಯಾಪಾರಿ ಮಳಿಗೆಯೂ ನಾ ಮುಂದು... ತಾ ಮುಂದು... ಎನ್ನುತ್ತಾ ಒಬ್ಬ ವ್ಯಾಪಾರಿ ಮತ್ತೊಬ್ಬ ವ್ಯಾಪಾರಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ವ್ಯಾಪಾರಿ ಮಳಿಗೆಗಳ ಹುಟ್ಟುವಳಿ ಹೆಚ್ಚುತ್ತಲೇ ಇವೆ.
 
ಇವೆಲ್ಲವುಗಳಿಗಿಂತ ತಾವೇನು ಕಮ್ಮಿ ಇಲ್ಲ ಎನ್ನುವಂತೆ `ವೈನ್ ಸೆಂಟರ್~ಗಳು ಪೈಪೋಟಿ ನೀಡುವ ನಿಟ್ಟಿನಲ್ಲಿ ಸ್ಥಾಪನೆಯಾಗುತ್ತಿವೆ.ತಾಲ್ಲೂಕಿನ ರೋಣ, ನರೇಗಲ್ ಮತ್ತು ಗಜೇಂದ್ರಗಡ ಪಟ್ಟಣ ಸೇರಿದಂತೆ ನೆರೆಯ ಯಲಬುರ್ಗಾ, ಕುಷ್ಟಗಿ, ಹುನಗುಂದ, ಬದಾಮಿ ಮುಂತಾದ ತಾಲ್ಲೂಕುಗಳ ಲಕ್ಷಾಂತರ ನಾಗರಿಕರು ವ್ಯಾಪಾರ ವಹಿವಾಟಿಗಾಗಿ ನಿತ್ಯ ಗಜೇಂದ್ರಗಡ ಪಟ್ಟಣಕ್ಕೆ ಬಂದು ಹೋಗಿ ಮಾಡುತ್ತಾರೆ.

ಸರ್ವಾಂಗೀಣ ಪ್ರಗತಿ ಪಥದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಪಟ್ಟಣದಲ್ಲಿ ಒಟ್ಟು 6 ವೈನ್ ಸೆಂಟರ್‌ಗಳು ಹಾಗೂ ಒಂದು ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ಇದೆ. ಸ್ಥಳೀಯ ಎಲ್ಲ ಮದ್ಯದಂಗಡಿಗಳು ಪ್ರತಿ ತಿಂಗಳು ಸರಾಸರಿ 28,892 ಲೀಟರ್ ಅಂದರೆ, 1,58,906 ಕ್ವಾಟರ್ ಬಾಟಲ್ (180 ಎಂ.ಎಲ್) ಬಿಯರ್ ಹೊರತು ಪಡಿಸಿ ಮಾರಾಟವಾಗುತ್ತಿದೆ.

ಪ್ರತಿ ತಿಂಗಳ ವಹಿವಾಟು: ಪ್ರತಿ ತಿಂಗಳು ಸ್ಥಳೀಯ ಪ್ರತ್ಯೇಕ ವೈನ್ ಶಾಪ್‌ಗಳಲ್ಲಿ ಸರಾಸರಿ 4,127 ಬಲ್ಕ್ ಲೀಟರ ಹಾಗೂ ಎಂ.ಎಸ್. ಐ.ಎಲ್ ಮದ್ಯ ಮಾರಾಟ ಮಳಿಗೆ ಒಂದರಲ್ಲಿಯೇ 3,393 ಬಲ್ಕ್ ಲೀಟರ್ ಸಾರಾಯಿ ಮಾರಾಟವಾಗುತ್ತಿದೆ. ಒಟ್ಟಾರೆ ದಿನಕ್ಕೆ ಒಂದು ಸಾವಿರ ಬಲ್ಕ್ ಲೀಟರ್ ಹೆಂಡವು ಮದಿರೆ ಪ್ರಿಯರ ಹೊಟ್ಟೆ ಸೇರುತ್ತಿದೆ. ಇದರ ಜೊತೆಗೆ ಇಲ್ಲಿ ವ್ಯಾಪಕವಾಗಿ ಮಾರಾಟವಾಗುವ ಕಳ್ಳಭಟ್ಟಿ ಸಾರಾಯಿಗೂ ಲೆಕ್ಕವಿಲ್ಲ.
ಹಾಗೆಯೇ ಪಟ್ಟಣದಲ್ಲಿ ಆರೇಳು ಹಾಲು ಏಜನ್ಸಿಗಳಿವೆ. ಅವೆಲ್ಲವುಗಳು ಸೇರಿ ಪ್ರತಿ ದಿನ ಅಂದಾಜು ಒಂದು ಸಾವಿರ ಲೀಟರ ಹಾಲಿನ ಪಾಕೇಟ್‌ಗಳು ಮಾರಾಟವಾಗುತ್ತಿವೆ.

ತಪ್ಪದ ಹಾಜರಾತಿ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವೆಂದೇ ಬಿಂಬಿತವಾಗಿರುವ ಗಜೇಂದ್ರಗಡಕ್ಕೆ ನಿತ್ಯ ಅಸಂಖ್ಯಾತ ನಾಗರಿಕರು ಬಂದು ಹೋಗುತ್ತಾರೆ. ಹೀಗೆ ಬರುವವರಲ್ಲಿನ ಬಹುತೇಕ ಮದಿರೆ ಪ್ರಿಯರು ಸ್ಥಳೀಯ ವೈನ್‌ಶಾಪಗಳಿಗೆ ಹಾಜರಿ ಕೊಡುವುದನ್ನು ಮರೆಯುವುದಿಲ್ಲ. ವಿಚಿತ್ರವೆಂದರೆ ಕೆಲವರು ಮದ್ಯದಂಗಡಿಗಳ ಬಾಗಿಲು ತೆರೆಯುವ ಮುನ್ನವೇ ಅಂಗಡಿಗಳತ್ತ ಮುಖ ಮಾಡಿ ಕುಳಿತಿರುತ್ತಾರೆ.

ರಸೀದಿ ನೀಡಲ್ಲ: ವ್ಯಾಪಕವಾಗಿ ಮದ್ಯ ಮಾರಾಟವಾಗುವ ಪಟ್ಟಣದ ಎಲ್ಲ ವೈನ್‌ಶಾಪ್‌ಗಳಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಮದಿರೆ ಪ್ರಿಯರಿಂದ ಕೇಳಿ ಬರುತ್ತಿವೆ. ಪ್ರತಿ ಕ್ವಾಟರ್ (180 ಎಂ.ಎಲ್) ಬಾಟಲ್‌ಗೆ ಮೂಲ ಬೆಲೆಗಿಂತ 15 ರಿಂದ 20 ರೂಪಾಯಿ ಹಣ ವಸೂಲಿ ಮಾಡುತ್ತಾರೆ. ಆದರೆ, ಮದ್ಯ ಖರೀದಿಗೆ ಸಂಬಂಧಿಸಿದಂತೆ ರಸೀದಿ ನೀಡದಿರುವುದು ಮದ್ಯ ಪ್ರಿಯರ ಆಕ್ರೋಶಕ್ಕೆ ಕಾರಣ ವಾಗಿದೆ.

ಒಟ್ಟಾರೆ ಪಟ್ಟಣದಲ್ಲಿ ಕ್ಷೀರ ಪ್ರಮಾಣದಲ್ಲಿಯೇ ಮದಿರೆ ಮಾರಾಟವಾಗುತ್ತಿರುವುದನ್ನೇ ಬಂಡವಾಳವನ್ನಾಗಿಸಿಕೊಂಡ ಸ್ಥಳೀಯ ವೈನ್‌ಶಾಪಗಳು ಗ್ರಾಹಕರಿಂದ ಪ್ರತಿ ಲೀಟರ್‌ಗೆ 15 ರಿಂದ 20 ರೂಪಾಯಿ ಪಡೆಯುತ್ತಿರುವುದಕ್ಕೆ ಕಡಿವಾಣವೇ ಇಲ್ಲವೇ? ಎಂಬ ಮದಿರೆ ಪ್ರಿಯರ ಪ್ರಶ್ನೆಗಳಿಗೆ ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.