ADVERTISEMENT

ನರೇಗಾ-ಸಾವಿರಾರು ಕೋಟಿ ಅಪವ್ಯಯ: ಎಚ್ಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 5:05 IST
Last Updated 24 ಜೂನ್ 2013, 5:05 IST

ಗದಗ: ಬಡತನ ನಿರ್ಮೂಲನೆಗಾಗಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಪವ್ಯಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ವಕ್ಕಲಗೇರಿಯಲ್ಲಿ ಶನಿವಾರ ಕರ್ನಾಟಕ ಕುರುಬರ ಸಂಘ ಏರ್ಪಡಿಸಿದ್ದ ಹನಮಂತಪ್ಪ ವಾಸಪ್ಪ ಕುರಡಗಿ ಮೂರ್ತಿ ಅನಾವರಣ ಮತ್ತು ಎಚ್.ವಿ.ಕುರುಡಗಿ ಪ್ರೌಢಶಾಲೆ ನಾಮಕರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಉದಾಹರಣೆ ಉದ್ಯೋಗ ಖಾತ್ರಿಯಲ್ಲಿ ಕಳೆದ ಮೂರು ವರ್ಷದಲ್ಲಿ ಫೆಬ್ರುವರಿ ಮತ್ತು ಮಾರ್ಚ್‌ಗಳಲ್ಲಿ ರೂ. 500-ರೂ. 600 ಕೋಟಿ ಖರ್ಚು ತೋರಿಸಲಾಗಿದೆ. ಮಾರ್ಚ್‌ನಲ್ಲಿ 600 ಕೋಟಿ ಖರ್ಚು ತೋರಿಸಿದರೆ, ಏಪ್ರಿಲ್‌ನಲ್ಲಿ ರೂ. 10 ಲಕ್ಷ ಕೆಲಸ ಮಾಡಿಸುತ್ತಾರೆ. ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಕೆಲಸ ಮಾಡುವುದಿಲ್ಲ. ಇದರಿಂದಾಗಿ ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಅಪವ್ಯಯವಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ನಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ಎಲ್ಲ ವರ್ಗದವರಿಗೂ ಅನುಕೂಲ ಕಲ್ಪಿಸಿಕೊಡಲಾಯಿತು. ಗ್ರಾಮಕ್ಕೆ ಅವಶ್ಯಕತೆ ಇರುವುದನ್ನು ಬಿಟ್ಟು ಬಿಡುತ್ತಾರೆ. ಚರಂಡಿ, ರಸ್ತೆ, ಸ್ವಚ್ಛ ಗ್ರಾಮ ಕೇಳುತ್ತಾರೆ. ಕೋಟ್ಯಂತರ ರೂಪಾಯಿ ಅನುದಾನ ಬಂದರು ಸ್ಮಶಾನ ಅಭಿವೃದ್ಧಿ ಮಾಡುವುದಿಲ್ಲ ಎಂದು ನುಡಿದರು.

ಸಂಸದ ವಿಶ್ವನಾಥ್ ಇರುವ ಕಡೆ ವಿವಾದ ಸೃಷ್ಟಿಸುತ್ತಾರೆ, ಇಲ್ಲ ಇತಿಹಾಸ ನಿರ್ಮಿಸುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ ಸಚಿವರು, ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಸೇರಿದಂತೆ ಬೇಡಿಕೆಗಳ ಪಟ್ಟಿಯನ್ನೇ ವಿಶ್ವನಾಥ ನೀಡಿದ್ದಾರೆ. ಅದನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಪುತ್ಥಳಿ ರಾಜಕಾರಣ ಸಲ್ಲ: ಮೈಸೂರು ಸಂಸದ ಎಚ್.ವಿಶ್ವನಾಥ ಮಾತನಾಡಿ, ಜಾತಿ, ಧರ್ಮ ಮತ್ತು ಪಕ್ಷದ ಜತೆಗೆ ಪುತ್ಥಳಿ ರಾಜಕಾರಣ ನಡೆಯುತ್ತಿದೆ. ಅಂಬೇಡ್ಕರ್ ಪುತ್ಥಳಿ ಕಾಯಲು 24 ಗಂಟೆ ಪೊಲೀಸ್ ವ್ಯಾನ್ ನಿಯೋಜಿಸಲಾಗಿದೆ. ಪುತ್ಥಳಿ ಕಾಯಲು ಪೊಲೀಸರನ್ನು ನಿಯೋಜಿಸಬೇಕಾದ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ. ಮಹಾಭಾರತದಲ್ಲಿ ಶಿಖಂಡಿ ರಾಜಕಾರಣ ಮಾಡಿದ. ಈಗ ನಗರದಲ್ಲಿ ರಾಜಕಾರಣ ನಡೆಯುತ್ತಿದೆ. ದುಷ್ಕರ್ಮಿಗಳು ಗಲಾಟೆ ಎಬ್ಬಿಸುತ್ತಾರೆ. ಅದನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದ್ದರಿಂದ ಪುತ್ಥಳಿ ರಾಜಕಾರಣ ಸಲ್ಲ ಎಂದು ಹೇಳಿದರು.

ನರಗುಂದ ಶಾಸಕ ಬಿ.ಆರ್.ಯಾವಗಲ್ ಅವರು ಶಾಲೆಯ ನಾಮಫಲಕ ಅನಾವರಣ ಮಾಡಿದರು. ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಕುರುಬರ ಪತ್ತಿನ ಬ್ಯಾಂಕ್ ಆರಂಭಿಸಲು ಶ್ರಮಿಸಿದ ಸಾಧಕರನ್ನು ಸಂಸದ ವಿಶ್ವನಾಥ ಮತ್ತು ಸಚಿವ ಎಚ್.ಕೆ.ಪಾಟೀಲ ಅವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಶಾಸಕರಾದ ರಾಮಕೃಷ್ಣ ದೊಡ್ಡಮನಿ, ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಎಪಿಎಂಸಿ ಅಧ್ಯಕ್ಷ ಡಿ.ಆರ್.ಪಾಟೀಲ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ಎಸ್.ಎನ್.ಪಾಟೀಲ, ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಬಿ.ಎಫ್.ದಂಡಿನ, ಜಿಲ್ಲಾ ಕುರುಬರ ಸಂಘ ಫಕ್ಕೀರಪ್ಪ ಹೆಬಸೂರ, ವಸಂತಗೌಡ ಪಾಟೀಲ, ಸತೀಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.