ADVERTISEMENT

ಚುನಾವಣೆಗೆ ನಿಂತರೆ ರೈತಸೇನೆಯಿಂದ ಉಚ್ಚಾಟನೆ

ನರಗುಂದದಲ್ಲಿ ಮಹದಾಯಿ ಧರಣಿ 998ನೇ ದಿನಕ್ಕೆ; ವೀರೇಶ ಸೊಬರದಮಠ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:13 IST
Last Updated 9 ಏಪ್ರಿಲ್ 2018, 9:13 IST

ನರಗುಂದ: ಕೆಲವರು ರೈತರ ಸೇನಾ ಹೆಸರಲ್ಲಿ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುವುದಾಗಿ ಹೇಳಿದ್ದಾರೆ. ರೈತ ಸೇನಾ ಸಮಿತಿ ಹಾಗೂ ಮಹದಾಯಿ ಹೋರಾಟ ಸಮಿತಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಸಮಿತಿ ನಿರ್ಣಯ ಮೀರಿ ನಿಂತದ್ದೇ ಆದರೆ ಅವರನ್ನು ಹೋರಾಟ ಸಮಿತಿಗಳಿಂದ ಉಚ್ಚಾಟಿಸಲಾಗುವುದು ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 997ನೇ ದಿನವಾದ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಏ.5ರಂದು ನಡೆದ ಮಲಪ್ರಭೆ ಅಚ್ಚುಕಟ್ಟು ಪ್ರದೆಶದ ರೈತರ ಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸದೇ ಇರುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ ನಮ್ಮ ಸಮಿತಿಯ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿಯವರು ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅವಕಾಶವಿಲ್ಲ. ರೈತ ಸೇನೆ ಹೆಸರಲ್ಲಿ ಯಾರೇ ನಿಂತರೂ ಅವರನ್ನು ಉಚ್ಚಾಟಿಸಲಾಗುವುದು ಎಂದರು.

ಮಹದಾಯಿ ಹೋರಾಟ ಮಾಡುತ್ತಿರುವುದು ಯಾವುದೇ ಅಧಿಕಾರ ಪಡೆಯಲು ಅಲ್ಲ. ನೀರು ಪಡೆಯಲೆಂದು. ಸಮಾನ ಮನಸ್ಕರು, ರೈತರು ಕೂಡಿ ಇದರಲ್ಲಿ ತೊಡಗಿಸಿ ಕೊಂಡಿದ್ದೇವೆ ಎಂದು ಸೊಬರದಮಠ ಸ್ಪಷ್ಟಪಡಿಸಿದರು.

ADVERTISEMENT

ಹೋರಾಟ ಆರಂಭವಾದಾಗಿನಿಂದ ನಾವು ಪಕ್ಷಾತೀತವಾಗಿ ಹೋರಾಟ ನಡೆಸಿದ್ದೇವೆ. ಅದನ್ನೇ ಮುಂದುವರಿಸುತ್ತೇವೆ. ಯಾರ ವಿರುದ್ಧ ಅಥವಾ ಯಾರ ಪರವೂ ನಮ್ಮ ಹೋರಾಟವಲ್ಲ. ಜೊತೆಗೆ ಅಧಿಕಾರ ಪಡೆಯಲಂತೂ ನಾವು ಹೋರಾಟ ನಡೆಸುತ್ತಿಲ್ಲ. ಆದ್ದರಿಂದ ಹಿಂದೆ ಹೇಳಿದಂತೆ ಚುನಾವಣೆಗೆ ಮಹದಾಯಿ ವಿವಾದ ಹಾಗೂ ಹೋರಾಟದ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಎಸ್‌.ಬಿ.ಜೋಗಣ್ಣವರ, ಶ್ರೀಶೈಲ ಮೇಟಿ, ವಿ.ಕೆ.ಗುಡಿಸಾಗರ, ರಾಘವೇಂದ್ರ ಗುಜಮಾಗಡಿ, ರತ್ನವ್ವ ಸವಳಬಾವಿ, ಪರಶುರಾಮ ಜಂಬಗಿ, ವೆಂಕಪ್ಪ ಹುಜರತ್ತಿ, ಎಸ್‌.ಕೆ.ಗಿರಿಯಣ್ಣವರ, ಅರ್ಜುನ ಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.