ಗಜೇಂದ್ರಗಡ: ‘ಹುಟ್ಟಿನಿಂದಲೇ ಕುರುಡುತನವಿದ್ದವರ ಸ್ಥಿತಿ ಒಂದು ವಿಧವಾದರೆ, ಹತ್ತಾರು ವರ್ಷಗಳು ಯಾವುದೇ ತೊಂದರೆ ಇಲ್ಲದೇ ಸಾಮಾನ್ಯವಾಗಿ ಎಲ್ಲವನ್ನೂ ನೋಡಿ, ಇದ್ದಕ್ಕಿದ್ದಂತೆ ನಮ್ಮ ಕಣ್ಣು ಕತ್ತಲಾದರೆ, ಅದು ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಕುಗ್ಗಿಸುತ್ತದೆ’ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಹಾಲಕೆರಿ ಅನ್ನದಾನೇಶ್ವರ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಧತ್ವ ನಿಯಂತ್ರಣಕ್ಕಾಗಿ ಗುಣವಾಗಬಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಮತ್ತು ಸಾರ್ವಜನಿಕರಲ್ಲಿ ರೋಗ ತಡೆಗಟ್ಟುವ ವಿಧಾನಗಳ ಕುರಿತು ಪ್ರಸಾರ ಮಾಡುವ ಮೂಲಕ ಕಣ್ಣು ಸಂಬಂಧಿತ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಬೇಕು’ ಎಂದರು.
‘ಭಾರತದಲ್ಲಿ ಅಂಧತ್ವಕ್ಕೆ ಕಣ್ಣಿನ ಪೊರೆಯೇ ಪ್ರಮುಖ ಕಾರಣವಾಗಿದೆ. ಕಣ್ಣಿನ ಪಾರದರ್ಶಕ ಮಸೂರದ ಅಪಾರದರ್ಶಕತೆಯೇ ಕಣ್ಣಿನ ಪೊರೆ. ಒಂದು ವೇಳೆ ಅದು ಮಸಕಾದರೆ ಚಿತ್ರ ರಚನೆಗಾಗಿ ಮಸೂರದ ಮೂಲಕ ಹಾಯ್ದು ರೆಟಿನಾ ತಲುಪುವ ಬೆಳಕಿಗೆ ಅಡಚಣೆ ಉಂಟಾಗುತ್ತದೆ’ ಎಂದರು.
‘ಕಣ್ಣಿನ ಪೊರೆ ಉಂಟಾಗಲು ಹೆಚ್ಚುತ್ತಿರುವ ವಯಸ್ಸು, ಕಣ್ಣಿನ ಗಾಯ, ಉರಿಯೂತ, ಮಧುಮೇಹ ಮತ್ತು ಸ್ಟೀರಾಯ್ಡ್‌ಗಳ ದೀರ್ಘಕಾಲಿಕ ಬಳಕೆ, ಮಕ್ಕಳಿಗೆ ಹುಟ್ಟಿದಾಗಿನಿಂದಲೂ ಕಣ್ಣಿನ ಪೊರೆ ಬರಲು ಸಾಧ್ಯವಿದೆ. ಇದಕ್ಕೆ ಗರ್ಭಿಣಿಯಾಗಿರುವ ಸಮಯದಲ್ಲಿ ತಾಯಿಯಿಂದ ಬಂದಿರಬಹುದಾದ ಸೋಂಕು ಸೇರಿದಂತೆ ಹಲವಾರು ಕಾರಣಗಳಿವೆ’ ಎಂದರು.
ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಐ.ಎಂ.ಎ ಅಧ್ಯಕ್ಷ ಗೋಜನೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಬಿ.ಚನ್ನಶೆಟ್ಟಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ಎಸ್.ಭಜಂತ್ರಿ, ತಾಲ್ಲೂಕು ಐ.ಎಂ.ಎ ಅಧ್ಯಕ್ಷ ಡಾ.ಜಿ.ಕೆ.ಕಾಳೆ, ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮಾಡಲಗೇರಿ, ನಿಂಗಪ್ಪ ಕಾಶಪ್ಪನವರ, ಅನ್ನದಾನಿ ಬೆಲ್ಲದ, ಹಿರಿಯ ಆರೋಗ್ಯ ಸಹಾಯಕ ವಿ.ಡಿ.ಬೆನ್ನೂರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.