ADVERTISEMENT

ಗಜೇಂದ್ರಗಡ: ಆದರ್ಶ ರೈತರಿಗೆ ಕೃಷಿ ಪಂಡಿತ ಗೌರವ

ಚಂದ್ರಕಾಂತ ಬಾರಕೇರ
Published 24 ಸೆಪ್ಟೆಂಬರ್ 2013, 5:42 IST
Last Updated 24 ಸೆಪ್ಟೆಂಬರ್ 2013, 5:42 IST

ಗಜೇಂದ್ರಗಡ: ಬರದ ನಾಡು ಎಂದೇ ಬಿಂಬಿತಗೊಂಡಿರುವ ರೋಣ ತಾಲ್ಲೂ ಕಿನ ಕೃಷಿ ಕ್ಷೇತ್ರದಲ್ಲಿ ವಿನೂತನ ಬೆಳೆ ಗಳನ್ನು ಬೆಳೆಯುವುದರ ಮೂಲಕ ಬರದ ನಾಡಲು ಲಾಭದಾಯಕ ಕೃಷಿ ಮಾಡಬಹುದು. ಬರಡು ಭೂಮಿ ಯಲ್ಲಿ, ಅಲ್ಪ ಪ್ರಮಮಾಣದ ಮಳೆ ಯಲ್ಲಿಯೂ ಹಸಿರು ಪೈರು ಹೂಂಕರಿ ಸುವಂತೆ ಮಾಡಬಹುದು ಎಂಬುದನ್ನು ಕಾಲಕಾಲೇಶ್ವರ, ನೆಲ್ಲೂರ, ಗಜೇಂದ್ರ ಗಡದ ಯುವ ಕೃಷಿಕರು ಪರಿಶ್ರಮದ ಕೃಷಿ ಸಾಧನೆಯ ಮೂಲಕ ರುಜು ವಾತು ಪಡಿಸಿದ್ದಾರೆ. ತಮ್ಮ ಕೃಷಿ ಸಾಧ ನೆಯ ಮೂಲಕ ‘ಕೃಷಿ ಪಂಡಿತ’ರೆಂಬ ಗೌರವವನ್ನು ತಮ್ಮ ಹೆಸರಿನ ಹಿಂದಿರಿಸಿ ಕೊಂಡಿದ್ದಾರೆ.

ಜರ್ಮನ್‌ ಗೆದ್ದ ದ್ರಾಕ್ಷಿ ಇಲ್ಲಿದೆ: 1997 ರಲ್ಲಿ ಗಜೇಂದ್ರಗಡದ ಕೃಷಿಕ ಲೋಕಪ್ಪ ರಾಠೋಡ್‌ ತಮ್ಮ ಐದು ಎಕರೆ ಜಮೀನಿನಲ್ಲಿ ದ್ರಾಕ್ಷಿಯನ್ನು ಬೆಳೆದರು. ಜಿಲ್ಲೆಯಲ್ಲಿಯೇ ಮೊದಲ ದ್ರಾಕ್ಷಿ ಬೆಳೆದ ಕೃಷಿ ಎಂಬ ಕೀರ್ತಿಗೆ ಭಾಜನರಾದರು. ಲೋಕಪ್ಪ ರಾಠೋಡ್‌ ಅವರು ಬೆಳೆದ ದ್ರಾಕ್ಷಿ ಬೆಳೆಯನ್ನೇ ಆದರ್ಶವಾಗಿಸಿಕೊಂಡು ನೆಲ್ಲೂರ ಗ್ರಾಮದ ವೀರನಗೌಡ ಗೌಡರ, ಎಂ.ಪಿ.ಪಾಟೀಲ, ಶಿವಾ ನಂದಯ್ಯ ಬೆನಹಾಳ, ಶರಣಯ್ಯ ಬೂಸನೂರಮಠ, ಶಿವಯ್ಯ ಕುರಹಟ್ಟಿ ಹಿರೇಮಠ, ಗೊಡಚಯ್ಯ ಹಿರೇಮಠ ಸೇರಿದಂತೆ ಹಲವಾರು ಯುವ ಕೃಷಿಕರು ದ್ರಾಕ್ಷಿ ಬೆಳೆದರು. ನಿರೀಕ್ಷೆಗೂ ಮೀರಿ ಲಾಭ ಗಳಿಸಿದರು. ಪರಿಣಾಮ ಜಿಲ್ಲೆಯಾದ್ಯಂತ ದ್ರಾಕ್ಷಿ ಬೆಳೆಯಲು ಪ್ರೇರಣೆಯಾದರು.

ಜತೆಗೆ 2009ರಲ್ಲಿ ನೆಲ್ಲೂರ ಗ್ರಾಮದ ರೈತ ವೀರನಗೌಡ ಗೌಡರ ಬೆಳೆದ ದ್ರಾಕ್ಷಿ ಜರ್ಮನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಇದರೊಂದಿಗೆ ಯುವ ಕೃಷಿಕರ ಕೃಷಿ ಬಗೆಗಿನ ಗೌರವ ಇಮ್ಮಡಿಯಾಗುತ್ತಾ ಸಾಗಿತು. 2001 ರಲ್ಲಿ ಲೋಕಪ್ಪ ರಾಠೋಡ್‌ ಅವರು ಏಳು ಎಕರೆ ಕಬ್ಬು ಬೆಳೆದರು. ಇವರು ಅಂದು ಬೆಳೆದ ಕಬ್ಬು ಇಂದಿಗೂ ಜೀವಂತವಾಗಿದೆ.

ಇದರಿಂದ ಪ್ರತಿ ವರ್ಷ ನಾಲ್ಕೂ ಲಕ್ಷಕ್ಕೂ ಅಧಿಕ ಆದಾಯ ಪಡೆಯುತ್ತಿದ್ದಾರೆ.  ಕಳೆದ ಮೂರು ವರ್ಷಗಳಿಂದ ತಾಂಡವ ವಾಡಿದ ಭೀಕರ ಬರದಲ್ಲಿಯೂ ಈ ಎಲ್ಲ ಕೃಷಿಕರು ಕೃಷಿ ಕ್ಷೇತ್ರದಿಂದ ವಿಮೂಖರಾಗದೆ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದು, ಇವರ ಕೃಷಿ ಅನ್ವೇಷಣೆ ಯನ್ನು ಸಾಕ್ಷೀಕರಿಸುತ್ತಿದೆ.

ಇಲ್ಲಿದೆ ಯಶಸ್ವಿ ‘ಸೋಯಾಬಿನ್‌’: ‘ಬಯಲು ಸೀಮೆ ಹಾಗೂ ಮಸಾರಿ ಪ್ರದೇಶದಲ್ಲಿ ಸೋಯಾಬಿನ್‌ ಬೆಳೆ ಬೆಳೆಯಲು ಸಾಧ್ಯವಿಲ್ಲ’ ಎಂದು ವಾದಿಸಿದ ಕೃಷಿ ವಿವಿ ತಜ್ಞರೊಬ್ಬರ ವಾದವನ್ನು ಸವಾಲಾಗಿ ಸ್ವೀಕರಿಸಿದ ಕಾಲಕಾಲೇಶ್ವರ ಗ್ರಾಮದ ಕೃಷಿಕ ಕಳಕಪ್ಪ ಹೂಗಾರ ಅತ್ಯಂತ ಕಡಿಮೆ ತೇವಾಂಶದಲ್ಲಿ ಏಳು ಎಕರೆ ಸೋಯಾ ಬಿನ್‌ ಬೆಳೆದು ಸೈಎನಿಸಿಕೊಂಡಿದ್ದಾರೆ. ಎಕರೆಗೆ 10 ರಿಂದ 12 ಕ್ವಿಂಟಲ್‌ ಫಸಲು ಪಡೆಯುವ ನಿರೀಕ್ಷೆ ಯಲ್ಲಿದ್ದಾರೆ.

ಹದಿನಾಲ್ಕು ಎಕರೆ ಮಸಾರಿ ಜಮೀನು ಹೊಂದಿರುವ ಕಳಕಪ್ಪ ಹೂಗಾರ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಎಂಟು ಎಕರೆ ಜಮೀನಿನಲ್ಲಿ 150 ರಿಂದ 200 ಕ್ವಿಂಟಲ್ ಮೆಕ್ಕೆಜೋಳ, ಬೇಸಿಗೆಯಲ್ಲಿ ಹತ್ತು ಎಕರೆ ಜಮೀನಿನಲ್ಲಿ 300ಕ್ಕೂ ಅಧಿಕ ಚೀಲ ಶೇಂಗಾ ಇಳುವರಿ ಪಡೆದುಕೊಳ್ಳುತ್ತಿದ್ದಾರೆ.

‘ರೈತರ ಯಶಸ್ಸು‘
ಇಲಾಖೆ ಹಾಗೂ ಸರ್ಕಾರದ ಯಾವುದೇ ಸಹಾಯ ವನ್ನು ನಿರೀಕ್ಷಿಸದೆ ಕೃಷಿಯಲ್ಲಿ ಹೊಸತನವನ್ನು ಸಾಧಿಸಿ ಯಶಸ್ಸು ಸಾಧಿಸಿರುವ ತಾಲ್ಲೂಕಿನ ಯುವ ಕೃಷಿಕರು ಕೃಷಿ ಸಮೂಹಕ್ಕೆ ಮಾದರಿ. ಕ್ಷೇತ್ರದ ಬಗೆ ಕಾಳಜಿ, ಆಸಕ್ತಿ, ಪರಿಶ್ರಮವಿದ್ದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ.
ಎಸ್‌.ಎ.ಸೂಡಿಶೆಟ್ಟರ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು

‘ಸಾಧಿಸುವ ಛಲ ಇರಲಿ’

ಎಂಥ ಕ್ಲಷ್ಟ ಸಮಸ್ಯೆಗಳು ಎದುರಾದರೂ ಸಾಧಿಸುವ ಛಲವಿದ್ದರೆ ಉನ್ನತ ಸಾಧನೆ ಮಾಡಬಹುದಾಗಿದೆ. ಕೃಷಿಯಲ್ಲಿ ತನ್ನನ್ನು ತಾವು ತೊಡಗಿಸಿಕೊಂಡು ಪರಿಶ್ರಮದ ಕೃಷಿಗೆ ಮುಂದಾದರೆ ನಷ್ಟದ ಮಾತೇ ಉದ್ಭವವಾಗುವುದಿಲ್ಲ. ಇಲಾಖೆಯ ಸಹಾಯ, ನಿರ್ದೇಶನದ ಅವಶ್ಯಕತೆಯೂ ಇಲ್ಲ.
ವೀರನಗೌಡ ಗೌಡರ, ದ್ರಾಕ್ಷಿ ಬೆಳೆಯೊಂದಿಗೆ ಜರ್ಮನ್‌ ಮಾರುಕಟ್ಟೆ ಪ್ರವೇಶಿಸಿದ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.