ADVERTISEMENT

ನಕಲಿ ಬಂಗಾರ ನೀಡಿ ಲಕ್ಷ ರೂಪಾಯಿ ಪಂಗನಾಮ!

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 4:26 IST
Last Updated 15 ಜುಲೈ 2013, 4:26 IST

ಮುಂಡರಗಿ: ಮೈಸೂರು ಮೂಲದ ವ್ಯಕ್ತಿಯೊಬ್ಬರು ವಾಮಮಾರ್ಗದಿಂದ ಅಪಾರ ಪ್ರಮಾಣದ ಬಂಗಾರ ಖರೀದಿ ಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ತಾಲ್ಲೂಕಿನ ನಾಗರಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಮೂಲತಃ ಮೈಸೂರಿನವರಾದ ಬಾಲಕೃಷ್ಣ ಎಂಬುವವರಿಗೆ ಕಳೆದ ಮೂರು ತಿಂಗಳ ಹಿಂದೆ ರಾಜು ಕುರಿ ಎಂದು ಹೆಸರು ಹೇಳಿಕೊಂಡ ಯುವಕನೊಬ್ಬ ತಾನು ಮುಂಡರಗಿ ತಾಲ್ಲೂಕಿನ ನಾಗರಳ್ಳಿ ಗ್ರಾಮದವನೆಂದು, ನನ್ನ ಬಳಿ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಸುಮಾರು ಎರಡೂವರೆ ಕೆಜಿ ಬಂಗಾರವಿದೆ. ತಂಗಿಯ ಮದುವೆಗಾಗಿ ನನಗೆ ಅರ್ಜೆಂಟಾಗಿ ಎರಡು ಲಕ್ಷ ರೂಪಾಯಿ ಬೇಕಾಗಿದ್ದು, ಅದಕ್ಕಾಗಿ ಕಾಲು ಕೆಜಿ ಬಂಗಾರ ತೆಗೆದುಕೊಂಡು ಎರಡು ಲಕ್ಷ ರೂಪಾಯಿ ನೀಡಬೇಕು ಎಂದು ಮೊಬೈಲ್ ಮೂಲಕ ಮನವಿ ಮಾಡಿಕೊಂಡಿದ್ದಾನೆ.

ಬಾಲಕೃಷ್ಣನು ಮೊದಮೊದಲು ಅನಾಮಧೇಯನ ಮೊಬೈಲ್ ಕರೆಯನ್ನು ಅಲಕ್ಷಿಸಿ, ನನ್ನ ಬಳಿ ಅಷ್ಟೊಂದು ಹಣವಿಲ್ಲ, ನನಗೆ ಬಂಗಾರ ಬೇಡ ಎಂದು ಹೇಳಿ ಅವನ ಕರೆಯನ್ನು ಸುಮ್ಮನೇ ಸಾಗ ಹಾಕಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ರಾಜು ಕುರಿ ಎಂದು ಹೆಸರು ಹೇಳಿಕೊಂಡಿದ್ದ ಯುವಕ ಪದೇ ಪದೇ ಬಾಲಕೃಷ್ಣನಿಗೆ ಪೋನ್ ಮಾಡಿ ಬಂಗಾರ ಖರೀದಿಸುವಂತೆ ವಿನಂತಿಸಿಕೊಂಡಿದ್ದಾನೆ. ಹೀಗೆ ಹಲವಾರು ಬಾರಿ ಪೋನ್‌ನಲ್ಲಿ ಮಾತನಾಡಿದ ಯುವಕ ಒಂದು ದಿವಸ ಪೋನ್ ಮಾಡಿ `ಹಣವಿಲ್ಲದ್ದರಿಂದ ನನ್ನ ತಂಗಿಯ ಮದುವೆ ನಿಂತು ಹೋಗಲಿದೆ ದಯವಿಟ್ಟು ಬಂಗಾರ ತೆಗೆದುಕೊಂಡು ಅಥವಾ ಒತ್ತೆ ಇಟ್ಟುಕೊಂಡು ಎರಡು ಲಕ್ಷ ಹಣ ನೀಡಿ' ಎಂದು ಅಂಗಾ ಲಾಚಿದ್ದಾನೆ.

ಕಡಿಮೆ ಹಣದಲ್ಲಿ ಅಪಾರ ಪ್ರಮಾ ಣದ ಬಂಗಾರ ಕೊಂಡುಕೊಳ್ಳುವ ಉದ್ದೇಶದಿಂದ ಒಂದು ದಿವಸ ಬಾಲ ಕೃಷ್ಣನು ಮೈಸೂರಿನಿಂದ ಯುವಕನನ್ನು ಭೇಟಿಯಾಗಲು ಮುಂಡರಗಿಗೆ ಬಂದಿದ್ದಾನೆ. ಮುಂಡರಗಿಗೆ ಬಂದಿದ್ದ ಬಾಲಕೃಷ್ಣನಿಗೆ ರಾಜು ತನ್ನ ಬಳಿ ಇದ್ದ ಅಪಾರ ಪ್ರಮಾಣದ ಬಂಗಾರದ ಸಣ್ಣ ಸಣ್ಣ ತುಂಡುಗಳನ್ನು ತೋರಿಸಿದ್ದಾನೆ. ಅವನಲ್ಲಿ ಬಂಗಾರವಿರುವುದನ್ನು ಖಾತ್ರಿ ಮಾಡಿಕೊಂಡ ಬಾಲಕೃಷ್ಣನು ಸ್ವಲ್ಪ ಬಂಗಾರವನ್ನು ಮೈಸೂರಿಗೆ ತೆಗೆದು ಕೊಂಡು ಹೋಗಿ ಪರೀಕ್ಷಿಸಿ ತಿಳಿಸುವು ದಾಗಿ ಹೇಳಿ, ಅವನಿಂದ ಒಂದು ಚೂರು ಬಂಗಾರವನ್ನು ಪಡೆದುಕೊಂಡು ಮೈಸೂರಿಗೆ ತೆರಳಿದ್ದಾನೆ. ಮೈಸೂರಿನಲ್ಲಿ ಬಂಗಾರವನ್ನು ಪರೀಕ್ಷಿಸಿದ ಅಕ್ಕಸಾಲಿ ಗರು ಇದು ಅಸಲಿ ಬಂಗಾರವೆಂದು ತಿಳಿಸಿದ್ದಾರೆ.

ತಕ್ಷಣ ಬಾಲಕೃಷ್ಣನು ರಾಜು ಕುರಿಗೆ ಪೋನ್ ಮಾಡಿ ನನ್ನ ಬಳಿ ಈಗ ಕೇವಲ ಒಂದು ಲಕ್ಷ ರೂಪಾಯಿ ಇದ್ದು, ಅದನ್ನು ತಗೆದುಕೊಂಡು ಕಾಲು ಕೆಜಿ ಬಂಗಾರ ನೀಡಬೇಕು ಉಳಿದ ಹಣವನ್ನು ಹದಿನೈದು ದಿನಗಳ ನಂತರ ಕೊಡು ವುದಾಗಿ ತಿಳಿಸಿದ್ದಾನೆ. ಅದಕ್ಕೆ ರಾಜು ಒಪ್ಪಿದ್ದರಿಂದ ಜೂನ್ 28ರಂದು ಮುಂಡರಗಿಗೆ ಬಂದ ಬಾಲಕೃಷ್ಣ ಮುಂಡರಗಿ ಬಸ್ ನಿಲ್ದಾಣದಲ್ಲಿ ಇಳಿದು ತಾನು ಹಣ ತೆಗೆದುಕೊಂಡು ಮುಂಡ ರಗಿಗೆ ಬಂದಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಆ ಯುವಕನು ಮುಂಡರಗಿ ಬಸ್ ನಿಲ್ದಾಣಕ್ಕೆ ಬಂದು, ಬಾಲಕೃಷ್ಣ ನನ್ನು ಪಟ್ಟಣದ ಕೆಇಬಿ ಬಳಿ ಇರುವ ಪೆಟ್ರೂಲ್ ಬಂಕ್ ಬಳಿ ಕರೆದುಕೊಂಡು ಹೋಗಿ ಒಂದು ಲಕ್ಷ ರೂಪಾಯಿ ಪಡೆ ದುಕೊಂಡು ತನ್ನ ಬಳಿ ಇದ್ದ ಸುಮಾರು ಆರೇಳು ತೊಲೆ ಬಂಗಾರದ ಚೂರು ಗಳನ್ನು ನೀಡಿದ್ದಾನೆ. ಉಳಿದ ಹಣವನ್ನು ಹದಿನೈದು ದಿನದಲ್ಲಿ ತಲು ಪಿಸಿ ಉಳಿದ ಬಂಗಾರವನ್ನು ತೆಗೆದು ಕೊಂಡು ಹೋಗುವಂತೆ ತಿಳಿಸಿ ಬಾಲ ಕೃಷ್ಣನನ್ನು ಮರಳಿ ಮೈಸೂರಿಗೆ ಕಳುಹಿಸಿದ್ದಾನೆ.

ಬಂಗಾರದ ಚೂರುಗಳನ್ನು ಮೈಸೂರಿ ನಲ್ಲಿ ಪರೀಕ್ಷಿಸಿದಾಗ ಅವು ಹಿತ್ತಾಳೆ ತುಂಡುಗಳೆಂದು ತಿಳಿದು ಬಾಲಕೃಷ್ಣ ಆಘಾತಗೊಂಡಿದ್ದಾನೆ. ಹೇಗಾದರೂ ಮಾಡಿ ನಕಲಿ ಬಂಗಾರವನ್ನು ನೀಡಿದ ವನನ್ನು ಹಿಡಿಯಬೇಕು ಎಂದು ಬಾಲ ಕೃಷ್ಣನು ಜುಲೈ 14ರಂದು ಮುಂಡ ರಗಿಯ ನಾಗರಳ್ಳಿ ಗ್ರಾಮಕ್ಕೆ ಬಂದು `ನೀಮಗೆ ಕೊಡಬೇಕಿದ್ದ ಬಾಕಿ ಒಂದು ಲಕ್ಷ ರೂಪಾಯಿ ತಂದಿದ್ದು, ಅದನ್ನು ಪಡೆದುಕೊಂಡು ಉಳಿದ ಬಂಗಾರ ನೀಡಿ' ಎಂದು ತಿಳಿಸಿದ್ದಾನೆ. ತಕ್ಷಣ ಜಾಗೃ ತನಾದ ಯುವಕನು `ಯಾವ ಬಂಗಾರ? ಯಾವ ಹಣ? ನೀವಾರೊ ನನಗೆ ಗೊತ್ತಿಲ್ಲ' ಎಂದು ಹೇಳಿ ಮೊಬೈಲ್ ಸ್ವಿಚ್ಚಾಫ್ ಮಾಡಿದ್ದಾನೆ.

ನಂತರ ಬಾಲ ಕೃಷ್ಣನು ನಾಗರಳ್ಳಿ ಗ್ರಾಮದ ಮುಖಂಡ ರನ್ನು ಭೇಟಿಯಾಗಿ ನಡದ ಘಟನೆಯ ನ್ನೆಲ್ಲ ವಿವರಿಸಿದ್ದಾನೆ. ಗ್ರಾಮದಲ್ಲಿರು ವವರನ್ನು ವಿಚಾರಿಸಲಾಗಿ ಗ್ರಾಮದಲ್ಲಿ ರಾಜು ಕುರಿ ಎಂಬ ಯುವಕನೇ ಇಲ್ಲ ಎಂದು ತಿಳಿದು ಬಂದಿದ್ದರಿಂದ ಬಾಲ ಕೃಷ್ಣನು ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಮೈಸೂರಿಗೆ ತೆರಳಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆ ಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.