ADVERTISEMENT

ಗಜೇಂದ್ರಗಡ: ಮಳೆಗೆ ನೆಲಸಮವಾದ ಕಬ್ಬು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 7:00 IST
Last Updated 9 ನವೆಂಬರ್ 2012, 7:00 IST
ಗಜೇಂದ್ರಗಡ: ಮಳೆಗೆ ನೆಲಸಮವಾದ ಕಬ್ಬು
ಗಜೇಂದ್ರಗಡ: ಮಳೆಗೆ ನೆಲಸಮವಾದ ಕಬ್ಬು   

ಗಜೇಂದ್ರಗಡ: ನೀಲಂ ಚಂಡು ಮಾರುತದ ಪರಿಣಾಮವಾಗಿ ನಿರಂತರ ಎರಡು ದಿನಗಳ ಕಾಲ ಸುರಿದ ಗಾಳಿ ಸಹಿತ ಜಡಿ ಮಳೆಗೆ ಸಮೃದ್ಧವಾಗಿ ಬೆಳೆದು ನಿಂತಿದ್ದ `ಕಬ್ಬು~ ಬೆಳೆ ಕೆಲೆವೆಡೆ ನೆಲ ಕಚ್ಚಿದೆ.

ಕಳೆದ ಎರಡ್ಮೂರು ವರ್ಷಗಳಿಂದೀಚೆಗೆ ಗಜೇಂದ್ರಗಡ, ಕಾಲಕಾಲೇಶ್ವರ, ರಾಜೂರ, ಗೋಗೇರಿ, ಚಿಲ್‌ಝರಿ, ಮ್ಯಾಕಲ್‌ಝರಿ, ರಾಮಾಪೂರ, ಪುರ್ತಗೇರಿ, ಕುಂಟೋಜಿ ಮುಂತಾದ ಗ್ರಾಮಗಳಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. 

ತಲೆ ಕೆಳಗಾದ ನಿರೀಕ್ಷೆ: ಈ ಭಾಗದ 34,256 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 16,236 ಕೊಳವೆಬಾವಿಗಳಿವೆ. ಇದರಲ್ಲಿ ಶೇ.18 ರಷ್ಟು ರೈತರು `ಕಬ್ಬು~ ಬೆಳೆದಿದ್ದಾರೆ. ಒಟ್ಟು 12 ತಿಂಗಳ ಬೆಳೆ ಇದಾಗಿದೆ. ನಾಟಿ ಮಾಡಿದ ನಂತರ ಪ್ರತಿ 8 ದಿನಕ್ಕೊಮ್ಮೆಯಂತೆ ಫಸಲು ಬರೋ ವರೆಗೂ ನೀರುಣಿಸಬೇಕು. ಎಕರೆ ಕಬ್ಬು ಬೆಳೆಗೆ ಫಸಲು ಬರೋವರೆಗೂ ಬೀಜ, ಗೊಬ್ಬರ, ಕಳೆ ನಿರ್ವಹಣೆ ಸೇರಿ 35 ರಿಂದ 40 ಸಾವಿರ ವೆಚ್ಚ ತಗುಲುತ್ತದೆ.

ಬೆಳೆ ನಿರ್ವಹಣೆ ಕಾರ್ಯ ವನ್ನು ಸಮರ್ಪಕವಾಗಿ ನಿಭಾಯಿಸಿದರೆ, ಎಕರೆಗೆ 65 ಟನ್‌ವರೆಗೆ ಇಳುವರಿ ಪಡೆಯಬಹುದಾಗಿದೆ. ಆದರೆ, ಈ ಭಾಗದಲ್ಲಿ ಬೆಳೆಯಲಾದ `ಕಬ್ಬು~ ಬೆಳೆ ನಿರೀಕ್ಷೆಗೂ ಮೀರಿ ಸಮೃದ್ಧವಾಗಿ ಬೆಳೆದು ನಿಂತಿತ್ತು. ಆದರೆ, ನೀಲಂ ಚಂಡು ಮಾರುತದ ಪರಿಣಾಮವಾಗಿ ನಿರಂತರ ಎರಡು ದಿನಗಳ ಕಾಲ ಸುರಿದ ಗಾಳಿ ಸಹಿತ ಜಡಿ ಮಳೆಗೆ ಕಬ್ಬು ಬೆಳೆ ನೆಲಕ್ಕೆ ಉರುಳಿದೆ.

ಸಂಕಷ್ಟದಲ್ಲಿ ಬೆಳೆಗಾರ:
ಇಲ್ಲಿ ಪ್ರತಿ ವರ್ಷ ಬೆಳೆಯುವ ಕಬ್ಬನ್ನು ಶಿರಗುಪ್ಪಾ ಸುಗರ್ಸ್‌ ಫ್ಯಾಕ್ಟರಿಗೆ ರವಾನಿಸಲಾಗು ತ್ತದೆ. ಸದ್ಯ ಟನ್ ಕಬ್ಬಿನ ದರ 2500 ರಿಂದ 3000 ವರೆಗೆ ಇದೆ. ಎಕರೆ ಕಬ್ಬು ಬೆಳೆದ ರೈತ 1,95,000 ವರೆಗಿನ ದೊಡ್ಡ ಮೊತ್ತದ ಹಣವನ್ನು ಜೇಬು ತುಂಬಿಸಿಕೊಳ್ಳಬಹುದು ಎಂಬ ವಿಶ್ವಾಸದಲ್ಲಿದ್ದರು.

ಆದರೆ, ಕಬ್ಬು ನೆಲ ಕಚ್ಚಿದ್ದರಿಂದ ಶುಗರ್ಸ್‌ ಫ್ಯಾಕ್ಟರಿ ಮಾಲೀಕರು ಕಬ್ಬು ಬೆಳೆಯಲು ರೈತರಿಗೆ ಬೀಜ, ಗೊಬ್ಬರ, ಬೆಳೆ ನಿರ್ವಹಣೆ ವೆಚ್ಚಕ್ಕಾಗಿ ಮುಂಗಡ ವಾಗಿ ನೀಡಿದ್ದ 40 ರಿಂದ 50 ಸಾವಿರ ದಷ್ಟು ಹಣವನ್ನು ಫ್ಯಾಕ್ಟರಿ ಮಾಲೀಕರಿಗೆ ನೀಡುವುದಾದರೂ ಹೇಗೆ? ಎಂಬ ಚಿಂತೆ ಬೆಳೆಗಾರರಿಗೆ ಎದುರಾಗಿದೆ. ಇದರ ಮಧ್ಯೆ ಫ್ಯಾಕ್ಟರಿ ಮಾಲೀಕರು ಸಹ ಹಣ ನೀಡುವಂತೆ ಬೆಳೆಗಾರರಿಗೆ ಬೆನ್ನು ಬಿದ್ದಿದ್ದಾರೆ.
 
ಇದರಿಂದಾಗಿ ದಿಕ್ಕು ತೋಚ ದಂತಾಗಿದೆ ಎಂದು ಕಬ್ಬು ಬೆಳೆಗಾರ ರಾದ ಯಂಕಪ್ಪ ಯಲಬುಣಚಿ, ಹನು ಮಪ್ಪ ಬನ್ನಿಕಂಠಿ ಅಲವತ್ತುಕೊಂಡರು.

ನಷ್ಟ ಪರಿಶೀಲಿಸಿ, ಪರಿಹಾರ: ನೀಲಂ ಚಂಡುಮಾರುತದ ಪರಿಣಾಮವಾಗಿ ಸುರಿದ ಗಾಳಿ ಸಹಿತ ಮಳೆಯಿಂದಾಗಿ
ಯಾವುದೇ ಬೆಳೆಗೆ ಉಂಟಾದ ಹಾನಿಯನ್ನು ಪರಿಶೀಲಿಸಿ ಪರಿಹಾರ ನೀಡಲಾಗುವುದು. ಹೀಗಾಗಿ ನಷ್ಟಕ್ಕೊ ಳಗಾದ ಬೆಳೆಗಾರರು ಇಲಾಖೆಗೆ ಅರ್ಜಿ ಸಲ್ಲಿಸ ಬೇಕು. ನಂತರ ಸಮೀಕ್ಷೆ ನಡೆಸಿ ಪರಿಹಾರ ನೀಡಲಾಗುವುದು ಎಂದು ತಾಲ್ಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಅಮೋಗಿ ಹಿರೇಕುರುಬರ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.